[ಐಟಿ ನಿಯಮ- 2021] ವಾಟ್ಸಾಪ್ ರೀತಿಯ ವಿದೇಶಿ ಸಂಸ್ಥೆ ಭಾರತೀಯ ಕಾನೂನು ಪ್ರಶ್ನಿಸಲಾಗದು: ದೆಹಲಿ ಹೈಕೋರ್ಟ್‌ಗೆ ಕೇಂದ್ರ
ಮಾಹಿತಿ ತಂತ್ರಜ್ಞಾನ ನಿಯಮಾವಳಿ 2021ರ ಸಾಂವಿಧಾನಿಕತೆಯನ್ನು ವಾಟ್ಸಾಪ್ ರೀತಿಯ ವಿದೇಶಿ ವಾಣಿಜ್ಯ ಸಂಸ್ಥೆ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಐಟಿ ನಿಯಮಗಳು, 2021 ರ ನಿಯಮ 4 (2)ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ವಾಟ್ಸಾಪ್ ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದು ಮಾಹಿತಿಯ ಮೊದಲ ಮೂಲ ಗುರುತಿಸಲು ಮಹತ್ವದ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ನಿಯಮಗಳನ್ನು ರೂಪಿಸಬೇಕಾಗುತ್ತದೆ ಎಂದು ಅದು ಹೇಳಿದೆ.
ಭಾರತೀಯ ಕಾನೂನಿಗೆ ಸವಾಲೆಸೆಯುವ ಉದ್ದೇಶ ಹೊಂದಿರುವ ಯಾವುದೇ 'ವಿದೇಶಿ', 'ವಾಣಿಜ್ಯ' ಸಂಸ್ಥೆಗೆ ಸಂವಿಧಾನದ 226 ಮತ್ತು 32 ನೇ ವಿಧಿಗಳು ಲಭ್ಯವಿಲ್ಲ ಎಂದು 180 ಪುಟಕ್ಕೂ ಹೆಚ್ಚಿರುವ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಇದೇ ತತ್ವವು ಸಂವಿಧಾನದ 21ನೇ ವಿಧಿಗೆ ಸಂಬಂಧಿಸಿದಂತೆ ವಾಣಿಜ್ಯ ಸಂಸ್ಥೆಗಳಿಗಿಂತಲೂ ಕಡಿಮೆ ಇರುವ ಸಂಸ್ಥೆಗಳಿಗೂ ಅನ್ವಯಿಸುತ್ತದೆ ಎಂದು ಅಫಿಡವಿಟ್ ತಿಳಿಸಿದೆ.
ಅಫಿಡವಿಟ್‌ನಲ್ಲಿರುವ ಮುಖ್ಯಾಂಶಗಳು
ಕಂಪನಿಗಳ ಪ್ರಕರಣಗಳಲ್ಲಿ ವ್ಯುತ್ಪನ್ನ ಕ್ರಮಕ್ಕೆ ಕಾನೂನು ಅನುಮತಿ ನೀಡುತ್ತದೆ. ಆದರೆ ಕಂಪನಿಯ ಷೇರುದಾರನಾಗಿರುವ ಮತ್ತು 19 (1) (ಜಿ) ಹಕ್ಕುಗಳಿಗೆ ಒಳಪಟ್ಟಿರುವ ಭಾರತೀಯ ನಾಗರಿಕರಿಗೆ ಮಾತ್ರ ಇದು ಅನ್ವಯವಾಗಲಿದೆ. ಭಾರತೀಯ ನಾಗರಿಕರು ಹಕ್ಕು ಪ್ರತಿಪಾದಿಸುವಂತಹ ಯಾವುದೇ ವ್ಯುತ್ಪನ್ನ ಹಕ್ಕುಗಳನ್ನು ಒಳಗೊಂಡಿಲ್ಲವಾದ್ದರಿಂದ ಪ್ರಸ್ತುತ ಅರ್ಜಿ ವಿಚಾರಣಾಯೋಗ್ಯವಲ್ಲ.
ನಿಯಮಗಳನ್ನು ಪರಿಚಯಿಸಲು ಕೇಂದ್ರವು ಶಾಸಕಾಂಗದ ಅಧಿಕಾರ ಪಡೆದಿರುವುದರಿಂದ ವಾಟ್ಸಾಪ್ ಮನವಿ ವಜಾಗೊಳಿಸಬೇಕು.
ನಿಯಮಗಳು ಐಟಿ ಕಾಯಿದೆ- 2000 ಕ್ಕೆ ಅನುಗುಣವಾಗಿದ್ದು ಕೇಂದ್ರ ಸರ್ಕಾರ ಮೂಲ ಕಾಯಿದೆ ಒದಗಿಸಿರುವ ಮಿತಿಗಳನ್ನು ಮೀರಿಲ್ಲ.
ಐಟಿ ನಿಯಮಾವಳಿ- 2021 ಅನ್ನು ಜಾರಿಗೊಳಿಸದಿದ್ದರೆ, ಸುಳ್ಳು ಸಂದೇಶಗಳ ಮೂಲ ಪತ್ತೆಹಚ್ಚಲು ಕಾನೂನು ಜಾರಿ ಸಂಸ್ಥೆಗಳಿಗೆ ಕಷ್ಟವಾಗುತ್ತದೆ. ಜೊತೆಗೆ ಅಂತಹ ಸಂದೇಶಗಳು ಇತರೆಡೆಗೆ ಹಬ್ಬುತ್ತವೆ ಇದರಿಂದ ಸಮಾಜದಲ್ಲಿ ಶಾಂತಿ , ಸಾಮರಸ್ಯ ಕದಡಿ ಕಾನೂನು ಸುವ್ಯವಸ್ಥೆ ಸಮಸ್ಯೆಗಳಿಗೆ ಇಂಬು ನೀಡುತ್ತದೆ.
ದೇಶದ ಭದ್ರತೆ. ಕಾನೂನು ಸುವ್ಯವಸ್ಥೆ ಅತ್ಯಾಚಾರ/ಮಕ್ಕಳ ಲೈಂಗಿಕ ದೌರ್ಜನ್ಯ/ಲೈಂಗಿಕ ಶೋಷಣೆಯಂತಹ ಅಪರಾಧಗಳಿಗೆ ಸಂಬಂಧಿಸಿದ ಮಾಹಿತಿಯ ಮೊದಲ ಮೂಲ ಪತ್ತೆಹಚ್ಚಲು ಐಟಿ ನಿಯಮಾವಳಿ ಕೇಂದ್ರಕ್ಕೆ ಅಧಿಕಾರ ನೀಡುತ್ತದೆ.
ಸರ್ಕಾರದ ವಿರುದ್ಧದ ಸುಳ್ಳು ಸುದ್ದಿ ಮತ್ತು ಅಪರಾಧಗಳ ಭೀತಿ ತಡೆಯಲು ನಿಯಮಾವಳಿ 4 (2)ರಾಜ್ಯದ ಕಾನೂನುಬದ್ಧ ಹಿತಾಸಕ್ತಿಗೆ ಪೂರಕವಾಗಿದೆ.
ವಾಟ್ಸಾಪ್ ರೀತಿಯ ವೇದಿಕೆಗಳಲ್ಲಿ ಮಾಹಿತಿಯ ಮೊದಲ ಮೂಲವನ್ನು ಬಹಿರಂಗಪಡಿಸಿದರೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ನಿಯಮವನ್ನು ಮುರಿದಂತಾಗುತ್ತದೆ ಎಂಬ ವಾದ ಸುಳ್ಳು.
ವಾಟ್ಸಾಪ್ ರೀತಿಯ ವೇದಿಕೆಗಳಲ್ಲಿ ಮಾಹಿತಿಯ ಮೊದಲ ಮೂಲ ಗುರುತಿಸಲು ಕನಿಷ್ಠ ಒಳನುಗ್ಗುವ ವಿಧಾನವನ್ನು ಇದು ಒದಗಿಸಲಿದ್ದು ಇತರೆಲ್ಲಾ ಆಯ್ಕೆಗಳು ವಿಫಲವಾದರೆ ಇದನ್ನು ಬಳಸಿಕೊಳ್ಳಬಹುದಾಗಿದೆ.
ನಿಯಮಾವಳಿ ಪ್ರಶ್ನಿಸಿ ವಾಟ್ಸಾಪ್ ಮತ್ತು ಅದರ ಮಾತೃಸಂಸ್ಥೆ ಫೇಸ್‌ಬುಕ್ ಸಲ್ಲಿಸಿದ್ದ ಅರ್ಜಿ ಸಂಬಂಧ ಕಳೆದ ಆಗಸ್ಟ್‌ನಲ್ಲಿ ದೆಹಲಿ ಹೈಕೋರ್ಟ್ ಸಂಬಂಧಪಟ್ಟವರಿಗೆ ನೋಟಿಸ್ ನೀಡಿತ್ತು.


