ಜಾತಿ ಮೀಸಲಾತಿ ಕುರಿತ ವಾಟ್ಸಾಪ್ ಸಂದೇಶ ರವಾನೆ ಎಸ್‌ಸಿ ಎಸ್‌ಟಿ ಕಾಯಿದೆಯಡಿ ಅಪರಾಧವಾಗದು: ಬಾಂಬೆ ಹೈಕೋರ್ಟ್

ಪ್ರಕರಣದ ದೂರುದಾರನಾಗಿರುವ ಪ್ರೇಮಿಯೊಂದಿಗಿನ ಸಂಬಂಧ ಕಡಿದುಕೊಂಡ ನಂತರ ಆತನ ಜಾತಿ ಕುರಿತು ಅವಹೇಳನಕಾರಿ ಸಂದೇಶ ಕಳುಹಿಸಿದ್ದ ಮಹಿಳೆಯ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸಿದ ಆದೇಶವನ್ನು ಪೀಠ ಎತ್ತಿಹಿಡಿದಿದೆ.
Bombay High Court, Nagpur Bench
Bombay High Court, Nagpur Bench
Published on

ಪ್ರೇಮಿಯೊಂದಿಗಿನ ಸಂಬಂಧ ಕಡಿದುಕೊಳ್ಳುವಾಗ ಆತನ ಜಾತಿ ಕುರಿತಾಗಿ ಅವಹೇಳನಕಾರಿ ಸಂದೇಶ ಕಳುಹಿಸಿದ ಆರೋಪದಡಿ ಮಹಿಳೆಯೊಬ್ಬರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ- 1989ರ ಅಡಿ ದಾಖಲಾಗಿದ್ದ ಪ್ರಕರಣ ಮುಕ್ತಾಯಗೊಳಿಸಿದ್ದ ಆದೇಶವನ್ನು ಬಾಂಬೆ ಹೈಕೋರ್ಟ್‌ ಶುಕ್ರವಾರ ಎತ್ತಿ ಹಿಡಿದಿದೆ [ವಿಡಬ್ಲ್ಯೂ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ]

 ಇಬ್ಬರ ನಡುವೆ ವಿನಿಮಯವಾಗಿರುವ ವಾಟ್ಸಾಪ್‌ ಸಂದೇಶಗಳು ಕೇವಲ ಜಾತಿ ಮೀಸಲಾತಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತವೆಯೇ ವಿನಾ ಎಸ್‌ಸಿ ಎಸ್‌ಟಿ ಸದಸ್ಯರ ವಿರುದ್ಧ ದ್ವೇಷ ಭಾವನೆ ಕೆರಳಿಸುವುದಿಲ್ಲ ಎಂದು ನ್ಯಾಯಮೂರ್ತಿ ಊರ್ಮಿಳಾ ಜೋಶಿ-ಫಾಲ್ಕೆ ಅವರು ತಿಳಿಸಿದ್ದಾರೆ.

Also Read
ಲಿಂಗಾಯತ ಜಾತಿ ಪ್ರಮಾಣ ಪತ್ರ ಹಿಂಪಡೆದು ಬೇಡ ಜಂಗಮ ಪ್ರಮಾಣ ಪತ್ರ ಕೋರಿಕೆ ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌

ಪ್ರಕರಣವನ್ನು ವಿವರವಾಗಿ ಪರಿಶೀಲಿಸಿದಾಗ ಸಂದೇಶಗಳಿ ಜಾತಿ ಮೀಸಲಾತಿ ವ್ಯವಸ್ಥೆ ಬಗ್ಗೆ ಇರುವ ಭಾವನೆಗಳನ್ನು ತೋರಿಸುತ್ತವೆ ಎಂಬುದು ತಿಳಿಯುತ್ತದೆ. ಇಂತಹ ಸಂದೇಶಗಳು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳ ಸದಸ್ಯರ ವಿರುದ್ಧ ಯಾವುದೇ ದ್ವೇಷ ಭಾವನೆ ಬೆಳೆಸುವ ಯತ್ನ ನಡೆಸಿಲ್ಲ. ಹೆಚ್ಚೆಂದರೆ ಆಕೆಯ ಗುರಿ ಕೇವಲ ದೂರುದಾರನಷ್ಟೇ ಆಗಿದ್ದ ಎಂದು ಹೇಳಬಹುದು. ಅಲ್ಲದೆ ಆಕೆ ಎಸ್‌ಸಿ- ಎಸ್‌ಟಿ ಸಮುದಾಯದ ಸದಸ್ಯರ ವಿರುದ್ಧ ದ್ವೇಷ ಕಾರುವಂತಹ ಇಲ್ಲವೇ ದ್ವೇಷವನ್ನುಉತ್ತೇಜಿಸುವಂತಹ ಪದ ಬರೆದಿಲ್ಲ ಎಂಬುದಾಗಿ ನ್ಯಾಯಾಲಯ ವಿವರಿಸಿದೆ.

ಮಧ್ಯಪ್ರದೇಶದ ನಾಗಪುರದ ನಿವಾಸಿಗಳಾದ 29 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಮತ್ತು 28 ವರ್ಷದ ಮಹಿಳೆಯ ನಡುವೆ ಪ್ರೇಮಾಂಕರುವಾಗಿತ್ತು. ತಮ್ಮ ಕುಟುಂಬಕ್ಕೆ ತಿಳಿಸದೆಯೇ ಇಬ್ಬರೂ ರಹಸ್ಯವಾಗಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಆದರೆ ತನ್ನ ಸಂಗಾತಿ ಪರಿಶಿಷ್ಟ ಜಾತಿಗೆ ಸೇರಿದ ಚಂಬಾರ್ ಸಮುದಾಯದವರು ಎಂದು ಮಹಿಳೆಗೆ ತಿಳಿದ ಬಳಿಕ ಸಂಬಂಧ ಹಳಸಿತ್ತು. ನಂತರ ಇಬ್ಬರೂ ಪರಸ್ಪರ ದೂರವಾಗಿದ್ದರು. ಆ ಬಳಿಕ ಆಕೆಯ ವಿರುದ್ಧ ದೂರು ದಾಖಲಿಸಿದ್ದ ಪ್ರಕರಣದ ಅರ್ಜಿದಾರ ಆಕೆ ತನಗೆ ಅವಹೇಳನಕಾರಿ ಸಂದೇಶ ಕಳುಹಿಸಿದ್ದು ಪರಿಶಿಷ್ಟ ಜಾತಿಗಳ ವಿರುದ್ಧ ದ್ವೇಷ ಕಾರುತ್ತಿದ್ದಾರೆ ಎಂದಿದ್ದರು. ಮಹಿಳೆಯ ಕೃತ್ಯಗಳನ್ನು ಆಕೆಯ ತಂದೆಯೂ ಬೆಂಬಲಿಸುತ್ತಿದ್ದಾರೆ ಎಂದೂ ಪ್ರಕರಣದಲ್ಲಿ ಹೆಸರಿಸಲಾಗಿತ್ತು.

Also Read
'ವಾಟ್ಸಾಪ್ ಯೂನಿವರ್ಸಿಟಿ' ಸಂದೇಶಗಳಿಗೆ ಮಾರುಹೋಗದಿರಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆ ವಿ ವಿಶ್ವನಾಥನ್ ಎಚ್ಚರಿಕೆ

ವಿಚಾರಣಾ ನ್ಯಾಯಾಲಯ ಮಹಿಳೆ ಮತ್ತು ಆಕೆಯ ತಂದೆಯನ್ನು ಆಗಸ್ಟ್ 5, 2021 ರಂದು ಆರೋಪ ಮುಕ್ತಗೊಳಿಸಿದ್ದನ್ನು ಪ್ರಶ್ನಿಸಿ ದೂರುದಾರ  ಪ್ರಸ್ತುತ ಮೇಲ್ಮನವಿ ಸಲ್ಲಿಸಿದ್ದರು.

ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ ಎಸ್‌ಸಿ ಎಸ್‌ಟಿ ದೌರ್ಜನ್ಯ ಕಾಯಿದೆ ಆ ಸಮುದಾಯಗಳಿಗೆ ರಕ್ಷಣೆ ಒದಗಿಸಿರುವುದರ ಉದ್ದೇಶವನ್ನು ವಿವರಿಸಿದರು.  ಪ್ರಸ್ತುತ ಪ್ರಕರಣದ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಆರೋಪಿ ಮಹಿಳೆ ಕಳುಹಿಸಿದ ಸಂದೇಶಗಳು ಎಸ್‌ಸಿ/ಎಸ್‌ಟಿ ಸಮುದಾಯದ ವಿರುದ್ಧ ದ್ವೇಷಕ್ಕೆ ಕುಮ್ಮಕ್ಕು ನೀಡಿದಾಗ ದಂಡಿಸುವ ಕಾಯಿದೆಯ ಸೆಕ್ಷನ್ 3(1)(ಯು) ಅಡಿಯ  ಮಾನದಂಡಗಳನ್ನು ಪೂರೈಸುವುದಿಲ್ಲ ಎಂದು ತೀರ್ಮಾನಿಸಿತು.  ಈ ಹಿನ್ನೆಲೆಯಲ್ಲಿ ದೂರುದಾರನ ಮೇಲ್ಮನವಿಯನ್ನು ವಜಾಗೊಳಿಸಿದ ಅದು ಮಹಿಳೆ ಮತ್ತು ಆಕೆಯ ತಂದೆಯನ್ನು ಆರೋಪಮುಕ್ತಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯಿತು.

Kannada Bar & Bench
kannada.barandbench.com