ಒಂದು ಸಾರ್ವಭೌಮ ದೇಶದಲ್ಲಿರುವ ನ್ಯಾಯಾಲಯ ಇನ್ನೊಂದು ಸಾರ್ವಭೌಮ ದೇಶದ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರತಿಬಂಧಿಸಲಾಗದು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಅಂತಹ ಆದೇಶ ನೀಡಲು ಭಾರತದ ನ್ಯಾಯವ್ಯಾಪ್ತಿಯೇ ಸಮರ್ಥ ಏಕೈಕ ವೇದಿಕೆ ಎಂದು ಅದು ಅಭಿಪ್ರಾಯಪಟ್ಟಿದೆ.
ಬೌದ್ಧಿಕ ಹಕ್ಕು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಚೀನಾ ಮೂಲದ ತಂತ್ರಜ್ಞಾನ ಕಂಪೆನಿ ʼಶಿವೋಮಿ ಕಾರ್ಪೊರೇಷನ್ʼ ವಿರುದ್ಧ ʼಇಂಟರ್‌ಡಿಜಿಟಲ್ ಟೆಕ್ನಾಲಜಿʼ ಸಂಸ್ಥೆ ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿತ್ತು. ಇದನ್ನು ಪ್ರಶ್ನಿಸಿ ಶಿವೋಮಿ ಚೀನಾದ ವುಹಾನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ವುಹಾನ್ ನ್ಯಾಯಾಲಯ ಶಿವೋಮಿ ವಿರುದ್ಧ ದಾಖಲಿಸಿರುವ ಪೇಟೆಂಟ್ ಉಲ್ಲಂಘನೆ ದಾವೆಯನ್ನು ಹಿಂತೆಗೆದುಕೊಳ್ಳಬೇಕು, ಇಲ್ಲದಿದ್ದರೆ ದಿನವೊಂದಕ್ಕೆ 10 ಲಕ್ಷ ಯುವಾನ್ ಹಣ ದಂಡ ತೆರಬೇಕಾಗುತ್ತದೆ ಎಂದು ಇಂಟರ್‌ಡಿಜಿಟಲ್‌ಗೆ ಎಚ್ಚರಿಕೆ ನೀಡಿತ್ತು.
ವುಹಾನ್ ನ್ಯಾಯಾಲಯ ಹೊರಡಿಸಿದ ಆದೇಶವನ್ನು ಒಪ್ಪದ ದೆಹಲಿ ಹೈಕೋರ್ಟ್, ವಾಸ್ತವವಾಗಿ ಮತ್ತು ಪ್ರಾಯೋಗಿಕವಾಗಿ ಹೇಳುವುದಾದರೆ, ಅಂತಹ ಯಾವುದೇ ನ್ಯಾಯವ್ಯಾಪ್ತಿ ಅಸ್ತಿತ್ವದಲ್ಲಿಲ್ಲ… ನ್ಯಾಯವ್ಯಾಪ್ತಿ ಇಲ್ಲದ ಒಂದು ದೇಶದ ನ್ಯಾಯಾಲಯದ ಇಂತಹ ನಿರ್ಧಾರ ಮತ್ತೊಂದು ದೇಶದ ನ್ಯಾಯ ವ್ಯವಸ್ಥೆಗೆ ಕಂದಕ ತೋಡುತ್ತದೆ… ತನ್ನ ನ್ಯಾಯವ್ಯಾಪ್ತಿಯ ಮೇಲೆ ಮತ್ತು ತನ್ನ ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ನಡೆಯುವ ಇಂತಹ ದಾಳಿಯಿಂದ ರಕ್ಷಿಸಲು ಇನ್ನೊಂದು ರಾಷ್ಟ್ರದ ನ್ಯಾಯಾಲಯ ಬದ್ಧವಾಗಿರುತ್ತದೆ ಎಂದು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಭಾರತೀಯ ಪೇಟೆಂಟ್ ಉಲ್ಲಂಘನೆ ಕುರಿತ ವ್ಯಾಜ್ಯಗಳನ್ನು ನಿರ್ವಿವಾದವಾಗಿ, ಭಾರತದಲ್ಲಿ ಮಾತ್ರ ಪ್ರಶ್ನಿಸಬಹುದು. ಪೇಟೆಂಟ್ ಹಕ್ಕುಗಳು ಪ್ರಾದೇಶಿಕ ಸ್ವರೂಪದ್ದಾಗಿದ್ದು ಅವುಗಳನ್ನು ಸಂಬಂಧಪಟ್ಟ ಸಾರ್ವಭೌಮ ರಾಜ್ಯದಿಂದ ಮಾತ್ರ ನೀಡಲಾಗುತ್ತದೆ. ಆದ್ದರಿಂದ, ಪ್ರಸ್ತುತ ಪ್ರಕರಣದಲ್ಲಿ ಫಿರ್ಯಾದಿಗಳು ಭಾರತದ ಹೊರಗಿನ ಯಾವುದೇ ವೇದಿಕೆಯಿಂದ ತಡೆಯಾಜ್ಞೆ ಪಡೆಯಲು ಸಮರ್ಥರು ಎಂಬ ಪ್ರಶ್ನೆಯೇ ಇಲ್ಲ ಎಂದು ನ್ಯಾಯಾಲಯ ಹೇಳಿದೆ. ಇದೇ ವೇಳೆ ಈ ಅಂಶವನ್ನು ವುಹಾನ್ ನ್ಯಾಯಾಲಯ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಅದು ತಿಳಿಸಿದೆ. ಅಲ್ಲದೆ ದೆಹಲಿ ನ್ಯಾಯಾಲಯದಲ್ಲಿ ಮೊಕದ್ದಮೆ ಬಾಕಿ ಇರುವ ಸಂಗತಿಯನ್ನು ಶಿವೋಮಿ ಮುಚ್ಚಿಟ್ಟಿದೆ ಎಂಬ ವಿಚಾರವನ್ನು ಕೂಡ ನ್ಯಾಯಾಲಯ ದಾಖಲಿಸಿಕೊಂಡಿತು.
ಒಂದು ವೇಳೆ ವುಹಾನ್ ನ್ಯಾಯಾಲಯ ಇಂಟರ್ ಡಿಜಿಟಲ್ ವಿರುದ್ದ ದಿನವೊಂದಕ್ಕೆ ಹತ್ತು ಲಕ್ಷ ಯುವಾನ್ ಹಣ ಪಾವತಿಸಲು ಸೂಚಿಸಿದರೆ ಶಿವೋಮಿ ಕೂಡ ಅಷ್ಟೇ ಮೊತ್ತದ ಹಣವನ್ನು ಈ ನ್ಯಾಯಾಲಯಕ್ಕೆ ಜಮೆ ಮಾಡಬೇಕಾಗುತ್ತದೆ ಮತ್ತು ಇಂಟರ್ ಡಿಜಿಟಲ್ ಈ ಹಣ ಪಡೆಯಲು ಅರ್ಹ ಎಂದು ಎಚ್ಚರಿಕೆ ನೀಡಿದೆ. ಇಂಟರ್‌ಡಿಜಿಟಲ್ ಪರವಾಗಿ ಹಿರಿಯ ವಕೀಲ ಗೌರಬ್ ಬ್ಯಾನರ್ಜಿ ಮತ್ತು ಶಿವೋಮಿ ಕಂಪೆನಿ ಪರವಾಗಿ ಮತ್ತೊಬ್ಬ ಹಿರಿಯ ನ್ಯಾಯವಾದಿ ನೀರಜ್ ಕೃಷ್ಣನ್ ಕೌಲ್ ಹಾಜರಿದ್ದರು.
ಆದೇಶವನ್ನು ಇಲ್ಲಿ ಓದಿ: