ಹಿರಿಯ ರಾಜಕಾರಣಿ ಶರದ್ ಪವಾರ್ ಅವರ ಭಾವಚಿತ್ರ ಮತ್ತು ಗಡಿಯಾರದ ಚಿಹ್ನೆ ಬಳಸದಂತೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಜಿತ್ ಪವಾರ್ ಬಣಕ್ಕೆ ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶನ ನೀಡಿದೆ (ಶರದ್ ಪವಾರ್ ಮತ್ತು ಅಜಿತ್ ಅನಂತ್ ರಾವ್ ಪವಾರ್ ಇನ್ನಿತರರ ನಡುವಣ ಪ್ರಕರಣ).
ಅಜಿತ್ ಪವಾರ್ ಬಣವು ಸ್ವತಂತ್ರ ಅಸ್ಮಿತೆ ಹೊಂದಿರುವುದರಿಂದ, ಅದು ಆ ಅಸ್ಮಿತೆಯೊಂದಿಗೆ ಮಾತ್ರ ಮುಂದುವರಿಯಬೇಕು ಶರದ್ ಪವಾರ್ ಬಣದ ಚಿಹ್ನೆ ಮತ್ತು ಗುರುತನ್ನು ಬಳಸಬಾರದು ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ ವಿ ವಿಶ್ವನಾಥನ್ ಅವರ ನ್ಯಾಯಪೀಠವು ವಿಚಾರಣೆ ವೇಳೆ ಸ್ಪಷ್ಟಪಡಿಸಿತು.
"ಚುನಾವಣೆ ಬಂದಾಗ ನಿಮಗೆ ಅವರ ಹೆಸರು ಬೇಕು, ಚುನಾವಣೆ ಇಲ್ಲದಿದ್ದಾಗ ನಿಮಗೆ ಅವರ ಅಗತ್ಯ ಇರುವುದಿಲ್ಲ. ನೀವೀಗ ಸ್ವತಂತ್ರ ಗುರುತು ಪಡೆದಿರುವುದರಿಂದ ನೀವು ಅದರಲ್ಲಿಯೇ ಮುಂದುವರೆಯಬೇಕು" ಎಂದು ನ್ಯಾಯಾಲಯ ಅಜಿತ್ ಪವಾರ್ ಬಣದ ಕಿವಿ ಹಿಂಡಿತು.
ಅಜಿತ್ ಪವಾರ್ ನೇತೃತ್ವದ ಬಣ ನೈಜ ಎನ್‌ಸಿಪಿ ಎಂದು ಗುರುತಿಸಿ ಚುನಾವಣಾ ಆಯೋಗ ಫೆಬ್ರವರಿ 6ರಂದು ಕೈಗೊಂಡಿದ್ದ ನಿರ್ಧಾರವನ್ನು ಶರದ್ ಪವಾರ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅಜಿತ್ ಬಣ ಪ್ರಸ್ರುತ ಮಹಾರಾಷ್ಟ್ರದ ಆಡಳಿತಾರೂಢ ಏಕನಾಥ್ ಶಿಂಧೆ ಸರ್ಕಾರವನ್ನು ಬೆಂಬಲಿಸುತ್ತಿದೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಒಟ್ಟು ಎನ್‌ಸಿಪಿ ಶಾಸಕರ ಸಂಖ್ಯೆ 81. ಈ ಪೈಕಿ ಅಜಿತ್ ಪವಾರ್ ಅವರ ಪರವಾಗಿ 57 ಶಾಸಕರು ಅಫಿಡವಿಟ್ ಸಲ್ಲಿಸಿದ್ದರೆ, ಶರದ್ ಪವಾರ್ ಪರ ಕೇವಲ 28 ಎಂಎಲ್‌ಎಗಳು ಅಫಿಡವಿಟ್ ನೀಡಿದ್ದರು.
ಪಕ್ಷದ ಸಾಂಸ್ಥಿಕ ರಚನೆ, ಅದರ ಸದಸ್ಯರು ಮತ್ತು ಅವರು ಸ್ಪರ್ಧಿಸಿದ ಚುನಾವಣೆಗಳ ವಿವರಗಳಿಗೆ ಯಾವುದೇ ಆಧಾರ ಇಲ್ಲದಿರುವುದು ಕಂಡುಬಂದದ್ದರಿಂದ ಪಕ್ಷದ ಸಾಂಸ್ಥಿಕ ವಿಭಾಗದಲ್ಲಿ ಬಹುಮತ ಪರೀಕ್ಷೆ ನಡೆಸಲು ಕೋರಿದ್ದ ಅರ್ಜಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿತ್ತು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಶರದ್ ಪವಾರ್ ಪ್ರಶ್ನಿಸಿದ್ದರು.
ಈ ಸಂಬಂಧ ಸರ್ವೋಚ್ಚ ನ್ಯಾಯಾಲಯ ಫೆಬ್ರವರಿಯಲ್ಲಿ, ಅಜಿತ್ ಪವಾರ್ ಮತ್ತು ಚುನಾವಣಾ ಆಯೋಗದಿಂದ ಪ್ರತಿಕ್ರಿಯೆ ಕೇಳಿತ್ತು. ಶರದ್ ಪವಾರ್ ಬಣಕ್ಕೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ - ಶರದ್ ಚಂದ್ರ ಪವಾರ್ ಎಂಬ ಹೆಸರನ್ನು ಬಳಸುವುದನ್ನು ಮುಂದುವರಿಸಲು ಮಧ್ಯಂತರ ಆದೇಶ ನೀಡಿತ್ತು.
ಹೊಸ ಚಿಹ್ನೆಗಾಗಿ ಶರದ್ ಪವಾರ್ ಬಣದ ಅರ್ಜಿಯ ಬಗ್ಗೆ ಒಂದು ವಾರದೊಳಗೆ ನಿರ್ಧರಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಲಾಗಿತ್ತು.
ಶರದ್ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರು ಅಜಿತ್ ಬಣ ತನ್ನ ಪೋಸ್ಟರ್‌ಗಳಲ್ಲಿ ಶರದ್ ಪವಾರ್ ಅವರ ಭಾವಚಿತ್ರ ಮತ್ತು ಗಡಿಯಾರದ ಚಿಹ್ನೆ ಬಳಸುತ್ತಿದ್ದು ಇದು ಪೇಟೆಂಟ್ ವಂಚನೆಯಾಗುತ್ತದೆ ಎಂದು ದೂರಿದರು.
ಇದಕ್ಕೆ ತಲೆದೂಗಿದ ನ್ಯಾ. ಸೂರ್ಯಕಾಂತ್ ಅವರು ಶರದ್ ಪವಾರ್ ಅವರ ಚಿತ್ರ ಮತ್ತು ಗಡಿಯಾರದ ಚಿಹ್ನೆಯನ್ನು ಬಳಸುವುದಿಲ್ಲ ಎಂದು ಸ್ಪಷ್ಟ ಭರವಸೆ ನೀಡುವಂತೆ ಅಜಿತ್ ಪವಾರ್ ಬಣಕ್ಕೆ ಸೂಚಿಸಿದರು.
ಅಜಿತ್ ಬಣ ಶರದ್ ಬಣದೊಂದಿಗೆ ಇರದೆ ಇರಲು ನಿರ್ಧರಿಸಿರುವುದರಿಂದ ಅದು ತನ್ನದೇ ಆದ ಗುರುತಿನೊಂದಿಗೆ ಮುಂದುವರೆಯಬೇಕು ಎಂದರು.
"ನೀವು ಈಗ ವಿಭಿನ್ನ ರಾಜಕೀಯ ಪಕ್ಷ, ಆದ್ದರಿಂದ ಅವರ ಚಿತ್ರವನ್ನು ಏಕೆ ಬಳಸಬೇಕು? ಈಗ ನಿಮ್ಮ ಸ್ವಂತ ಗುರುತಿನೊಂದಿಗೆ ಹೋಗಿ. ನೀವು ಅವರೊಂದಿಗೆ ಇರದಿರಲು ನಿರ್ಧರಿಸಿದ್ದೀರಿ, "ಎಂದು ಅವರು ಹೇಳಿದರು.
ಅಜಿತ್ ಬಣದ ಪರ ವಾದ ಮಂಡಿಸಿದ ಹಿರಿಯ ವಕೀಲ ಮಣಿಂದರ್ ಸಿಂಗ್ ನ್ಯಾಯಾಲಯದ ನಿರ್ದೇಶನಗಳನ್ನು ಅಕ್ಷರಶಃ ಜಾರಿಗೆ ತರಲು ಯತ್ನಿಸುವುದಾಗಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ಸಲ್ಲಿಸಲು ಅಜಿತ್ ಬಣಕ್ಕೆ ಎರಡು ದಿನಗಳ ಕಾಲಾವಕಾಶ ನೀಡಿದ ನ್ಯಾಯಾಲಯ ಪ್ರಕರಣವನ್ನು ಮಾರ್ಚ್ 18ಕ್ಕೆ ಮುಂದೂಡಿತು.