
ಡೈಸಿ ಎಂಬ ಬೆಕ್ಕಿನ ಅಪಹರಣ ಕುರಿತು "ನ್ಯಾಯದ ವಿಕ್ಷಿಪ್ತ ಅನ್ವೇಷಣೆ"ಯಲ್ಲಿ ತಲ್ಲೀನರಾಗಿದ್ದಕ್ಕಾಗಿ ಪೊಲೀಸರ ಬಗ್ಗೆ ಅಸಮಾಧಾನ ದಾಖಲಿಸಿರುವ ಕರ್ನಾಟಕ ಹೈಕೋರ್ಟ್, ನೆರೆ ಮನೆಯ ಬೆಕ್ಕನ್ನು ಅಪಹರಿಸಿದ ಸಂಬಂಧ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಮಂಗಳವಾರ ವಜಾಗೊಳಿಸಿದೆ.
ಬೆಕ್ಕಿನ ಅಪಹರಣ ಆರೋಪಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿರುವುದಕ್ಕೆ ಆಘಾತ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು “ಡೈಸಿ ಹೆಸರಿನ ಬೆಕ್ಕು ಎಲ್ಲರ ಮತಿಗೆಡಿಸಿದ್ದು, ಇದಕ್ಕೆ ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯೂ ಹೊರತಾಗಿಲ್ಲ” ಎಂದಿದೆ.
“ದೂರಿನ ಅಂಶಗಳನ್ನು ನೋಡಿದಾಗ ಪೊಲೀಸರು ಹೇಗೆ ಪ್ರಕರಣ ದಾಖಲಿಸಿದ್ದಾರೆ ಎಂಬುದು ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತ ಉಂಟು ಮಾಡಿದೆ. ಬೆಕ್ಕು ನಾಪತ್ತೆಯಾಗಿರುವುದು ಮತ್ತು ಆರೋಪಿಯು ತನ್ನ ಮನೆಯಲ್ಲಿ ಬೆಕ್ಕನ್ನು ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿರುವುದನ್ನು ಹೊರತುಪಡಿಸಿ ಯಾವುದೇ ಅಪರಾಧ ಕಾಣುತ್ತಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ನಿಖಿತಾ ಅಂಜನಾ ಐಯ್ಯರ್ ಎಂಬವರು 2022ರಲ್ಲಿ ನೀಡಿದ್ದ ದೂರಿನ ಅನ್ವಯ ತಾಹ ಹುಸೇನ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿದೆ. ಮೊದಲಿಗೆ ಪೊಲೀಸರು ಹುಸೇನ್ ವಿರುದ್ಧ ಐಪಿಸಿ ಸೆಕ್ಷನ್ 428 ಮತ್ತು 429 ಅಡಿ ಪ್ರಕರಣ ದಾಖಲಿಸಿದ್ದರು. ಆನಂತರ ಐಪಿಸಿ ಸೆಕ್ಷನ್ 504, 506 ಮತ್ತು 509 ಮಾತ್ರ ಉಳಿಸಿದ್ದರು.
ನಾಪತ್ತೆಯಾಗಿರುವ ಬೆಕ್ಕಿನ ಪ್ರಕರಣದಲ್ಲಿ ಇಡೀ ಪೊಲೀಸ್ ವ್ಯವಸ್ಥೆ ಭಾಗಿಯಾಗಿದ್ದು, ಸಿಸಿಟಿವಿ ತುಣುಕು ಪರಿಶೀಲಿಸಿ, ಏನೂ ಸಿಗದಿದ್ದರೂ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ. “ದೂರಿನಲ್ಲಿ ಇರದ ಅಂಶಗಳನ್ನೂ ಆರೋಪ ಪಟ್ಟಿ ಒಳಗೊಂಡಿದೆ. ದೂರುದಾರೆಯನ್ನು ನಿಂದಿಸಿರುವುದು ಮತ್ತು ಲೈಂಗಿಕ ಸಂಜ್ಞೆಗಳನ್ನು ಮಾಡಿರುವುದನ್ನೂ ಆರೋಪ ಪಟ್ಟಿ ಒಳಗೊಂಡಿದೆ. ಈ ಅಂಶಗಳು ದೂರಿನಲ್ಲಿ ಇಲ್ಲದಿದ್ದರೂ ಆರೋಪ ಪಟ್ಟಿಯಲ್ಲಿ ಸ್ಥಾನ ಪಡೆದಿವೆ” ಎಂದು ನ್ಯಾಯಾಲಯ ಕಿಡಿಕಾರಿದೆ.
“ಹುಸೇನ್ ವಿರುದ್ಧ ಐಪಿಸಿ ಸೆಕ್ಷನ್ 504 ಮತ್ತು 506 ಅನ್ವಯಿಸಲು ಸಣ್ಣ ಅಂಶವೂ ಇಲ್ಲ. ಅದಾಗ್ಯೂ, ಪೊಲೀಸರು ಹೇಗೆ ಐಪಿಸಿ ಸೆಕ್ಷನ್ 509 ಅನ್ನು ಹುಸೇನ್ ವಿರುದ್ಧ ಅನ್ವಯಿಸಿದ್ದಾರೆ” ಎಂದು ನ್ಯಾಯಾಲಯ ಪ್ರಶ್ನಿಸಿದೆ. “ಮಹಿಳೆಯ ಮಾನಭಂಗ ಮಾಡಿದರೆ ಐಪಿಸಿ ಸೆಕ್ಷನ್ 509 ಅನ್ವಯಿಸಲಾಗುತ್ತದೆ. ದೂರಿನಲ್ಲಿ ಅಂಶಗಳಿಗೆ ಈ ನಿಬಂಧನೆ ಅನ್ವಯಿಸುತ್ತದೆಯೇ ಎಂಬುದು ನಿಗೂಢವಾಗಿದೆ” ಎಂದು ನ್ಯಾಯಾಲಯ ಹೇಳಿದೆ.
“ಮೊದಲಿಗೆ ಪ್ರಕರಣದಲ್ಲಿ ಸಂಜ್ಞೇ ಅಪರಾಧ ಇಲ್ಲದಿರುವುದರಿಂದ ಪೊಲೀಸರು ದೂರನ್ನು ಪರಿಗಣಿಸಬಾರದಿತ್ತು. ದೂರಿನಲ್ಲಿ ಯಾವುದೇ ತೆರನಾದ ಸಂಜ್ಞೇಯರಹಿತ ಅಪರಾಧವಿಲ್ಲ. ಪೊಲೀಸರು ಅಪ್ರಸ್ತುತ ಕಾರಣಗಳಿಗಾಗಿ ದೂರು ಪರಿಗಣಿಸಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.
“ಇದು ಕ್ರಿಮಿನಲ್ ಪ್ರಕ್ರಿಯೆಯ ದುರ್ಬಳಕೆಯಾಗಿದ್ದು, ಇಂಥ ಕ್ಷುಲ್ಲಕ ಪ್ರಕರಣಗಳಿಗೆ ಕ್ರಿಮಿನಲ್ ವಿಚಾರಣೆ ನಡೆಯಲು ಅನುಮತಿಸುವುದು ನ್ಯಾಯಾಲಯದ ಅಮೂಲ್ಯ ಸಮಯದ ವ್ಯರ್ಥವಾಗಲಿದ್ದು, ಪೊಲೀಸ್ ಸಂಪತ್ತನ್ನು ನೈಜ ಅಹವಾಲಿನಿಂದ ವಿಮುಖಗೊಳಿಸಿದಂತಾಗಲಿದೆ. ದೂರುದಾರೆಯು ವಿಚಾರಣೆಗೆ ಗೈರಾಗಿರುವುದು ಆಕೆಯ ಸುಳ್ಳು ಗಂಭೀರ ಆರೋಪಗಳಿಗೆ ಉತ್ತರವಿಲ್ಲದಂತಾಗಿದೆ. ವಿಚಾರಣೆಯಲ್ಲಿ ವೈಯಕ್ತಿಕ ಅಥವಾ ವಕೀಲರ ಮೂಲಕ ಹಾಜರಾಗದ ದೂರುದಾರೆಯು ದುರುದ್ದೇಶಪೂರಿತ ಪ್ರಾಸಿಕ್ಯೂಷನ್ ನಡೆಸಿದ್ದಕ್ಕಾಗಿ ಕಾನೂನು ಪ್ರಕ್ರಿಯೆ ಕೈಗೊಳ್ಳಲು ನ್ಯಾಯಾಲಯವು ಅರ್ಜಿದಾರರಿಗೆ ಅನುಮತಿಸಿದೆ.
ಅಲ್ಲದೇ, “ಡೈಸಿ ಹೆಸರಿನ ಬೆಕ್ಕಿನ ಅಪಹರಣದಲ್ಲಿ ನ್ಯಾಯದ ವಿಕ್ಷಿಪ್ತ ಅನ್ವೇಷಣೆಯಲ್ಲಿ ತೊಡಗಿರುವ ಪೊಲೀಸರಿಗೆ ಕಠಿಣ ಎಚ್ಚರಿಕೆಯ ಅಗತ್ಯವಿದ್ದು, ಇಂಥ ಪ್ರಕರಣಗಳು ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯಲ್ಲಿ ಕಾನೂನು ಎಂಬುದು ಒಂದು ಗಂಭೀರ ಸಾಧನವಾಗಿದ್ದು ಅದು ವೈಯಕ್ತಿಕ ದ್ವೇಷಕ್ಕೆ ಬಳಕೆ ಮಾಡುವ ಆಟಿಕೆಯಲ್ಲ ಎಂದು ಎಚ್ಚರಿಸಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.