ಬಳಕೆದಾರರ ಮಾಹಿತಿ, ಬಳಕೆದಾರರಿಗೇ ಆದ್ಯತೆ: ಸಿಸಿಐ ಆದೇಶ ಪಾಲಿಸುವುದಾಗಿ ಸುಪ್ರೀಂಗೆ ತಿಳಿಸಿದ ವಾಟ್ಸಾಪ್‌

2021ರ ಗೌಪ್ಯತಾ ನೀತಿಗೆ ಸಂಬಂಧಿಸಿದಂತೆ ತನಗೆ ₹213.14 ಕೋಟಿ ದಂಡ ವಿಧಿಸಿರುವುದನ್ನು ಪ್ರಶ್ನಿಸಿ ವಾಟ್ಸಾಪ್‌ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
Supreme Court with WhatsApp and Meta
Supreme Court with WhatsApp and Meta
Published on

ಬಳಕೆದಾರರ ಮಾಹಿತಿಯನ್ನು ಮೆಟಾದ ಉಳಿದ ವೇದಿಕೆ ಕಂಪೆನಿಗಳೊಂದಿಗೆ ಹಂಚಿಕೊಳ್ಳುವ ಬಗ್ಗೆ ಬಳಕೆದಾರರಿಗೆ ಹೆಚ್ಚಿನ ನಿಯಂತ್ರಣ ಇರಬೇಕು ಎಂದು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ನೀಡಿದ್ದ ನಿರ್ದೇಶನಗಳನ್ನು ತಾನು ಪಾಲಿಸುವುದಾಗಿ ವಾಟ್ಸಾಪ್‌ ಸುಪ್ರೀಂ ಕೋರ್ಟ್‌ಗೆ ಸೋಮವಾರ ತಿಳಿಸಿದೆ [ವಾಟ್ಸಾಪ್‌ ಮತ್ತು ಸಿಸಿಐ ಇನ್ನಿತರರ ನಡುವಣ ಪ್ರಕರಣ].

ದತ್ತಾಂಶ ಹಂಚಿಕೆಗಾಗಿ ಬಳಕೆದಾರರ ಅನುಮತಿ ಆಧಾರಿತ ವ್ಯವಸ್ಥೆ ಜಾರಿಗೆ ತರುವಂತೆ ಸಿಸಿಐ ನೀಡಿದ್ದ ನಿರ್ದೇಶನ ಜಾರಿಗೆ ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ನೀಡಿದ್ದ ಆದೇಶ ಪ್ರಶ್ನಿಸಿ ತಾನು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಕೂಡ ಹಿಂಪಡೆಯುತ್ತಿರುವುದಾಗಿ ವಾಟ್ಸಾಪ್‌ ತಿಳಿಸಿತು.

Also Read
ಗೌಪ್ಯತೆಯ ಹಕ್ಕಿನೊಂದಿಗೆ ಆಟವಾಡುವಂತಿಲ್ಲ: ವಾಟ್ಸ್ಆಪ್‌, ಮೆಟಾಗೆ ಸುಪ್ರೀಂ ಕೋರ್ಟ್‌ ತರಾಟೆ

ಅಂತೆಯೇ ವಾಟ್ಸಾಪ್‌ ತನ್ನ ಅರ್ಜಿಗಳನ್ನು ಹಿಂಪಡೆಯಲು ಸಿಜೆಐ ಸೂರ್ಯಕಾಂತ್‌ ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿಪುಲ್‌ ಪಂಚೋಲಿ ಅವರಿದ್ದ ಪೀಠ ಅನುಮತಿ ನೀಡಿತು.

ವಾಟ್ಸಾಪ್‌ ಹಾಗೂ ಮೆಟಾದ ಉಳಿದ ವೇದಿಕೆಗಳ ಪರ ಹಾಜರಾದ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ಅವರು ಕಂಪನಿಯು ತನ್ನ ಡೇಟಾ ಹಂಚಿಕೆ ವಿಧಾನಗಳ ಬಗ್ಗೆ ವಿವರಿಸುವ ಪ್ರಮಾಣಪತ್ರವನ್ನು ಸಲ್ಲಿಸಿರುವುದಾಗಿ ಮತ್ತು ಎನ್‌ಸಿಎಲ್‌ಎಟಿ ಸ್ಪಷ್ಟಪಡಿಸಿರುವ ನಿರ್ದೇಶನಗಳನ್ನು ಅದು ಸೂಚಿಸಿರುವ ಅವಧಿಯೊಳಗೆ ಜಾರಿಗೆ ತರುವುದಾಗಿ ತಿಳಿಸಿದರು.

ಮಾರ್ಚ್ 16ರೊಳಗೆ ನಿರ್ದೇಶನಗಳನ್ನು ಪಾಲಿಸಲು ಕಂಪನಿಯು ನಿರ್ಧರಿಸಿರುವುದರಿಂದ, ಅವುಗಳ ಜಾರಿಗೆ ತಾತ್ಕಾಲಿಕ ತಡೆ ನೀಡುವಂತೆ ಸಲ್ಲಿಸಿದ್ದ ಮಧ್ಯಂತರ ಅರ್ಜಿಗಳನ್ನು ಆಲಿಸುವಂತೆ ಇನ್ನು ಮುಂದೆ ಒತ್ತಾಯಿಸುವುದಿಲ್ಲ ಎಂದು ಅವರು ಪೀಠಕ್ಕೆ ಹೇಳಿದರು.

ವಾದ ಆಲಿಸಿದ ನ್ಯಾಯಾಲಯ 2021ರ ಗೌಪ್ಯತಾ ನೀತಿಯ ಮಾನ್ಯತೆ ಕುರಿತ ಮುಖ್ಯ ಅಪೀಲು ವಿಚಾರಣೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿತು. ಎನ್‌ಸಿಎಲ್‌ಎಟಿ ಸೂಚಿಸಿದಂತೆ ನಿರ್ದೇಶನಗಳ ಅನುಪಾಲನಾ ವರದಿಯನ್ನು ಸಿಸಿಐಗೆ ಸಲ್ಲಿಸುವಂತೆ ನ್ಯಾಯಾಲಯ ವಾಟ್ಸಾಪ್‌ಗೆ ಆದೇಶಿಸಿತು.

ಜಾಹೀರಾತು ಉದ್ದೇಶಕ್ಕಾಗಿ ಬಳಕೆದಾರರ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ಐದು ವರ್ಷಗಳ ನಿಷೇಧ ವಿಧಿಸಿರುವ ಪ್ರಕರಣಕ್ಕೆ ಮರುಜೀವ ನೀಡುವಂತೆ ಕೋರಿ ಸಿಸಿಐ ಸಲ್ಲಿಸಿರುವ ಮೇಲ್ಮನವಿ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.

2021ರ ಜನವರಿಯಲ್ಲಿ ತನ್ನ ಸೇವಾ ನಿಯಮ ಮತ್ತು ಗೌಪ್ಯತಾ ನೀತಿಯಲ್ಲಿ ಬದಲಾವಣೆ ತಂದಿರುವುದಾಗಿ ತಿಳಿಸಿದ್ದ ವಾಟ್ಸಾಪ್‌, ಹೊಸ ನಿಯಮಗಳನ್ನು ಒಪ್ಪದಿದ್ದರೆ ವೇದಿಕೆಯನ್ನು ಬಳಸಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಹಿಂದಿನ ನೀತಿಯಲ್ಲಿ ಡೇಟಾ ಹಂಚಿಕೆಯಿಂದ ಹೊರಗುಳಿಯುವ ಆಯ್ಕೆ ಇತ್ತು. ಆದರೆ ಪರಿಷ್ಕೃತ ನೀತಿಯಲ್ಲಿ ಮೆಟಾ ಜೊತೆಗೆ ಡೇಟಾ ಹಂಚಿಕೆ ಕಡ್ಡಾಯಗೊಳಿಸಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ್ದ ಸಿಸಿಐ ಈ ಪರಿಷ್ಕರಣೆ ಸ್ಪರ್ಧಾತ್ಮಕ ಕಾಯ್ದೆ, 2002 ಅಡಿಯಲ್ಲಿ ಪ್ರಾಬಲ್ಯದ ದುರುಪಯೋಗ ಎಂದು 2024ರ ನವೆಂಬರ್‌ನಲ್ಲಿ ತೀರ್ಪು ನೀಡಿತ್ತು. 2025ರ ನವೆಂಬರ್‌ನಲ್ಲಿ ಎನ್‌ಸಿಎಲ್‌ಎಟಿ ವಾಟ್ಸಾಪ್‌ ಪರ ಭಾಗಶಃ ತೀರ್ಪು ನೀಡಿತ್ತು ಆದರೆ ಸಿಸಿಐ ₹213.14 ಕೋಟಿ ದಂಡ ವಿಧಿಸಿರುವುದನ್ನು ಎತ್ತಿ ಹಿಡಿದಿತ್ತು.

Also Read
ಡಿಜಿಟಲ್‌ ಅರೆಸ್ಟ್‌: ಬ್ಯಾಂಕ್‌ಗಳ ಪಾತ್ರದ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ

ವಾಟ್ಸಾಪ್‌ನ ʼಒಪ್ಪಿ ಇಲ್ಲವೇ ಬಿಡಿʼ ಧೋರಣೆಯನ್ನು ಹಿಂದಿನ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಈ ನೀತಿ ಡೇಟಾ ಕಳವು ಸಾಧ್ಯತೆಯನ್ನು ಹೆಚ್ಚಿಸುವಂತೆ ಕಾಣುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸ್ಆಪ್ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್, ಮುಕುಲ್ ರೋಹಟ್ಗಿ, ಮೆಟಾ ಪರವಾಗಿ ಅಮಿತ್ ಸಿಬಲ್ ಹಾಜರಿದ್ದರು. ಕೇಂದ್ರ ಸರ್ಕಾರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಿಸಿಐ ಪರವಾಗಿ ಹಿರಿಯ ನ್ಯಾಯವಾದಿ ಮಾಧವಿ ದಿವಾನ್ ಹಾಗೂ ಸಮರ್ ಬನ್ಸಲ್, ಮತ್ತು ಇಂಟರ್ನೆಟ್ ಫ್ರೀಡಂ ಫೌಂಡೇಶನ್ ಪರವಾಗಿ ಹಿರಿಯ ವಕೀಲ ನಿರಂಜನ್ ರೆಡ್ಡಿ ವಾದ ಮಂಡಿಸಿದರು.

Kannada Bar & Bench
kannada.barandbench.com