ವಾಟ್ಸಾಪ್ ಗುಂಪಿನಲ್ಲಿ ಆಕ್ಷೇಪಾರ್ಹ ಮಾಹಿತಿಯನ್ನು ಸದಸ್ಯರು ಹಂಚಿಕೆ ಮಾಡಿದ್ದಕ್ಕೆ ಗುಂಪಿನ ನಿರ್ವಾಹಕರನ್ನು ಹೊಣೆಗಾರರನ್ನಾಗಿಸಲಾಗದು ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ಹೇಳಿದೆ (ಕಿಶೋರ್ ತರೋನೆ ವರ್ಸಸ್ ಮಹಾರಾಷ್ಟ್ರ ಸರ್ಕಾರ ಮತ್ತು ಇತರರು).
ವಾಟ್ಸಾಪ್ ಗುಂಪಿನಲ್ಲಿ ಮಾಹಿತಿ ಹಂಚುವ ಮೊದಲು ಅದನ್ನು ನಿಯಂತ್ರಿಸಲು, ತಿದ್ದುಪಡಿ ಅಥವಾ ಸೆನ್ಸಾರ್ ಮಾಡಲು ನಿರ್ವಾಹಕರಿಗೆ ಅಧಿಕಾರವಿರುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಝಡ್ ಎ ಹಕ್ ಮತ್ತು ಅಮಿತ್ ಬಿ ಬೋರ್ಕರ್ ಅವರಿದ್ದ ಪೀಠ ಹೇಳಿದೆ.
ಕಾನೂನಿನ ಅಡಿಯಲ್ಲಿ ಆಕ್ಷೇಪಾರ್ಹವಾದ ಮಾಹಿತಿಯನ್ನು ವಾಟ್ಸಾಪ್ ಗುಂಪಿನಲ್ಲಿ ಸದಸ್ಯರೊಬ್ಬರು ಹಂಚಿಕೆ ಮಾಡಿದರೆ ಸಂಬಂಧಪಟ್ಟ ಕಾನೂನಿನ ಅಡಿ ಅವರು ಶಿಕ್ಷೆಗೆ ಅರ್ಹರು ಎಂದು ಪೀಠವು ಸ್ಪಷ್ಟಪಡಿಸಿದೆ. “ಕಾನೂನಿನಡಿ ನಿರ್ದಿಷ್ಟ ನಿಬಂಧನೆಯ ಅನುಪಸ್ಥಿತಿಯಲ್ಲಿ, ವಾಟ್ಸಾಪ್ ಗುಂಪಿನ ಸದಸ್ಯ ಹಾಕುವ ಆಕ್ಷೇಪಾರ್ಹ ಮಾಹಿತಿಗೆ ವಾಟ್ಸಾಪ್ ಗುಂಪಿನ ನಿರ್ವಾಹಕನನ್ನು ಹೊಣೆಗಾರರನ್ನಾಗಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.
ಮೇಲಿನ ಕಾರಣ ನೀಡಿರುವ ಪೀಠವು ವಾಟ್ಸಾಪ್ ಗುಂಪಿನ ನಿರ್ವಾಹಕನ ವಿರುದ್ಧ ಭಾರತೀಯ ದಂಡ ಸಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ದಾಖಲಿಸಿದ್ದ ಪ್ರಥಮ ಮಾಹಿತಿ ವರದಿ, ಆರೋಪ ಪಟ್ಟಿ ಮತ್ತು ಮುಂದಿನ ಪ್ರಕ್ರಿಯೆಯನ್ನು ವಜಾಗೊಳಿಸಿದೆ.
ಗೊಂಡಿಯಾದ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅವರ ಎದುರು ಅರ್ಜಿದಾರ ಕಿಶೋರ್ ತರೋನೆ ಅವರು ಎಫ್‌ಐಆರ್ ಮತ್ತು ಆರೋಪ ಪಟ್ಟಿಯನ್ನು ಪ್ರಶ್ನಿಸಿದ್ದರು.
ವಾಟ್ಸಾಪ್ ಗುಂಪಿನ ನಿರ್ವಾಹಕನಾದ ತರೋನೆ ಅವರು ಪ್ರಾಥಮಿಕ ಆರೋಪಿಯನ್ನು ಗುಂಪಿನಿಂದ ಹೊರಹಾಕುವುದಾಗಲಿ ಅಥವಾ ದೂರುದಾರ ಮಹಿಳೆಯ ಬಳಿ ಅಸಭ್ಯ ಭಾಷೆ ಬಳಕೆ ಮಾಡಿದ್ದಕ್ಕೆ ಕ್ಷಮೆ ಕೋರುವಂತೆ ಆರೋಪಿಗೆ ಸೂಚಿಸಿಲ್ಲ ಎಂದು ದೂರಲಾಗಿತ್ತು.
ಗುಂಪಿನ ಸದಸ್ಯ ಮತ್ತು ನಿರ್ವಾಹಕರು ಪೂರ್ವನಿಯೋಜಿತವಾಗಿ ಸಂಚು ರೂಪಿಸಿ, ಒಂದು ಸಾಮಾನ್ಯ ಉದ್ದೇಶದಿಂದ ಕೃತ್ಯವನ್ನು ಎಸಗಿದ್ದಾರೆ ಎನ್ನುವುದನ್ನು ನಿರೂಪಿಸಲು ಸಾಧ್ಯವಿಲ್ಲವಾದರೆ ಆಗ ಗುಂಪಿನ ಸದಸ್ಯ ಮಾಡಿದ ಹೊಣೆಗೇಡಿ ಕೆಲಸಕ್ಕೆ ನಿರ್ವಾಹಕನನ್ನು ಹೊಣೆ ಮಾಡಲಾಗದು ಎಂದು ಪೀಠ ಹೇಳಿದೆ.
“ವಾಟ್ಸಾಪ್ ಗುಂಪು ಸೃಷ್ಟಿಸಿದ ನಿರ್ವಾಹಕನಿಗೆ ಗುಂಪಿನ ಸದಸ್ಯರ ಕ್ರಿಮಿನಲ್ ನಡವಳಿಕೆಗಳ ಬಗ್ಗೆ ಮೊದಲೇ ತಿಳಿದಿರುತ್ತದೆ ಎಂದು ನಿರೀಕ್ಷಿಸಲಾಗದು” ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಪ್ರಸ್ತುತ ಪ್ರಕರಣದ ಸಂಗತಿಗಳಿಂದ, ಎಫ್‌ಐಆರ್‌ನಲ್ಲಿನ ಆರೋಪಗಳು ಮತ್ತು ಆರೋಪಪಟ್ಟಿಯಲ್ಲಿರುವ ವಸ್ತುಗಳನ್ನು ನಿಜವೆಂದು ಪರಿಗಣಿಸಿದರೂ, ಭಾರತೀಯ ದಂಡ ಸಂಹಿತೆಯಡಿ ಲೈಂಗಿಕ ಹೇಳಿಕೆಗಳನ್ನು ರವಾನಿಸಲಾಗಿದೆ ಎಂದು ಆರೋಪಿಸುವ ಅಪರಾಧದ ಅಂಶಗಳು ಸಾಬೀತಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
“ವಾಟ್ಸಾಪ್ ಗುಂಪಿನ ನಿರ್ವಾಹಕರು ಆರೋಪಿ ಸದಸ್ಯರನ್ನು ಗುಂಪಿನಿಂದ ತೆಗೆದುಹಾಕದಿರುವುದು ಅಥವಾ ಆಕ್ಷೇಪಾರ್ಹ ಹೇಳಿಕೆಯನ್ನು ಹಂಚಿಕೆ ಮಾಡಿದ ಸದಸ್ಯರಿಂದ ಕ್ಷಮೆಯಾಚಿಸುವಂತೆ ಮಾಡಲು ವಿಫಲವಾದ ಮಾತ್ರಕ್ಕೆ ಗುಂಪಿನ ನಿರ್ವಾಹಕನನ್ನು ಅಶ್ಲೀಲ ಪದ ಬಳಕೆ ಮಾಡಿದ ಆರೋಪಕ್ಕೆ ಗುರಿಯಾಗಿಸಲಾಗದು” ಎಂದು ನ್ಯಾಯಾಲಯ ಹೇಳಿದ್ದು, ಅರ್ಜಿದಾರರ ವಿರುದ್ಧದ ಪ್ರಕ್ರಿಯೆಗಳನ್ನು ವಜಾಗೊಳಿಸಿದೆ.
ತರೋನೆ ಅವರ ಪರ ವಕೀಲ ರಾಜೇಂದ್ರ ದಾಗಾ ವಾದಿಸಿದರು, ಹೆಚ್ಚುವರಿ ಸರ್ಕಾರಿ ಅಭಿಯೋಜಕ ಟಿ ಎ ಮಿರ್ಜಾ ಅವರು ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದರು.