ಮಗುವಿನ ತಂದೆ ಯಾರೆಂದು ತಿಳಿಸುವ ಡಿಎನ್ಎ ಪರೀಕ್ಷೆಗೆ ಆದೇಶಿಸಲು ಅನುಸರಿಸಬೇಕಾದ ಮಾರ್ಗಸೂಚಿ ರೂಪಿಸಿದ ಸುಪ್ರೀಂ

ತಮ್ಮ ವಿವಾಹಜನ್ಯತೆಯನ್ನು ಕ್ಷುಲ್ಲಕವಾಗಿ ಪ್ರಶ್ನಿಸದೆ ಇರಲು ಮಕ್ಕಳಿಗೆ ನೀಡಲಾದ ಹಕ್ಕು ಅವರ ಖಾಸಗಿತನದ ಹಕ್ಕಿನ ಅತ್ಯಗತ್ಯ ಲಕ್ಷಣ ಎಂದು ನ್ಯಾಯಾಲಯ ಹೇಳಿದೆ.
Supreme Court
Supreme Court

ವ್ಯಾಜ್ಯ ಪರಿಹರಿಸಲು ಅನಿವಾರ್ಯ ಎನಿಸುವ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ವೈವಾಹಿಕ ವ್ಯಾಜ್ಯಗಳಲ್ಲಿ ಮಕ್ಕಳ ತಂದೆ ಯಾರೆಂದು ತಿಳಿಯುವ ಡಿಎನ್‌ಎ ಪರೀಕ್ಷೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ತಮ್ಮ ವಿವಾಹಜನ್ಯತೆಯನ್ನು ಕ್ಷುಲ್ಲಕವಾಗಿ ಪ್ರಶ್ನಿಸದೆ ಇರಲು ಮಕ್ಕಳಿಗೆ ನೀಡಲಾದ ಹಕ್ಕುಅವರ ಖಾಸಗಿತನದ ಹಕ್ಕಿನ ಅತ್ಯಗತ್ಯ ಲಕ್ಷಣ ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

“ತಮ್ಮ ವಿವಾಹಜನ್ಯತೆಯನ್ನು ಕ್ಷುಲ್ಲಕವಾಗಿ ನ್ಯಾಯಾಲಯದ ಮುಂದೆ ಯಾರೂ ಪ್ರಶ್ನಿಸದಿರುವ ಹಕ್ಕು ಮಕ್ಕಳಿಗಿದೆ. ಇದು ಗೌಪ್ಯತೆಯ ಹಕ್ಕಿನ ಅತ್ಯಗತ್ಯ ಲಕ್ಷಣವಾಗಿದೆ. ಆದ್ದರಿಂದ ಮಕ್ಕಳನ್ನು ಭೌತಿಕ ವಸ್ತುಗಳಂತೆ ಪರಿಗಣಿಸಲಾಗದು. ವಿಚ್ಛೇದನದಂತಹ ಪ್ರಕರಣಗಳಲ್ಲಿ ಪಕ್ಷಕಾರರಲ್ಲದ ಅವರನ್ನು ವಿಧಿವಿಜ್ಞಾನ/ಡಿಎನ್‌ಎ ಪರೀಕ್ಷೆಗೆ ಒಳಪಡಿಸಬಾರದು ಎಂಬುದನ್ನು (ದೇಶದ) ನ್ಯಾಯಾಲಯಗಳು ಒಪ್ಪಿಕೊಳ್ಳಬೇಕಿದೆ. ಮಕ್ಕಳು, ಸಂಗಾತಿಗಳ ನಡುವಿನ ಸಂಘರ್ಷದ ಕೇಂದ್ರಬಿಂದು ಆಗದಿರುವುದು ಕಡ್ಡಾಯ” ಎಂದು ನ್ಯಾಯಾಲಯ ಹೇಳಿತು.

ಆದ್ದರಿಂದ, ಅಪ್ರಾಪ್ತ ಮಗುವಿನ ಡಿಎನ್‌ಎ ಪರೀಕ್ಷೆಯನ್ನು ಪೋಷಕರ ಆಣತಿಯ ಮೇರೆಗೆ ಆದೇಶಿಸಬೇಕೇ ಎಂಬ ಪ್ರಶ್ನೆಯನ್ನು ನಿರ್ಧರಿಸುವಾಗ ಪರಿಗಣಿಸಬೇಕಾದ ಅಂಶಗಳನ್ನು ನ್ಯಾಯಾಲಯ ನಿಗದಿಪಡಿಸಿದೆ.

ಸಾಕ್ಷ್ಯ ಕಾಯಿದೆಯ ಸೆಕ್ಷನ್ 112ರ ಅಡಿಯಲ್ಲಿ ಮಗುವಿನ ವಿವಾಹಜನ್ಯತೆಯ ಪೂರ್ವಕಲ್ಪನೆಯೊಂದಿಗೆ ವ್ಯವಹರಿಸುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ನ್ಯಾಯಾಲಯ ಸೂಚಿಸಿದ್ದು ಸಾಕ್ಷ್ಯಾಧಾರಗಳ ಮೂಲಕ ಈ ಪೂರ್ವಕಲ್ಪನೆಯನ್ನು ನಿರಾಕರಿಸಬಹುದಾದ ಸಂದರ್ಭಗಳು ಹೀಗಿವೆ:

(ಎ) ಭಾರತೀಯ ಸಾಕ್ಷ್ಯ ಕಾಯಿದೆ- 1872ರ ಸೆಕ್ಷನ್ 4 ರೊಂದಿಗೆ ಸೆಕ್ಷನ್ 112 ರ ಸಹವಾಚನದ ಉದ್ದೇಶ ಎಂದರೆ ವಿವಾಹದ ಸಮಯದಲ್ಲಿ ಜನಿಸಿದ ಮಗುವಿನ ವಿವಾಹಜನ್ಯತೆಯ ಪೂರ್ವಕಲ್ಪನೆಯನ್ನು ಸಂಬಂಧಿತ ವೇಳೆಯಲ್ಲಿ ಪರಸ್ಪರ ʼಸಂಪರ್ಕʼದಲ್ಲಿದ್ದ ಪೋಷಕರು ತಮ್ಮ ಮಗುವಿನ ಪಿತೃತ್ವದ ಬಗ್ಗೆ ಅನಗತ್ಯ ವಿಚಾರಣೆ ನಡೆಸುವಂತೆ ಕೋರುವುದನ್ನು ತಡೆಯುವುದಾಗಿದೆ.

(ಬಿ) ಭಾರತೀಯ ಸಾಕ್ಷ್ಯ ಕಾಯಿದೆ- 1872 ರ ಸೆಕ್ಷನ್ 112 ರ ಅಡಿಯಲ್ಲಿ ವಿವಾಹಜನ್ಯತೆಯ ಪೂರ್ವಕಲ್ಪನೆಯನ್ನು ನಿರಾಕರಿಸಲು, ಅಪ್ರಾಪ್ತ ಮಗುವಿನ ವಿವಾಹಜನ್ಯತೆಯನ್ನು ಪ್ರಶ್ನಿಸುವ ಪಕ್ಷಕಾರ ಇತರ ಪಕ್ಷಕಾರರೊಂದಿಗೆ "ಸಂಪರ್ಕ" ಹೊಂದಿರಲಿಲ್ಲ ಎಂದು ಮೇಲ್ನೋಟಕ್ಕೆ ಸಾಬೀತುಪಡಿಸಬೇಕಾಗುತ್ತದೆ. ಇದಲ್ಲದೆ, ಸಂಪರ್ಕ ಹೊಂದಿರಲಿಲ್ಲ ಎಂಬ ಕುರಿತು ಯಾವುದೇ ಮನವಿ ಸಲ್ಲಿಸದಿದ್ದಾಗ, ಡಿಎನ್ಎ ಪರೀಕ್ಷೆಗೆ ನಿರ್ದೇಶಿಸುವಂತಿಲ್ಲ.

(ಸಿ) ಮಗುವಿನ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಪ್ರಾಪ್ತ ಮಗುವಿನ ಡಿಎನ್‌ಎ ಪರೀಕ್ಷೆಯನ್ನು ನಡೆಸುವ ನಿರ್ದೇಶನವನ್ನು ಮಗುವಿನ ನೆಲೆಯಿಂದ ನೋಡಬೇಕು.

(ಡಿ) ಅಂತಹ ನಿರ್ದೇಶನವನ್ನು ನ್ಯಾಯಾಲಯವು ವಿರಳವಾಗಿ ಆದೇಶಿಸಬೇಕು ಮತ್ತು ವೈವಾಹಿಕ ವ್ಯಾಜ್ಯ ಪರಿಹರಿಸಲು ಅನಿವಾರ್ಯ ಎನಿಸುವ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಮಕ್ಕಳ ತಂದೆ ಯಾರೆಂದು ತಿಳಿಯುವ ಡಿಎನ್‌ಎ ಪರೀಕ್ಷೆ ಮಾಡಬೇಕು

(ಇ) ತನ್ನ ತಾಯಿ ಸಹಜ ಸಾಮರ್ಥ್ಯದಿಂದಾಗಿ ಹಾಗೂ ಸ್ವಾಭಾವಿಕ ರಕ್ಷಕಳಾಗಿ ಅಪ್ರಾಪ್ತ ಮಗುವಿನ ಡಿಎನ್‌ಎ ಪರೀಕ್ಷೆಗೆ ಅರ್ಜಿದಾರ-ಪತ್ನಿಯು ನಿರಾಕರಿಸಿದರೆ ಆಗ ಆಕೆಯ ಇಚ್ಛೆಗೆ ವಿರುದ್ಧವಾಗಿ ಸಾಕ್ಷ್ಯ ಕಾಯಿದೆಯ ಸೆಕ್ಷನ್ 114 (ಎಚ್) ಅಡಿಯಲ್ಲಿ ಪ್ರತಿಕೂಲವಾದ ನಿರ್ಣಯವನ್ನು ಕೈಗೊಳ್ಳುವಂತಿಲ್ಲ.

ನ್ಯಾಯಾಲಯವು ಮೇಲಿನ ಮಾರ್ಗಸೂಚಿಗಳನ್ನು ರೂಪಿಸಲು ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರ ಪತ್ನಿಯ ಪರವಾಗಿ ಹಿರಿಯ ವಕೀಲ ಹುಜೆಫಾ ಅಹ್ಮದಿ ಮತ್ತು ವಕೀಲರಾದ ಸಂಯತ್ ಲೋಧಾ, ಆಕಾಶಿ ಲೋಧಾ, ಸಂಜನಾ ಸದ್ದಿ ಮತ್ತು ಹಿಮಾ ಭಾರದ್ವಾಜ್ ಅವರು ವಕಾಲತ್ತು ವಹಿಸಿದ್ದರು. ಪ್ರತಿವಾದಿ-ಪತಿಯ ಪರವಾಗಿ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ವಕಾಲತ್ತು ವಹಿಸಿದ್ದರು.

ಪತಿಯ ಆಣತಿಯಂತೆ ತಮ್ಮ ಅಪ್ರಾಪ್ತ ಮಗುವಿನ ಡಿಎನ್‌ಎ ಪರೀಕ್ಷೆಗೆ ಅನುಮತಿ ನೀಡಿದ ಕೌಟುಂಬಿಕ ನ್ಯಾಯಾಲಯ ಮತ್ತು ಬಾಂಬೆ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯ ವಿಚಾರಣೆ ನ್ಯಾಯಲಯದಲ್ಲಿ ನಡೆಯಿತು.

[ತೀರ್ಪನ್ನು ಇಲ್ಲಿ ಓದಿ]

Attachment
PDF
Aparna_Ajinkya_Firodia_vs_Ajinkya_Arun_Firodia.pdf
Preview

Related Stories

No stories found.
Kannada Bar & Bench
kannada.barandbench.com