ಐಟಿ ಮಧ್ಯಸ್ಥ ನಿಯಮ: ಮಾಹಿತಿ ಮೂಲ ಕಡ್ಡಾಯ ಪತ್ತೆ ಮಾಡುವಿಕೆ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ ವಾಟ್ಸಾಪ್‌

ಖಾಸಗಿತನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಒತ್ತಿ ಹೇಳಿರುವಂತೆ ಐಟಿ ನೂತನ ನಿಬಂಧನೆಯು ಅಸಾಂವಿಧಾನಿಕ ಮತ್ತು ಜನರ ಮೂಲಭೂತ ಹಕ್ಕಿಗೆ ವಿರುದ್ಧವಾಗಿದೆ ಎಂದು ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ವಾದಿಸಿದೆ ಎನ್ನಲಾಗಿದೆ.
WhatsApp
WhatsApp
Published on

ಮೊದಲಿಗೆ ಯಾರಿಂದ ಮಾಹಿತಿ ರವಾನೆಯಾಗಿದೆ ಎಂಬುದನ್ನು ಪತ್ತೆ ಹಚ್ಚಲು ಮಧ್ಯಸ್ಥ ವೇದಿಕೆಗೆ ಅವಕಾಶ ಕಲ್ಪಿಸಬೇಕು ಎಂದಿರುವ ವಾಟ್ಸಾಪ್‌, ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ವೇದಿಕೆ ನಿಯಮಾವಳಿಗಳು ಮತ್ತು ಡಿಜಿಟಲ್‌ ಮಾಧ್ಯಮ ನೀತಿ ಸಂಹಿತೆ) ನಿಯಮಗಳು 2021 ಅನ್ನು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಖಾಸಗಿತನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಒತ್ತಿ ಹೇಳಿರುವಂತೆ ನಿಬಂಧನೆಯು ಅಸಾಂವಿಧಾನಿಕ ಮತ್ತು ಜನರ ಮೂಲಭೂತ ಹಕ್ಕಿಗೆ ವಿರುದ್ಧವಾಗಿದೆ ಎಂದು ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ವಾದಿಸಿದೆ ಎನ್ನಲಾಗಿದೆ.

Also Read
ನವೀಕೃತ ಗೌಪ್ಯತಾ ನೀತಿಯನ್ನು ಜಾರಿಗೊಳಿಸದಂತೆ ವಾಟ್ಸಾಪ್‌ ನಿರ್ಬಂಧಿಸಬಹುದು: ದೆಹಲಿ ಹೈಕೋರ್ಟ್‌ಗೆ ಕೇಂದ್ರದ ಹೇಳಿಕೆ

ಸರ್ಕಾರದ ನಿಬಂಧನೆಯು ಎಂಡ್‌ ಟು ಎಂಡ್‌ ಎನ್‌ಕ್ರಿಪ್ಷನ್‌ಗೆ ವಿರುದ್ಧವಾಗಿದ್ದು, ಕಾನೂನು ಪಾಲನಾ ಸಂಸ್ಥೆಗಳ ಅಗತ್ಯಕ್ಕಾಗಿ ಖಾಸಗಿ ಕಂಪೆನಿಗಳು ಯಾರು ಏನು ಹೇಳಿದರು ಮತ್ತು ಯಾರು ಏನು ಹಂಚಿಕೊಂಡರು ಎಂಬ ಪ್ರತಿದಿನದ ಕೋಟ್ಯಂತರ ಸಂದೇಶಗಳನ್ನು ಸಂಗ್ರಹಿಸಿಡಬೇಕಾಗುತ್ತದೆ ಎಂದು ವಾಟ್ಸಾಪ್‌ ವಾದಿಸಿದೆ.

ಹೀಗಾಗಿ ಈ ನಿಬಂಧನೆಯು ಅಸಾಂವಿಧಾನಿಕ ಎಂದು ಆದೇಶಿಸುವಂತೆ ವಾಟ್ಸಾಪ್‌ ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ನಿಬಂಧನೆ ಜಾರಿಯಾಗದಂತೆ ಮತ್ತು ಆದೇಶ ಪಾಲಿಸದ ಕಾರಣಕ್ಕೆ ತನ್ನ ಉದ್ಯೋಗಿಗಳ ಮೇಲೆ ಕ್ರಿಮಿನಲ್ ಹೊಣೆಗಾರಿಕೆ ತಡೆಯುವಂತೆಯೂ ಮನವಿ ಮಾಡಿದೆ. 2021ರ ಹೊಸ ನಿಯಮಗಳನ್ನು ಪಾಲಿಸಲು ಮಧ್ಯಸ್ಥ ವೇದಿಕೆಗಳಿಗೆ ಮೇ 25 ಕೊನೆಯ ದಿನವಾಗಿತ್ತು.

Kannada Bar & Bench
kannada.barandbench.com