[ನೀವೆಂಥಾ ಡಾಕ್ಟರ್‌] ಅಕ್ರಮವಾಗಿ ಗರ್ಭಪಾತ ಮಾಡಿಸಿದ ವೈದ್ಯೆಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಹೈಕೋರ್ಟ್‌

“ನಿಮಗೆ 70 ಅಥವಾ 700 ವರ್ಷವೋ ನಮಗೆ ಬೇಕಿಲ್ಲ. ನೀವು ನಡೆದುಕೊಂಡಿರುವ ರೀತಿ ಕಳವಳಕಾರಿ. ಸಂತ್ರಸ್ತೆ ಗರ್ಭಧರಿಸಿ ನಿಮ್ಮ ಬಳಿ ಬಂದಿದ್ದರೂ ನೀವು ಋತುಚಕ್ರದಲ್ಲಿ ವ್ಯತ್ಯಾಸಕ್ಕೆ ಬಂದಿದ್ದರು ಎನ್ನುತ್ತಿದ್ದೀರಿ?” ಎಂದು ಅತೃಪ್ತಿ ದಾಖಲಿಸಿದ ಪೀಠ.
Doctor
Doctor
Published on

ಪ್ರೌಢಶಾಲೆಯ ವಿದ್ಯಾರ್ಥಿನಿಗೆ ಕಾನೂನುಬಾಹಿರವಾಗಿ ಗರ್ಭಪಾತ ಮಾಡಿಸಿದ ಆರೋಪ ಎದುರಿಸುತ್ತಿರುವ 70 ವರ್ಷ ವೈದ್ಯೆಗೆ “ನೀವೆಂಥಾ ವೈದ್ಯೆ” ಎಂದು ಕಿಡಿಕಾರಿರುವ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.

ಚಿತ್ರದುರ್ಗದ ಶ್ರೀನಿವಾಸ ನರ್ಸಿಂಗ್‌ ಹೋಮ್‌ನ ವೈದ್ಯೆ ಡಾ ಶಂಕರಲಕ್ಷ್ಮಿ ಬಿ ಅವರ ನಡತೆಯ ಬಗ್ಗೆ ನ್ಯಾಯಮೂರ್ತಿ ಆರ್‌ ನಟರಾಜ್‌ ಅವರ ಏಕಸದಸ್ಯ ಪೀಠವು ಕಳವಳ ವ್ಯಕ್ತಪಡಿಸಿದೆ.  

Justice R Nataraj
Justice R Nataraj

“ನೀವು ಘನತೆಯುತ ವೈದ್ಯರು ಎಂದು ಹೇಳಿಕೊಳ್ಳುತ್ತೀರಿ. ಸಂತ್ರಸ್ತ ಬಾಲಕಿಯು ನಿಮ್ಮ ಮುಂದೆ ಗರ್ಭಿಣಿಯಾಗಿ ಬಂದಿದ್ದಾಳೆ. ಆದರೆ, ನೀವು, ಆಕೆ ಋತುಚಕ್ರದಲ್ಲಿ ವ್ಯತ್ಯಾಸಕ್ಕಾಗಿ ಚಿಕಿತ್ಸೆ ಪಡೆಯಲು ಬಂದಿದ್ದಳು ಎನ್ನುತ್ತಿದ್ದೀರಿ. ಇದರ ತನಿಖೆಯಾಗಬೇಕಿದೆ. ಇಂಥ ಪ್ರಕರಣಗಳನ್ನು ಸುಲಭವಾಗಿವಾಗಿ ಪರಿಗಣಿಸಲಾಗದು. ನೀವೆಂಥಾ ವೈದ್ಯೆ” ಎಂದು ನ್ಯಾಯಾಲಯವು ಕಿಡಿಕಾರಿತು.

ವೈದ್ಯೆಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಎಸ್‌ ಶ್ಯಾಮ್‌ಸುಂದರ್‌ ಅವರು “ಗುಪ್ತಾಂಗದಲ್ಲಿ ರಕ್ತಸ್ರಾವ ಮತ್ತು ಮುಟ್ಟಿನಲ್ಲಿ ವ್ಯತ್ಯಾಸವಾಗಿದೆ ಎಂದು ಹೇಳಿ ಬಾಲಕಿಯನ್ನು ನಮ್ಮ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಗೆ ಬರುವ ವೇಳೆಗೆ ಗರ್ಭಪಾತವಾಗಿತ್ತು. ವೈದ್ಯೆಯು ಚಿಕಿತ್ಸೆ ಮಾತ್ರ ನೀಡಿದ್ದಾರೆ” ಎಂದರು.

“ಡಾ. ಶಂಕರಲಕ್ಷ್ಮಿ ಅವರು 70 ವರ್ಷಗಳಿಂದ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದು, ಅಕ್ರಮವಾಗಿ ಗರ್ಭಪಾತ ಮಾಡಿಸಿಲ್ಲ” ಎಂದರು. ಆಗ ಪೀಠವು “ನಿಮಗೆ 70 ವರ್ಷವೋ ಅಥವಾ 700 ವರ್ಷವೋ ನಮಗೆ ಬೇಕಿಲ್ಲ. ನೀವು ನಡೆದುಕೊಂಡಿರುವ ರೀತಿ ಕಳವಳಕಾರಿಯಾಗಿದೆ. ಸಂತ್ರಸ್ತ ಬಾಲಕಿಯು ಗರ್ಭಧರಿಸಿ ನಿಮ್ಮ ಬಳಿ ಬಂದಿದ್ದರೂ ನೀವು ಋತುಚಕ್ರದಲ್ಲಿ ವ್ಯತ್ಯಾಸಕ್ಕೆ ಬಂದಿದ್ದರು ಎನ್ನುತ್ತಿದ್ದೀರಿ?” ಎಂದಿತು.

ಆಗ ಶ್ಯಾಮ್‌ಸುಂದರ್‌ ಅವರು “ವೈದ್ಯೆಯು ತನಿಖೆಗೆ ಸಹಕರಿಸಲಿದ್ದಾರೆ ಮತ್ತು ಆಸ್ಪತ್ರೆಯಲ್ಲಿನ ಸಿಸಿಟಿವಿ ದೃಶ್ಯಾವಳಿಯನ್ನು ಸಲ್ಲಿಸಲಾಗುವುದು. ಅಕ್ರಮವಾಗಿ ಗರ್ಭಪಾತ ಮಾಡಿಸಿದ್ದಾರೆ ಎಂಬ ಆರೋಪದ ಮೇಲೆ ಪೋಕ್ಸೊ ಕಾಯಿದೆ ಅಡಿ ಕಸ್ಟಡಿಗೆ ಪಡೆದು ವೈದ್ಯೆಯನ್ನು ತನಿಖೆ ನಡೆಸುವ ಅಗತ್ಯವಿಲ್ಲ” ಎಂದರು.

ವಿಚಾರಣೆಯ ಒಂದು ಹಂತದಲ್ಲಿ ಪೀಠವು “ನೀವು ಸ್ತ್ರೀರೋಗ ತಜ್ಞೆಯ ಬಳಿಗೆ ಹೋದ ತಕ್ಷಣ ಮೊದಲಿಗೆ ಅವರು ಕೇಳುವುದು ಕೊನೆಯ ಬಾರಿಗೆ ಯಾವಾಗ ಮುಟ್ಟಾಗಿದ್ದಿರಿ” ಎಂದಿತು.

ಪ್ರೌಢಶಾಲೆಯ ವಿದ್ಯಾರ್ಥಿನಿಯನ್ನು ಶಿಕ್ಷಕ ರಾಜಣ್ಣ ಎಂಬಾತ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಕಾಲ ಕಳೆದಂತೆ ವಿದ್ಯಾರ್ಥಿನಿಯ ದೈಹಿಕ ಬದಲಾವಣೆಯನ್ನು ಮಹಿಳಾ ಶಿಕ್ಷಕಿಯೊಬ್ಬರು ಪ್ರಶ್ನಿಸಿದ್ದು, ಆಕೆ ಘಟನೆಯ ಬಗ್ಗೆ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಮಹಿಳಾ ಶಿಕ್ಷೆಯು ಕಿಟ್‌ ನೆರವಿನಿಂದ ಆಕೆಯ ಮೂತ್ರ ಪರೀಕ್ಷೆ ಮಾಡಿದ್ದರು. ಇದರಲ್ಲಿ ವಿದ್ಯಾರ್ಥಿನಿ ಗರ್ಭಧರಿಸಿದ್ದು, ಪತ್ತೆಯಾಗಿತ್ತು. ವಿಚಾರವನ್ನು ಶಿಕ್ಷಕರು ಸೇರಿ ಸಂತ್ರಸ್ತೆಯ ಗಮನಕ್ಕೆ ತಂದಿದ್ದರು. ನಂತರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸಲಾಗಿತ್ತು ಎಂದು ಆರೋಪಿಸಲಾಗಿದೆ.

Kannada Bar & Bench
kannada.barandbench.com