ಜಾತ್ಯತೀತತೆ ಸಂವಿಧಾನದ ಪ್ರಮುಖ ಲಕ್ಷಣ ಎಂದು ಪರಿಗಣಿಸಲಾಗಿದ್ದು ಸಂವಿಧಾನದ ಪೀಠಿಕೆಯಲ್ಲಿರುವ "ಸಮಾಜವಾದಿ" ಮತ್ತು "ಜಾತ್ಯತೀತ" ಪದಗಳನ್ನು ಪಾಶ್ಚಾತ್ಯ ದೃಷ್ಟಿಕೋನದಿಂದ ನೋಡಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಸಂವಿಧಾನದ 42 ನೇ ತಿದ್ದುಪಡಿಯ ಮೂಲಕ ಪೀಠಿಕೆಗೆ ಸೇರಿಸಲಾದ ಪದಗಳು ಭಾರತೀಯ ಸಂದರ್ಭದಲ್ಲಿ ವಿಭಿನ್ನ ಅರ್ಥ ಹೊಂದಿರಬಹುದು ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಪಿ ವಿ ಸಂಜಯ್ ಕುಮಾರ್ ಅವರಿದ್ದ ಪೀಠ ಹೇಳಿದೆ.
ಸಮಾಜವಾದ ಎಂದರೆ ಎಲ್ಲರಿಗೂ ನ್ಯಾಯಯುತವಾದ ಅವಕಾಶ ಇರಬೇಕು ಎಂಬುದಾಗಿದ್ದು ಅದು ಸಮಾನತೆಯ ಪರಿಕಲ್ಪನೆ. ಅದನ್ನು ಪಾಶ್ಚಾತ್ಯ ಪರಿಕಲ್ಪನೆಯಲ್ಲಿ ನೋಡಬಾರದು. ಇದು ಕೆಲ ಭಿನ್ನ ಅರ್ಥಗಳನ್ನು ಹೊಂದಿರಬಹುದು. ಜಾತ್ಯತೀತತೆಯನ್ನೂ ಹೀಗೆಯೇ ನೋಡಬೇಕು” ಎಂದು ನ್ಯಾಯಾಲಯ ಹೇಳಿದೆ.
ಆದಾಗ್ಯೂ, 1976ರ ಪೀಠಿಕೆಯಲ್ಲಿ ಸೇರಿಸಲಾದ ಸಮಾಜವಾದಿ ಮತ್ತು ಜಾತ್ಯತೀತ ಎಂಬ ಎರಡು ಪದಗಳು 1949ರಲ್ಲಿ ರೂಪುಗೊಂಡ ಪೀಠಿಕೆಯ ದಿನಕ್ಕೆ ಹೊಂದುವುದಿಲ್ಲ ಎಂಬ ಅರ್ಜಿದಾರರಲ್ಲಿ ಒಬ್ಬರಾದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರ ವಾದವನ್ನು ಪರಿಶೀಲಿಸಲು ನ್ಯಾಯಾಲಯ ಅಂತಿಮವಾಗಿ ಒಪ್ಪಿಕೊಂಡಿತು.
ಪೀಠ ಕೇಂದ್ರ ಸರ್ಕಾರಕ್ಕೆ ಔಪಚಾರಿಕ ನೋಟಿಸ್ ನೀಡಿಲ್ಲವಾದರೂ ನವೆಂಬರ್‌ಗೆ ಪ್ರಕರಣ ಮುಂದೂಡಿತು.
ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯೊಂದರಲ್ಲಿ ರಾಜಕೀಯ ಪಕ್ಷಗಳು ನೋಂದಾಯಿಸಲು ಜಾತ್ಯತೀತತೆಯನ್ನು ಎತ್ತಿಹಿಡಿಯಲು ಪ್ರತಿಜ್ಞೆ ಮಾಡಬೇಕು ಎಂದು 1951ರ ಜನ ಪ್ರತಿನಿಧಿ ಕಾಯಿದೆ ಹೇಳುತ್ತದೆ. ಇದನ್ನು ರದ್ದುಗೊಳಿಸಬೇಕು ಎಂದು ಕೋರಲಾಗಿತ್ತು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ನಾಯಕ ಮತ್ತು ರಾಜ್ಯಸಭಾ ಸದಸ್ಯ ಬಿನೋಯ್ ವಿಶ್ವಂ ಅವರು ಮನವಿಯನ್ನು ವಿರೋಧಿಸಿದರು.
ಇಂದಿನ ವಾದ
ಅರ್ಜಿದಾರರಲ್ಲಿ ಒಬ್ಬರಾದ ವಕೀಲ ವಿಷ್ಣು ಶಂಕರ್ ಜೈನ್, ಅವರು 42ನೇ ತಿದ್ದುಪಡಿಯನ್ನು ಸಂಸತ್ತಿನಲ್ಲಿ ಎಂದಿಗೂ ಚರ್ಚಿಸಿಲ್ಲ ಮತ್ತು ಅದು ಸಂವಿಧಾನದ ಸಂಸ್ಥಾಪಕರು ಪ್ರತಿಪಾದಿಸಿದ ಕಲ್ಪನೆಗೆ ವಿರುದ್ಧ ಎಂದು ವಾದಿಸಿದರು.
ಆಗ "ಭಾರತ ಜಾತ್ಯತೀತವಾಗಿರುವುದು ನಿಮಗೆ ಇಷ್ಟವಿಲ್ಲವೇ?" ಎಂದು ನ್ಯಾ. ಖನ್ನಾ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜೈನ್ "ಭಾರತ ಜಾತ್ಯತೀತ ಅಲ್ಲ ಎಂದು ನಾವು ಹೇಳುತ್ತಿಲ್ಲ. ಈ ತಿದ್ದುಪಡಿಯನ್ನು ಪ್ರಶ್ನಿಸುತ್ತಿದ್ದೇವೆ" ಎಂದು ಜೈನ್ ಉತ್ತರಿಸಿದರು.
ಮತ್ತೊಬ್ಬ ಅರ್ಜಿದಾರರಾದ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು, ರಾಷ್ಟ್ರೀಯ ತುರ್ತುಪರಿಸ್ಥಿತಿ ಜಾರಿಯಲ್ಲಿದ್ದ ಸಮಯದಲ್ಲಿ ತಿದ್ದುಪಡಿ ಮಾಡಲಾಗಿತ್ತು ಎಂದು ವಾದಿಸಿದರು.
ಆದರೆ, ಸಂವಿಧಾನ ಶಿಲ್ಪಿಗಳು ಸದಾ ಭಾರತವನ್ನು ಜಾತ್ಯತೀತ ರಾಷ್ಟ್ರವಾಗಿ ರೂಪಿಸಿದ್ದಾರೆ ಎಂದು ನ್ಯಾಯಾಲಯ ಹೇಳಿತು. ಇದು ಸಂವಿಧಾನದ ಭಾಗ IIIರಲ್ಲಿರುವ ವಿವಿಧ ಮೂಲಭೂತ ಹಕ್ಕುಗಳ ವಿವರ ಸೇರಿದಂತೆ ಸಂವಿಧಾನದ ವಿವಿಧ ವಿಧಿಗಳಿಂದ ಸ್ಪಷ್ಟವಾಗಿದೆ. ಇದನ್ನು ಸುಪ್ರೀಂ ಕೋರ್ಟ್ ಕೂಡ ಬೇರೆ ಬೇರೆ ತೀರ್ಪುಗಳಲ್ಲಿ ಪುನರುಚ್ಚರಿಸಿದೆ ಎಂದು ಪೀಠ ಅರ್ಜಿದಾರರಿಗೆ ನೆನಪಿಸಿತು.
"...ನಿಮಗಾಗಿ ಕೆಲ ಪ್ರಕರಣಗಳನ್ನು ಉಲ್ಲೇಖಿಸಬಲ್ಲೆ. ಜಾತ್ಯತೀತತೆ ಚರ್ಚೆಯಾದಾಗ ಫ್ರೆಂಚ್ ಮಾದರಿಯೊಂದೇ ಲಭ್ಯವಿತ್ತು. ಜಾತ್ಯತೀತತೆಯ ವಿರುದ್ಧ ಹೋಗುವ ಶಾಸನಗಳನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ನೀವು ಸಂವಿಧಾನದ 25ನೇ ವಿಧಿಯನ್ನು ಗಮನಿಸಬಹುದು," ಎಂದು ನ್ಯಾ. ಖನ್ನಾ ತಿಳಿಸಿದರು.
25ನೇ ವಿಧಿಯನ್ನು ನೀವು ನೋಡಬಹುದು, ಆದರೆ ಕೇವಲ ಫ್ರೆಂಚ್ ಮಾದರಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ" ಎಂದು ನ್ಯಾ. ಖನ್ನಾ ತಿಳಿಸಿದರು.
"ಸಮಾಜವಾದಕ್ಕೆ ಸಂಬಂಧಿಸಿದಂತೆ ನಾವು ಪಾಶ್ಚಾತ್ಯ ಪರಿಕಲ್ಪನೆಯನ್ನು ಅನುಸರಿಸಿಲ್ಲ ಮತ್ತು ಅದಕ್ಕಾಗಿ ಖುಷಿಪಡುತ್ತೇವೆ” ಎಂದು ಇದೇ ವೇಳೆ ಅದು ತಿಳಿಸಿತು.
ಈ ಹಂತದಲ್ಲಿ "ಡಾ. ಬಿ ಆರ್ ಅಂಬೇಡ್ಕರ್ ಅವರು 'ಸಮಾಜವಾದ' ಪದ ಪರಿಚಯಿಸುವ ಅಂಶವನ್ನು ಖಂಡಿಸಿದ್ದಾರೆ. ಅದು ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ” ಎಂದು ನ್ಯಾಯವಾದಿ ಜೈನ್ ಹೇಳಿದರು. ಆದರೆ "ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗಿದೆಯೇ? ಹೇಳಿ," ಎಂದು ಪೀಠ ಜೈನ್ ಅವರನ್ನು ಮರುಪ್ರಶ್ನಿಸಿತು.
ಸಂಸತ್ತು ಕಾರ್ಯನಿರ್ವಹಿಸದ ಸಮಯದಲ್ಲಿ ಸಂವಿಧಾನದಲ್ಲಿ ಪದಗಳನ್ನು ಸೇರಿಸಲಾಯಿತು ಎಂದು ವಕೀಲ ಉಪಾಧ್ಯಾಯ ಹೇಳಿದರು.
"ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ದಿನಾಂಕಕ್ಕೆ ಸಂಬಂಧಿಸಿದಂತೆ ವ್ಯತ್ಯಾಸವನ್ನು ಎತ್ತಿ ತೋರಿಸಿದರು, ತಿದ್ದುಪಡಿ ಮಾಡಿದ ಪೀಠಿಕೆಗೂ ನವೆಂಬರ್ 26, 1949ರ ಮೂಲ ಪೀಠಿಕೆಯ ದಿನಾಂಕಕ್ಕೂ ಹೊಂದಿಕೆಯಾಗುವುದಿಲ್ಲ” ಎಂದು ಹೇಳಿದರು.
ಮೂಲ ಪೀಠಿಕೆಯಲ್ಲಿ ಜಾತ್ಯತೀತತೆ ಮತ್ತು ಸಮಾಜವಾದಿ ಪದಗಳ ಬಳಕೆಯ ಪ್ರಸ್ತಾಪ ಇಲ್ಲದಿರುವುದರಿಂದ ಪೀಠಿಕೆಯನ್ನು ಎರಡು ಭಾಗಗಳಾಗಿ ಮಾಡಬಹುದು ಎಂದು ಸ್ವಾಮಿ ಹೇಳಿದರು.
"ನಾವು ಎರಡು ಭಾಗಗಳಲ್ಲಿ ಪೀಠಿಕೆಯನ್ನು ಹೊಂದಬಹುದು. ನಾವು ಭಾರತದ ಜನರಾದ ನಾವು 'ಜಾತ್ಯತೀತತೆ' ಮತ್ತು 'ಸಮಾಜವಾದಿ' ಪದಗಳನ್ನು ಜಾರಿಗೆ ತರಲು ಒಪ್ಪಿಕೊಂಡಿದ್ದೇವೆ ಎಂದು ಹೇಳುವುದು ತಪ್ಪು. ಪೀಠಿಕೆಯಲ್ಲಿ ಎರಡು ಭಾಗಗಳಿರಬಹುದು- ಒಂದು ದಿನಾಂಕ ಇರುವಂಥದ್ದು ಇನ್ನೊಂದು ದಿನಾಂಕ ಇಲ್ಲದೇ ಇರುವಂಥದ್ದು" ಎಂದು ಅವರು ಹೇಳಿದರು.
ಅಂತಿಮವಾಗಿ ನ್ಯಾಯಾಲಯ ಈ ಅಂಶವನ್ನು ಪರಿಶೀಲಿಸುವುದಾಗಿ ಹೇಳಿತು. ಆದರೆ ಕೇಂದ್ರ ಸರ್ಕಾರಕ್ಕೆ ಔಪಚಾರಿಕ ನೋಟಿಸ್ ನೀಡಲು ನಿರಾಕರಿಸಿತು. ನವೆಂಬರ್ 18ರ ಆಸುಪಾಸಿನಲ್ಲಿ ಪ್ರಕರಣ ಪಟ್ಟಿ ಮಾಡುವಂತೆ ತಿಳಿಸಿತು.