ಸರ್ಕಾರಿ ವೈದ್ಯರು ಬೂಟಾಟಿಕೆಯ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ: ಗುಜರಾತ್‌ ಹೈಕೋರ್ಟ್‌ ಕಿಡಿ

ರಾಜ್ಯದ ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ ಬಗ್ಗೆ ವಿಚಾರಣೆ ನಡೆಸುವ ಸಲುವಾಗಿ ನಿವೃತ್ತ ನ್ಯಾಯಮೂರ್ತಿ ಹರ್ಷ ದೇವಾನಿ ನೇತೃತ್ವದಲ್ಲಿ ಸಮಿತಿಯನ್ನು ಪೀಠ ರಚಿಸಿತು.
Gujarat High Court
Gujarat High Court
Published on

ಸಾರ್ವಜನಿಕ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುವ ಅತಿರೇಕದ ಘಟನೆಗಳು ಮಂಗಳವಾರ ಗುಜರಾತ್ ಹೈಕೋರ್ಟ್‌ಅನ್ನು ಕೆರಳಿಸಿದವು.

ವೈದ್ಯರು ಸೂಕ್ಷ್ಮತೆ ಉಳ್ಳವರಾಗಿರಬೇಕು. ರೋಗಿಗಳಿಗೆ ಅದರಲ್ಲಿಯೂ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಬಡವರ ಬಗ್ಗೆ ಸಹಾನುಭೂತಿ ತೋರಬೇಕು ಎಂದು ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ ಅವರಿದ್ದ ಪೀಠ ತಿಳಿಸಿತು.

“ದೊಡ್ಡ ಆಸ್ಪತ್ರೆಗಳಲ್ಲಿ ದುಬಾರಿ ಚಿಕಿತ್ಸೆ ಪಡೆಯಲಾಗದ ಕಾರಣ ಬಡವರು ಸಾರ್ವಜನಿಕ ಅಥವಾ ಸರ್ಕಾರಿ ಆಸ್ಪತ್ರೆಗಳಿಗೆ ತೆರಳುತ್ತಾರೆ. ಈ ಜನರಿಗೆ ನಿಜವಾದ ಸಹಾನುಭೂತಿ ಮತ್ತು ಉತ್ತಮ ಚಿಕಿತ್ಸೆ ಅಗತ್ಯವಿರುತ್ತದೆ. ಈ ವೈದ್ಯರು ಬೂಟಾಟಿಕೆಯ ಪ್ರಮಾಣವಚನ ಸ್ವೀಕರಿಸುತ್ತಾರೆ. ಅದನ್ನು ಹೇಗೆ ನಿಭಾಯಿಸುತ್ತಾರೋ ನಮಗೆ ತಿಳಿಯುತ್ತಿಲ್ಲ” ಎಂದು ಪೀಠ ಕೆಂಡಾಮಂಡಲವಾಯಿತು.

ಮಹಿಳೆಯೊಬ್ಬರ ನವಜಾತ ಮಗುವಿಗೆ ಚಿಕಿತ್ಸೆ ನಿರಾಕರಿಸಿದ ಕಾರಣಕ್ಕೆ ಮಗು ಸಾವಿಗೀಡಾದ ಹಾಗೂ ಮತ್ತೊಂದು ಪ್ರಕರಣದಲ್ಲಿ ಬಡ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದ ಕಾರಣಕ್ಕೆ ಆಸ್ಪತ್ರೆಯ ಹೊರಗಿನ ಮೆಟ್ಟಿಲ ಕೆಳಗೇ ಗರ್ಭಿಣಿಯು ಮಗುವಿಗೆ ಜನ್ಮ ನೀಡಿದ ಎರಡು ಘಟನೆಗಳನ್ನು ಪ್ರಸ್ತಾಪಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಘಟನೆ ನಡೆದ ಬಗೆ ಮತ್ತು ಪ್ರಕರಣಗಳಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಅಫಿಡವಿಟ್‌ಗಳನ್ನು ಪರಿಶೀಲಿಸಬೇಕು ಎಂಬ ಸರ್ಕಾರಿ ವಕೀಲರ ಕೋರಿಕೆಯನ್ನು ನ್ಯಾಯಾಲಯ ಮನ್ನಿಸಲಿಲ್ಲ.

“ನಾವಿದನ್ನು ಈಗಾಗಲೇ ಓದಿದ್ದೇವೆ. ರೋಗಿಗಳಿಗೆ ದಾಖಲಾತಿ ಅಥವಾ ಚಿಕಿತ್ಸೆ ನಿರಾಕರಿಸುವ ಹಲವು ಘಟನೆಗಳು ಸಮಸ್ಯೆಯನ್ನು ಅತಿರೇಕಕ್ಕೆ ಒಯ್ದಿವೆ. ಅಫಿಡವಿಟ್‌ನಲ್ಲಿರುವ ವಿಚಾರಗಳು ನೀನು ಅತ್ತ ಹಾಗೆ ಮಾಡು, ನಾನು ಸಂತೈಸಿದ ಹಾಗೆ ಮಾಡುತ್ತೇನೆ ಅಥವಾ ನೀನು ನನ್ನ ಬೆನ್ನು ಕೆರೆ ನಾನು ನಿನ್ನ ಬೆನ್ನು ಕೆರೆಯುತ್ತೇನೆ ಎನ್ನುವಂತಿವೆ” ಎಂದು ಪೀಠ ಟೀಕೆಗಳ ಮಳೆ ಸುರಿಸಿತು.

ಅಲ್ಲದೆ ಸಮಸ್ಯೆ ಬಗೆಹರಿಸದೆ ತಾನು ಸುಮ್ಮನಾಗುವುದಿಲ್ಲ ಎಂದ ನ್ಯಾಯಾಲಯ ಕಠಿಣ ಕ್ರಮ ಕೈಗೊಳ್ಳದ ಹೊರತು ಅಧಿಕಾರಿಗಳು ಪಾಠ ಕಲಿಯುವುದಿಲ್ಲ ಎಂದಿತು.

ಜೊತೆಗೆ ರಾಜ್ಯದ ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ ಬಗ್ಗೆ ವಿಚಾರಣೆ ನಡೆಸುವ ಸಲುವಾಗಿ ನಿವೃತ್ತ ನ್ಯಾಯಮೂರ್ತಿ ಹರ್ಷ ದೇವಾನಿ ನೇತೃತ್ವದಲ್ಲಿ ಸಮಿತಿ ರಚಿಸಿತು. ಎಂಟು ವಾರಗಳ ಬಳಿಕ ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.  

Kannada Bar & Bench
kannada.barandbench.com