ಬಿಎಸ್‌ವೈ ಪೋಕ್ಸೋ ಪ್ರಕರಣ: ಅಹಿತಕರ ಕೃತ್ಯದಲ್ಲಿ ಸಿಲುಕುವ ಮುನ್ನ ಅರಿವಿರಬೇಕಿತ್ತಲ್ಲವೇ ಎಂದ ಹೈಕೋರ್ಟ್‌

“ಬಿಎಸ್‌ವೈ ಹಿರಿಯ ರಾಜಕಾರಣಿಯಾಗಿದ್ದು, ಮೇಲಿಂದ ಮೇಲೆ ಅವರು ಪ್ರವಾಸ ಕೈಗೊಳ್ಳಬೇಕಿದೆ. ಪ್ರತಿ ಕ್ಷಣ ಮತ್ತು ಪ್ರತಿ ನಿಮಿಷಕ್ಕೂ ಅನುಮತಿ ಕೋರಲು ಬಿಎಸ್‌ವೈ ವಿಚಾರಣಾಧೀನ ನ್ಯಾಯಾಲಯಕ್ಕೆ ಹೋಗಲಾಗದು..” ಎಂದ ಹಿರಿಯ ವಕೀಲ ಸಿ ವಿ ನಾಗೇಶ್‌.
B S Yediyurappa and Karnataka HC
B S Yediyurappa and Karnataka HC
Published on

“ಪೋಕ್ಸೊದಂಥ ಅಹಿತಕರ ಪ್ರಕರಣಗಳಲ್ಲಿ ಸಿಲುಕಿಕೊಳ್ಳುವುದಕ್ಕೂ ಮುನ್ನ ತಮ್ಮ ಕೆಲಸಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪರಂಥವರಿಗೆ ಅರಿವಿರಬೇಕಿತ್ತು” ಎಂದು ಕರ್ನಾಟಕ ಹೈಕೋರ್ಟ್‌ ಸೋಮವಾರ ಮೌಖಿಕವಾಗಿ ಹೇಳಿತು.

ಪೋಕ್ಸೊ ಪ್ರಕರಣದಲ್ಲಿ ತಮ್ಮ ವಿರುದ್ಧ ವಿಶೇಷ ನ್ಯಾಯಾಲಯದ ಸಂಜ್ಞೇಯ ಪರಿಗಣನೆ ರದ್ದತಿ, ಮತ್ತೆ ಹೊಸದಾಗಿ ಸಂಜ್ಞೇ ಪರಿಗಣಿಸುವಂತೆ ಹೊರಡಿಸಿದ್ದ ಆದೇಶದಲ್ಲಿ ಸ್ಪಷ್ಟನೆ ಹಾಗೂ ನಿರೀಕ್ಷಣಾ ಜಾಮೀನು ಷರತ್ತುಗಳಲ್ಲಿ ಸಡಿಲಿಕೆ ಕೋರಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಸಲ್ಲಿಸಿರುವ ಮಧ್ಯಂತರ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರ ಏಕಸದಸ್ಯ ಪೀಠ ನಡೆಸಿತು.

ಯಡಿಯೂರಪ್ಪ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಬಿಎಸ್‌ವೈ ಹಿರಿಯ ರಾಜಕಾರಣಿಯಾಗಿದ್ದು, ಮೇಲಿಂದ ಮೇಲೆ ಅವರು ಪ್ರವಾಸಕೈಗೊಳ್ಳಬೇಕಿದೆ. ಪ್ರತಿ ಕ್ಷಣ ಮತ್ತು ಪ್ರತಿ ನಿಮಿಷಕ್ಕೂ ಅನುಮತಿ ಕೋರಲು ಬಿಎಸ್‌ವೈ ವಿಚಾರಣಾಧೀನ ನ್ಯಾಯಾಲಯಕ್ಕೆ ಹೋಗಲಾಗದು.. ರಾಜಕೀಯ ಪಕ್ಷವೊಂದರ ಹಿರಿಯ ರಾಜಕಾರಣಯಾಗಿರುವ ಅವರು ರಾಜ್ಯ ಮತ್ತು ದೇಶಾದ್ಯಂತ ಪ್ರವಾಸ ಕೈಗೊಳ್ಳಬೇಕಿದೆ” ಎಂದರು.

ಇದಕ್ಕೆ ಪೀಠವು ಯಡಿಯೂರಪ್ಪ ಅವರು ಇದನ್ನು ಮೊದಲೇ ಯೋಚಿಸಬೇಕಿತ್ತು. ಹಿರಿಯ ರಾಜಕೀಯ ನಾಯಕರು ಇಂಥವೆಲ್ಲವನ್ನು ಮೀರಿ ನಡೆಯಬೇಕು. “ಹಿರಿಯ ರಾಜಕಾರಣಿಯನ್ನು ಗೌರವಿಸುತ್ತಲೇ, ಇಂಥ ಅಹಿತರಕರ ಘಟನೆಗಳಲ್ಲಿ ಭಾಗಿಯಾಗುವುದಕ್ಕೂ ಮುನ್ನ ಇದರ ಬಗ್ಗೆ ಅವರಿಗೆ ಅರಿವಿರಬೇಕಿತ್ತು” ಎಂದಿತು.

ಆಗ ನಾಗೇಶ್‌ ಅವರು “ಯಡಿಯೂರಪ್ಪ ವಿರುದ್ಧ ಮಾಡಿರುವ ಆರೋಪ ಸುಳ್ಳು. ಆರೋಪದಲ್ಲಿ ಸ್ವಲ್ಪವಾದರೂ ಹುರುಳಿರಬೇಕು” ಎಂದು ಸಮಜಾಯಿಷಿ ನೀಡಲು ಮುಂದಾದರು.

Also Read
ಬಿಎಸ್‌ವೈ ವಿರುದ್ಧದ ಪೋಕ್ಸೊ ಪ್ರಕರಣ: ಮಧ್ಯಂತರ ಆದೇಶ ವಿಸ್ತರಣೆ; ಸೆಪ್ಟೆಂಬರ್ 27ಕ್ಕೆ ವಿಚಾರಣೆ ಮುಂದೂಡಿಕೆ

ಆಗ ಪೀಠವು ಬಿಎಸ್‌ವೈ ಮೇಲಿನ ಪ್ರವಾಸ ನಿರ್ಬಂಧದಲ್ಲಿ ಸಡಿಲಿಕೆ ಮಾಡಬಹುದೇ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತು. “ಮುಂದಿನ ಒಂದು ತಿಂಗಳು ತಾವೆಲ್ಲೂ (ಬಿಎಸ್‌ವೈ) ಹೋಗುವುದಿಲ್ಲ. ಏಪ್ರಿಲ್‌ 21ರ ನಂತರ ವಿಚಾರಣೆ ನಡೆಸಲಾಗುವುದು. ಆ ವೇಳೆಗೆ ಅರ್ಜಿ ವಿಚಾರಣೆಗೆ ಪಟ್ಟಿ ಮಾಡಲಾಗುವುದು. ಪ್ರಾಸಿಕ್ಯೂಷನ್‌ ಆಕ್ಷೇಪಣೆ ಸಲ್ಲಿಸಬಹುದು. ಅಲ್ಲಿಯವರೆಗೆ ಯಡಿಯೂರಪ್ಪ ಅವರಿಗೆ ವಿಧಿಸಲಾಗಿರುವ ಪ್ರವಾಸ ನಿರ್ಬಂಧ ಮುಂದುವರಿಯಲಿದೆ” ಎಂದು ನ್ಯಾಯಾಲಯ ಆದೇಶಿಸಿತು.

Kannada Bar & Bench
kannada.barandbench.com