ಮತ್ತೊಂದು ಠಾಣೆಗೆ ಎಫ್‌ಐಆರ್ ವರ್ಗಾಯಿಸಿದಾಗ ಸಂಬಂಧಿತ ನ್ಯಾಯಾಲಯದ ಗಮನಕ್ಕೆ ತಕ್ಷಣ ತರಬೇಕು: ಹೈಕೋರ್ಟ್‌

ಆರೋಪ ಪಟ್ಟಿ ಯಾವುದೇ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಕೂಡಲೇ ಅದರ ಸಂಖ್ಯೆ ಮತ್ತು ದಿನಾಂಕವನ್ನು ನ್ಯಾಯಾಧೀಶರು ನಮೂದಿಸಬೇಕು. ಹಾಗೆಯೇ, ಆ ಬಗ್ಗೆ ಪರಿಶೀಲಿಸಿ ಆದೇಶದಲ್ಲಿ ಟಿಪ್ಪಣಿ ಲಗತ್ತಿಸಲು ಗುಮಾಸ್ತರಿಗೆ ನಿರ್ದೇಶಿಸಬೇಕು ಎಂದಿರುವ ನ್ಯಾಯಾಲಯ.
Karnataka HC, Kalburgi Bench
Karnataka HC, Kalburgi Bench

ಅಪರಾಧ ಪ್ರಕರಣಗಳಲ್ಲಿನ ಪ್ರಥಮ ವರ್ತಮಾನ ವರದಿಯನ್ನು (ಎಫ್‌ಐಆರ್) ಒಂದು ಪೊಲೀಸ್ ಠಾಣೆಯಿಂದ ಮತ್ತೊಂದು ಠಾಣೆಗೆ ವರ್ಗಾಯಿಸಿದಾಗ ಕೂಡಲೇ ಸಂಬಂಧಪಟ್ಟ ನ್ಯಾಯಾಲಯದ ಗಮನಕ್ಕೆ ತರಲು ಎಲ್ಲಾ ಪೊಲೀಸ್ ಠಾಣೆ ಮತ್ತು ಸರ್ಕಾರಿ ಅಭಿಯೋಜಕರಿಗೆ ಸೂಚಿಸಿ, ಸುತ್ತೋಲೆ ಹೊರಡಿಸಬೇಕು ಎಂದು ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ಆದೇಶಿಸಿದೆ.

ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ಎನ್ ದೇಸಾಯಿ ಅವರ ನೇತೃತ್ವದ ಏಕಸದಸ್ಯ ಪೀಠವು ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ತನಿಖಾಧಿಕಾರಿಗಳು ಎಫ್‌ಐಆರ್ ವರ್ಗಾವಣೆ ಮತ್ತು ಆರೋಪಪಟ್ಟಿ ಸಲ್ಲಿಕೆ ಮಾಡುವ ಬಗ್ಗೆ ಸಂಬಂಧಿಸಿದ ನ್ಯಾಯಾಲಯಗಳಿಗೆ ಮಾಹಿತಿ ನೀಡುವಲ್ಲಿ ಜಾಗರೂಕತೆ ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಪ್ರಕರಣದ ವಾಸ್ತವ ಅಂಶಗಳನ್ನು ಗಮನಿಸಿದ ನ್ಯಾಯಾಲಯವು ಸರ್ಕಾರಿ ಅಭಿಯೋಜಕರು ಮತ್ತು ತನಿಖಾಧಿಕಾರಿ ಎಫ್‌ಐಆರ್ ವರ್ಗಾವಣೆ ಮತ್ತು ಆರೋಪ ಪಟ್ಟಿ ಸಲ್ಲಿಕೆಯ ಬಗ್ಗೆ ನಿಗಾವಹಿಸಿಲ್ಲ. ಇದರಿಂದ ನ್ಯಾಯದಾನ ಸಫಲವಾಗಲಿಲ್ಲ. ಎರಡೆರಡು ನ್ಯಾಯಾಲಯಗಳಲ್ಲಿ ವಿಚಾರಣಾ ಪ್ರಕ್ರಿಯೆ ನಡೆದಿದೆ. ಹೀಗಾಗಿ, ವಿಚಾರಣಾಧೀನ ನ್ಯಾಯಾಲಯವು ಸರ್ಕಾರಿ ಅಭಿಯೋಜಕರು ಹಾಗೂ ತನಿಖಾಧಿಕಾರಿಯಿಂದ ಆರೋಪ ಪಟ್ಟಿ ಸಲ್ಲಿಕೆಯನ್ನು ಖಾತರಿಪಡಿಕೊಳ್ಳಬೇಕು. ಎಫ್‌ಐಆರ್ ವರ್ಗಾವಣೆಯಾದ ಕೂಡಲೇ ಸಂಬಂಧಪಟ್ಟ ನ್ಯಾಯಾಲಯದ ಗಮನಕ್ಕೆ ತರಬೇಕು. ಈ ಸಂಬಂಧ ಎಲ್ಲಾ ಪೊಲೀಸ್ ಠಾಣೆಗಳಿಗೆ ಮತ್ತು ಅಭಿಯೋಜಕರಿಗೆ ಸೂಚಿಸಿ ಸರ್ಕಾರವು ಸುತ್ತೋಲೆ ಹೊರಡಿಸಬೇಕು ಎಂದು ನಿರ್ದೇಶಿಸಿದೆ.

ಅಲ್ಲದೆ, ಆರೋಪ ಪಟ್ಟಿ ಯಾವುದೇ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಕೂಡಲೇ ಅದರ ಸಂಖ್ಯೆ ಮತ್ತು ದಿನಾಂಕವನ್ನು ನ್ಯಾಯಾಧೀಶರು ನಮೂದಿಸಬೇಕು. ಹಾಗೆಯೇ, ಆ ಬಗ್ಗೆ ಪರಿಶೀಲಿಸಿ ಆದೇಶದಲ್ಲಿ ಟಿಪ್ಪಣಿ ಲಗತ್ತಿಸಲು ಗುಮಾಸ್ತರಿಗೆ ನಿರ್ದೇಶಿಸಬೇಕು. ಇಂತಹ ವಿಧಾನಗಳನ್ನು ಅನುಸರಿಸುವುದರಿಂದ ಈ ರೀತಿಯ ಸನ್ನಿವೇಶಗಳನ್ನು ನಿಯಂತ್ರಿಸಬಹುದು ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅರ್ಜಿ ವಜಾಗೊಳಿಸಿ ಆರೋಪಿಯು ಹೊಸದಾಗಿ ಜಾಮೀನಿಗೆ ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಅಪರಿಚಿತ ಶವ ಪತ್ತೆ ಸಂಬಂಧ 2021ರ ಆಗಸ್ಟ್‌ 8ರಂದು ದಾಖಲಾದ ದೂರು ಸಂಬಂಧ ಕಲಬುರಗಿಯ ಮಹಾಗಾಂವ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, 2021ರ ಸೆಪ್ಟೆಂಬರ್‌ 10ರಂದು ಆರೋಪಿ ಸುನೀಲ್ ಅವರನ್ನು ಕೊಲೆ ಆರೋಪದಡಿ ಬಂಧಿಸಿದ್ದರು. ನಂತರ ನಿಗದಿತ 90 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಿಲ್ಲ ಎಂದು ತಿಳಿಸಿ ಜಾಮೀನು ಕೋರಿ 2021ರ ಡಿಸೆಂಬರ್‌ 17ರಂದು ಸುನೀಲ್‌ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ‘ಡಿಫಾಲ್ಟ್ ಜಾಮೀನು’ ನೀಡಿದ್ದ ಕಲಬುರಗಿಯ 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಜಾಮೀನಿಗೆ ಭದ್ರತೆ ಪಡೆಯಲು ಪ್ರಕರಣವನ್ನು 2021ರ ಡಿಸೆಂಬರ್‌ 22ಕ್ಕೆ ನಿಗದಿಪಡಿಸಿತ್ತು.

ಈ ವೇಳೆ ನ್ಯಾಯಾಲಯದ ಗುಮಾಸ್ತರು ಟಿಪ್ಪಣಿ ಹಾಕಿ, ಘಟನೆ ನಡೆದ ಆಧಾರದ ಮೇಲೆ ಪ್ರಕರಣದ ದಾಖಲಾದ ಒಂದು ತಿಂಗಳೊಳಗೆ ಕಲಬುರಗಿ ಗ್ರಾಮಾಂತರ ಠಾಣೆಗೆ ಎಫ್‌ಐಆರ್ ವರ್ಗಾವಣೆಗೊಂಡಿದೆ. ನಂತರ ಗ್ರಾಮಾಂತರ ಪೊಲೀಸರು ಹೊಸ ಎಫ್‌ಐಆರ್ ದಾಖಲಿಸಿ, ನಿಗದಿತ 90 ದಿನಗಳ ಒಳಗೆ ಆರೋಪ ಪಟ್ಟಿಯನ್ನು 5ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆದರೆ, ವಿಚಾರವನ್ನು ನ್ಯಾಯಾಲಯಕ್ಕೆ ತಿಳಿಸಿರಲಿಲ್ಲ ಎಂದು ಮಾಹಿತಿ ನೀಡಿದ್ದರು.

ಇದರಿಂದ 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಭದ್ರತಾ ಖಾತರಿ ಸ್ವೀಕರಿಸಲು ನಿರಾಕರಿಸಿತ್ತು. ಈ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಸುನೀಲ್ ಅರ್ಜಿ ಸಲ್ಲಿಸಿ, ಭದ್ರತಾ ಖಾತರಿ ಸ್ವೀಕರಿಸಲು ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶಿಸುವಂತೆ ಕೋರಿದ್ದರು.

Kannada Bar & Bench
kannada.barandbench.com