ಭವಾನಿ ರೇವಣ್ಣ ಜಾಮೀನು ರದ್ದತಿ ಕೋರಿಕೆ: ಕರ್ನಾಟಕ ಸರ್ಕಾರದ ಮನವಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿದ್ದ ಸಂತ್ರಸ್ತೆಯೊಬ್ಬರನ್ನು ಅಪಹರಿಸಿದ ಆರೋಪ ಪ್ರಜ್ವಲ್ ಅವರ ತಾಯಿ ಭವಾನಿ ರೇವಣ್ಣ ಅವರ ಮೇಲಿದೆ.
Bhavani Revanna and Supreme Court
Bhavani Revanna and Supreme Court

ಪ್ರಜ್ವಲ್ ರೇವಣ್ಣ ಆರೋಪಿತರಾಗಿರುವ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅತ್ಯಾಚಾರ ಸಂತ್ರಸ್ತೆಯೊಬ್ಬರನ್ನು ಅಪಹರಿಸಿದ ಆರೋಪ ಎದುರಿಸುತ್ತಿರುವ ಭವಾನಿ ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ [ಕರ್ನಾಟಕ ಸರ್ಕಾರ ಮತ್ತು ಭವಾನಿ ರೇವಣ್ಣ ನಡುವಣ ಪ್ರಕರಣ].

ಭವಾನಿ ರೇವಣ್ಣ ಅವರಿಗೆ ನೀಡಲಾದ ಜಾಮೀನು ರದ್ದುಗೊಳಿಸಲು ಯಾವುದೇ ಕಾರಣವಿದೆಯೇ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಅಂತಿಮವಾಗಿ ಭವಾನಿ ಅವರಿಗೆ ನೋಟಿಸ್‌ ನೀಡಿತು. ಆದರೆ ಈ ವಿಚಾರವನ್ನು ರಾಜಕೀಯಗೊಳಿಸದಂತೆ ಕಕ್ಷಿದಾರರಿಗೆ ಸೂಚಿಸಿತು.  

Also Read
ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ರಾಜ್ಯ ಸರ್ಕಾರ

ಭವಾನಿ ರೇವಣ್ಣ ಅವರನ್ನು ಬಂಧಿಸದಂತೆ ಹೈಕೋರ್ಟ್ ರಕ್ಷಣೆ ನೀಡಿರುವುದು ಸರಿ ಇದೆಯೇ ಎಂಬುದಕ್ಕೆ ಸೀಮಿತವಾಗಿ ತನ್ನ ಮುಂದಿರುವ ಪ್ರಶ್ನೆ ಇದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

"ಕಾನೂನು ತನ್ನದೇ ಆದ ಪರಿಣಾಮಗಳನ್ನು ಹೊಂದಿರುತ್ತದೆ. (ಜಾಮನು ದೊರೆತಿದೆ ಎಂದರೆ) ಭವಾನಿ ಅವರು ಬಿಡುಗಡೆಯಾದಂತೆ ಅಲ್ಲ. ಅವರು ವಿಚಾರಣೆ ಎದುರಿಸಬೇಕಾಗುತ್ತದೆ. ಆಕೆಯನ್ನು ಬಂಧಿಸದಂತೆ ರಕ್ಷಣೆ ನೀಡುವ  ಹೈಕೋರ್ಟ್ ನಿರ್ಧಾರ ಸಮರ್ಥನೀಯವೇ ಎಂಬುದನ್ನು ಪರಿಶೀಲಿಸಬೇಕಿದೆ… ಪ್ರಕರಣವನ್ನು ರಾಜಕೀಯಗೊಳಿಸಬಾರದು" ಎಂದು ನ್ಯಾಯಾಲಯ ನುಡಿದಿದೆ.  

ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆ ದೂರು ನೀಡದಂತೆ ತಡೆಯುವುದಕ್ಕಾಗಿ ಆಕೆಯನ್ನು ಅಪಹರಿಸಿದ ಆರೋಪ  ಭವಾನಿ ರೇವಣ್ಣ ಅವರ ಮೇಲಿದೆ.  ವಿವಿಧ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅದನ್ನು ಚಿತ್ರೀಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಜ್ವಲ್‌ ಪ್ರಸ್ತುತ ಸೆರೆವಾಸ ಅನುಭವಿಸುತ್ತಿದ್ದಾರೆ.

ಲೈಂಗಿಕ ದೌರ್ಜನ್ಯ ನಡೆಸಿರುವ 2,900ಕ್ಕೂ ಹೆಚ್ಚು ವೀಡಿಯೊಗಳಿರುವ ಪೆನ್‌ಡ್ರೈವ್‌ಗಳನ್ನು ಕಳೆದ ಏಪ್ರಿಲ್‌ನಲ್ಲಿ ರಾಜ್ಯದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಹಂಚಲಾಗಿತ್ತು. ಪ್ರಜ್ವಲ್‌ ರೇವಣ್ಣ ಜರ್ಮನಿಗೆ ಪಲಾಯನ ಮಾಡಿದ್ದರು ಎನ್ನಲಾಗಿತ್ತು. ಮೇ 31 ರಂದು ಭಾರತಕ್ಕೆ ಮರಳಿದ ಅವರನ್ನು ಬಂಧಿಸಲಾಗಿತ್ತು. ಪ್ರಜ್ವಲ್‌ ತಂದೆ ಮಾಜಿ ಸಚಿವ ರೇವಣ್ಣ ಹಾಗೂ ಅವರ ಪತ್ನಿ ಭವಾನಿ ಅವರು ಪ್ರಜ್ವಲ್‌ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯನ್ನು ಅಪಹರಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.

Also Read
ಸಂತ್ರಸ್ತೆ ಅಪಹರಣ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ ಕದತಟ್ಟಿದ ಭವಾನಿ ರೇವಣ್ಣ

ಭವಾನಿ ರೇವಣ್ಣ ಅವರು ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಕಳೆದ ತಿಂಗಳು ಅಭಿಪ್ರಾಯಪಟ್ಟಿದ್ದ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

ಭಾರತದಲ್ಲಿ ಕುಟುಂಬದ ಕೇಂದ್ರ ಬಿಂದುಗಳಾಗಿರುವ ಮಹಿಳೆಯರ ಅನಗತ್ಯ ಬಂಧನ ತಪ್ಪಿಸಬೇಕು ಎಂದು ಆದೇಶದಲ್ಲಿ ಹೈಕೋರ್ಟ್‌ ತಿಳಿಸಿತ್ತು. ಆದೇಶವನ್ನು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು ವಕೀಲ ವಿ ಎನ್ ರಘುಪತಿ ಅವರ ಮೂಲಕ ಮೇಲ್ಮನವಿ ಸಲ್ಲಿಸಲಾಗಿದೆ.

ಬುಧವಾರ ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್  "ಇದು ಅತ್ಯಂತ ದುರದೃಷ್ಟಕರ. ವಿಚಾರಣಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಏಕೆ ತಿರಸ್ಕರಿಸಿದೆ ಎಂಬುದನ್ನು ಹೈಕೋರ್ಟ್ ಗಣನೆಗೆ ತೆಗೆದುಕೊಂಡಿಲ್ಲ... ಇದು ಖಚಿತವಾಗಿ ಬೆದರಿಕೆಯ ಪ್ರಕರಣವಾಗಿದೆ. ಭವಾನಿ ಅವರು ಸಾಕ್ಷಿಯನ್ನು ಸೆರೆಯಲ್ಲಿ ಇರಿಸಿದ್ದರು" ಎಂದರು.

Also Read
ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದ ಭವಾನಿ ರೇವಣ್ಣ

ಆರೋಪಗಳು ಗಂಭೀರವಾಗಿದ್ದು ಭವಾನಿ ರೇವಣ್ಣ ಅವರು ವಿಚಾರಣೆ ಎದುರಿಸಬೇಕಿದೆ ಎಂದ ಪೀಠ, ಜಾಮೀನು ರದ್ದುಗೊಳಿಸಲು ಏನಾದರೂ ಕಾರಣವಿದೆಯೇ ಎಂದು ಪ್ರಶ್ನಿಸಿತು.

“ನಾವು ಪ್ರಕರಣದಲ್ಲಿ ಭವಾನಿ ಅವರ ಮಗನ ಪಾತ್ರದ ಕುರಿತು ಮಾತನಾಡುತ್ತಿಲ್ಲ ಬದಲಿಗೆ ಅಪಹರಣ ನಡೆದಿರುವುದನ್ನು ಪ್ರಸ್ತಾಪಿಸುತ್ತಿದ್ದೇವೆ. ಸಂತ್ರಸ್ತೆಯನ್ನು ಸೆರೆಯಲ್ಲಿರಿಸಲಾಗಿತ್ತು ಮತ್ತು ಹೇಳಿಕೆಗಳನ್ನು ನೀಡಲು ಹಣ ನೀಡಲಾಗಿತ್ತು. ಭವಾನಿಯವರು ಆ ದಿನ ಸಿಟ್ಟಿನಿಂದ ಸಾಕ್ಷಿಯನ್ನು ನಿಂದಿಸಿದರು ಎಂದು ತಿಳಿದುಬಂದಿದೆ” ಎಂದು ಸಿಬಲ್‌ ವಿವರಿಸಿದರು.

ಅಂತಿಮವಾಗಿ ನ್ಯಾಯಾಲಯವು ಭವಾನಿ ಅವರ ಪ್ರತಿಕ್ರಿಯೆ ಕೇಳಿ ನೋಟಿಸ್‌ ನೀಡಿ ಪೀಠ ಪ್ರಕರಣವನ್ನು ಮುಂದೂಡಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್‌ ಅವರು ಸಲ್ಲಿಸಿರುವ ಜಾಮೀನು ಅರ್ಜಿ ಕರ್ನಾಟಕ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು ಕಳೆದ ವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೋಟಿಸ್‌ ನೀಡಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಎಚ್ ಡಿ ರೇವಣ್ಣ ಅವರಿಗೆ ನೀಡಿರುವ ಜಾಮೀನು ರದ್ದುಗೊಳಿಸುವಂತೆ ಸಲ್ಲಿಸಿರುವ ಮನವಿಯ ವಿಚಾರಣೆ ಕೂಡ ಹೈಕೋರ್ಟ್‌ನಲ್ಲಿ ಬಾಕಿ ಇದೆ.

Kannada Bar & Bench
kannada.barandbench.com