ಆರ್ಯನ್‌ಗೆ ಡ್ರಗ್ಸ್ ಮಾರಾಟಗಾರರು, ವಿತರಕರೊಂದಿಗೆ ನಂಟಿರುವುದನ್ನು ವಾಟ್ಸಪ್‌ ಸಂದೇಶಗಳು ತೋರಿಸಿವೆ: ಮುಂಬೈ ನ್ಯಾಯಾಲಯ

ಎನ್‌ಡಿಪಿಎಸ್‌ ಕಾಯಿದೆಯ ಸೆಕ್ಷನ್ 29ರ ಅಡಿ ಅಪರಾಧವೆನಿಸುವ ಸಂಚಿನಲ್ಲಿ ಆರ್ಯನ್‌ ಖಾನ್ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ವಿಶೇಷ ನ್ಯಾಯಾಧೀಶ ವಿ ವಿ ಪಾಟೀಲ್‌ ಅವರು ಹೇಳಿದ್ದಾರೆ.
Aryan Khan and WhatsApp
Aryan Khan and WhatsApp

ಬಾಲಿವುಡ್‌ ನಟ ಶಾರುಖ್‌ ಖಾನ್ ಪುತ್ರ ಆರ್ಯನ್ ಖಾನ್‌ನ ವಾಟ್ಸಪ್‌ ಸಂದೇಶಗಳು ಆತನಿಗೆ ಡ್ರಗ್ ಮಾರಾಟಗಾರರು ಹಾಗೂ ವಿತರಕರೊಂದಿಗೆ (ಪೆಡ್ಲರ್ಸ್ ಮತ್ತು ಸಪ್ಲೈಯರ್ಸ್) ನಂಟಿರುವುದನ್ನು ಮೇಲುನೋಟಕ್ಕೆ ಸೂಚಿಸುತ್ತಿವೆ ಎಂದು ಎನ್‌ಡಿಪಿಎಸ್‌ ಪ್ರಕರಣಗಳ ವಿಚಾರಣೆ ನಡೆಸುವ ಮುಂಬೈನ ವಿಶೇಷ ಸೆಷನ್ಸ್ ನ್ಯಾಯಾಲಯ ಹೇಳಿದೆ. ಆರ್ಯನ್‌ ಖಾನ್‌ ಜಾಮೀನು ಮನವಿಯನ್ನು ನಿರಾಕರಿಸುವ ವೇಳೆ ಬುಧವಾರ ನ್ಯಾಯಾಲಯವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Also Read
ವಿಲಾಸಿ ಹಡಗು ಮಾದಕವಸ್ತು ಪ್ರಕರಣ: ಆರ್ಯನ್ ಖಾನ್‌ಗೆ ಜಾಮೀನು ನಿರಾಕರಿಸಿದ ಮುಂಬೈ ಸೆಷನ್ಸ್ ನ್ಯಾಯಾಲಯ

ಇದಕ್ಕೆ ಪುಷ್ಟೀಕರಿಸುವಂತೆ ಆರ್ಯನ್‌ ಖಾನ್‌ ಸ್ನೇಹಿತ ಅರ್ಬಾಜ್ ಮರ್ಚೆಂಟ್‌ನ ವಾಟ್ಸಪ್‌ ಸಂದೇಶಗಳು ಸಹ ಇವೆ ಎಂದು ನ್ಯಾಯಾಲಯವು ತನ್ನ ಹದಿನೆಂಟು ಪುಟಗಳ ಆದೇಶದಲ್ಲಿ ತಿಳಿಸಿದೆ.

ಮಾದಕವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆಯ (ಎನ್‌ಡಿಪಿಎಸ್‌) ಸೆಕ್ಷನ್‌ 29ರ ಅಡಿ ಅಪರಾಧವೆಂದು ಪರಿಗಣಿಸಲ್ಪಡುವ ಸಂಚಿನಲ್ಲಿಯೂ ಸಹ ಆರ್ಯನ್‌ ಖಾನ್ ಭಾಗಿಯಾಗಿರುವುದು ಅಧಿಕೃತ ದಾಖಲೆಗಳಿಂದ ತಿಳಿದು ಬಂದಿರುವುದಾಗಿ ವಿಶೇಷ ನ್ಯಾಯಾಧೀಶ ವಿ ವಿ ಪಾಟೀಲ್‌ ಅವರು ಆದೇಶದಲ್ಲಿ ದಾಖಲಿಸಿದ್ದಾರೆ.

ಈ ಸಂಚಿನ ಹಿನ್ನೆಲೆಯಲ್ಲಿ ಪ್ರಕರಣದ ಎಂಟು ಆರೋಪಿಗಳನ್ನು ಕ್ರೂಸ್‌ನಲ್ಲಿ ಬಂಧಿಸಲಾಗಿದೆ. ವಿಲಾಸಿ ಹಡಗಿನಲ್ಲಿ ಡ್ರಗ್ಸ್ ಸೇವನೆಯ ರೇವ್‌ ಪಾರ್ಟಿಯನ್ನು ಹಮ್ಮಿಕೊಂಡಿದ್ದ ನಿರ್ದಿಷ್ಟ ಮಾಹಿತಿಯ ಮೇರೆಗೆ ಮಾದಕವಸ್ತು ನಿಯಂತ್ರಣ ದಳವು ದಾಳಿ ನಡೆಸಿ ನಿರ್ದಿಷ್ಟ ಪ್ರಮಾಣದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ನ್ಯಾಯಾಲಯ ಹೇಳಿದೆ.

“ವಿಚಾರಣೆ ವೇಳೆ ಆರೋಪಿಗಳು ತಮಗೆ ಮಾದಕವಸ್ತು ಪೂರೈಸಿದವರ ಹೆಸರುಗಳನ್ನು ತಿಳಿಸಿದ್ದಾರೆ. ಇದು ಆರೋಪಿಗಳು ಸಂಚಿನಲ್ಲಿ ಭಾಗಿಯಾಗಿರುವುದನ್ನು ಮೇಲುನೋಟಕ್ಕೆ ನಿರೂಪಿಸುತ್ತದೆ. ಎಲ್ಲ ಆರೋಪಿಗಳು ಒಂದೇ ಬಂಧದಲ್ಲಿ ಜೋಡಣೆಯಾಗಿರುವುದು ಕಂಡುಬರುತ್ತದೆ” ಎಂದು ನ್ಯಾಯಾಲಯವು ಹೇಳಿದೆ.

ಸಂಚಿನ ಬಗ್ಗೆ ನ್ಯಾಯಾಲಯದ ವಿಚಾರಣೆ ವೇಳೆ ಸಾಬೀತು ಪಡಿಸಬೇಕಾಗುತ್ತದೆಯಾದರೂ ಮೇಲುನೋಟಕ್ಕೆ ಸಾಕ್ಷ್ಯಗಳು ಸಂಚು ಹಾಗೂ ದುಷ್ಪ್ರೇರಣೆಯನ್ನು ಸೂಚಿಸುತ್ತವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಹಾಗಾಗಿ ಪ್ರಕರಣದಲ್ಲಿ ಸೆಕ್ಷನ್‌ 29 ಅನ್ವಯವಾಗುತ್ತದೆ ಎಂದು ಹೇಳಿತು.

Related Stories

No stories found.
Kannada Bar & Bench
kannada.barandbench.com