ಸಿಎಟಿ ಆದೇಶ ಪ್ರಶ್ನಿಸಿರುವ ಅರ್ಜಿ ವಿಲೇವಾರಿಯಾಗುವರೆಗೆ ವಿಕಾಸ್‌ ಪುನರ್‌ ನೇಮಕಾತಿಗೆ ಒತ್ತಾಯ ಮಾಡಕೂಡದು: ಹೈಕೋರ್ಟ್‌

“ಅಧಿಕಾರಿಗಳನ್ನು ಬೇರೆ ಹುದ್ದೆಗೆ ವರ್ಗಾಯಿಸಿದರೆ ಸಾಕೆ ಅಥವಾ ಅಮಾನತಿನಲ್ಲಿಡುವುದು ಸರಿಯೇ ಎಂಬುದನ್ನು ಸರ್ಕಾರ ಸಮರ್ಥಿಸಬೇಕು” ಎಂದರು.
ಸಿಎಟಿ ಆದೇಶ ಪ್ರಶ್ನಿಸಿರುವ ಅರ್ಜಿ ವಿಲೇವಾರಿಯಾಗುವರೆಗೆ ವಿಕಾಸ್‌ ಪುನರ್‌ ನೇಮಕಾತಿಗೆ ಒತ್ತಾಯ ಮಾಡಕೂಡದು: ಹೈಕೋರ್ಟ್‌
Published on

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈಚೆಗೆ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದ ಸಂಬಂಧ ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತುಗೊಂಡಿದ್ದ ಐಪಿಎಸ್‌ ಅಧಿಕಾರಿ ವಿಕಾಸ್‌ ಕುಮಾರ್‌ ವಿಕಾಸ್‌ ಅವರು ಹಾಲಿ ಪ್ರಕರಣವನ್ನು ಅಂತಿಮವಾಗಿ ವಿಲೇವಾರಿ ಮಾಡುವವರೆಗೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯ ಆದೇಶ ಜಾರಿಗೆ ಒತ್ತಾಯ ಮಾಡಬಾರದು ಎಂದು ಮೌಖಿಕವಾಗಿ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ವಿಕಾಸ್‌ ಕುಮಾರ್‌ ಪರವಾಗಿ ಸಿಎಟಿ ಮಾಡಿರುವ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್‌ ಜಿ ಪಂಡಿತ್‌ ಮತ್ತು ಟಿ ಎಂ ನದಾಫ್‌ ಅವರ ವಿಭಾಗೀಯ ಪೀಠ ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ರಾಜ್ಯ ಸರ್ಕಾರವು ವಿಕಾಸ್‌ ಸೇರಿ ಐವರು ಪೊಲೀಸರನ್ನು ಜೂನ್‌ 5ರಂದು ಅಮಾನತುಗೊಳಿಸಿತ್ತು” ಎಂದರು.

ಆಗ ಪೀಠವು “ಅಧಿಕಾರಿಗಳನ್ನು ಬೇರೆ ಹುದ್ದೆಗೆ ವರ್ಗಾಯಿಸಿದರೆ ಸಾಕೆ ಅಥವಾ ಅಮಾನತಿನಲ್ಲಿಡುವುದು ಸರಿಯೇ ಎಂಬುದನ್ನು ಸರ್ಕಾರ ಸಮರ್ಥಿಸಬೇಕು” ಎಂದಿತು.

ಇದಕ್ಕೆ ಎಜಿ ಅವರು “ಅಧಿಕಾರಿಗಳ ಅಮಾನತನ್ನು ಸಮರ್ಥಿಸಿ ದಾಖಲೆಗಳನ್ನು ಸಲ್ಲಿಸುತ್ತೇನೆ. ಹೀಗಾಗಿ, ಸಿಎಟಿ ಆದೇಶಕ್ಕೆ ತಡೆ ನೀಡಬೇಕು” ಎಂದರು.

ಈ ಮಧ್ಯೆ, ವಿಕಾಸ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ ಅವರು “ನಾವು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಿಲ್ಲ” ಎಂದರು. ಇದಕ್ಕೆ ಪೀಠವು “ಅಮಾನತು ಆದೇಶ ವಜಾ ಆಗಿದೆ. ನಿಮ್ಮನ್ನು ಪುನಾ ಸೇವೆ ನಿಯೋಜಿಸಿ ಸರ್ಕಾರ ಆದೇಶ ಮಾಡಬೇಕು. ಅರ್ಜಿಯನ್ನು ಅಂತಿಮ ವಿಲೇವಾರಿಗೆ ತೆಗೆದುಕೊಳ್ಳುವವರೆಗೆ ಒತ್ತಾಯ ಮಾಡಬಾರದು” ಎಂದರು.

Also Read
ವಿಕಾಸ್‌ ಅಮಾನತು ರದ್ದುಗೊಳಿಸಿದ್ದ ಆದೇಶದ ವಿರುದ್ಧ ರಾಜ್ಯ ಸರ್ಕಾರದ ಮೇಲ್ಮನವಿ; ಹೈಕೋರ್ಟ್‌ನಲ್ಲಿ ನಾಳೆ ವಿಚಾರಣೆ

ಆಗ ಎಜಿ ಅವರು “ವಿಕಾಸ್‌ ಅವರು ಒತ್ತಾಯ ಮಾಡುವುದಿಲ್ಲ ಎಂಬುದನ್ನು ಪರಿಗಣಿಸಿ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನಡೆಸಬೇಕು” ಎಂದರು. ಇದಕ್ಕೆ ಪೀಠವು “ಧ್ಯಾನ್‌ ಚಿನ್ನಪ್ಪ ಹೇಳಿಕೆ ನೀಡಿದ್ದಾರೆ” ಎಂದಿತು. ಇದಕ್ಕೆ ಧ್ವನಿಗೂಡಿಸಿದ ಧ್ಯಾನ್‌ ಅವರು “ನಾವು ಏನನ್ನೂ ಮಾಡುವುದಿಲ್ಲ” ಎಂದರು.

ಅಂತಿಮವಾಗಿ ಪೀಠವು ಅರ್ಜಿಯ ವಿಚಾರಣೆಯನ್ನು ಜುಲೈ 9ಕ್ಕೆ ಮುಂದೂಡಿತು.

ಜೂನ್‌ 4ರಂದು ಪೊಲೀಸ್‌ ಮಹಾನಿರ್ದೇಶಕರ ವರದಿ ಆಧರಿಸಿ, ಮೇಲ್ನೋಟಕ್ಕೆ ಕರ್ತವ್ಯ ಲೋಪ ಕಂಡುಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇಲಾಖಾ ತನಿಖೆ ನಡೆದಿದ್ದು, ಅದರ ದಾಖಲೆಗಳನ್ನು ಆಧರಿಸಿ, ನ್ಯಾಯ ಮಂಡಳಿಯ ಮುಂದೆ ಸಾಕ್ಷಿ ಇತ್ತೇನೋ ಎಂಬಂತೆ ಆಕ್ಷೇಪಾರ್ಹವಾದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸಿಎಟಿಗೆ ಮುಚ್ಚಿದ ಲಕೋಟೆಯಲ್ಲಿ ಜೂನ್‌ 3 ಮತ್ತು 4ರಂದು ನಡೆದಿರುವ ಘಟನೆಯ ಮಾಹಿತಿಯನ್ನು ಸಲ್ಲಿಕೆ ಮಾಡಲಾಗಿದೆ. ಅದನ್ನು ಪರಿಗಣಿಸದೇ ಸಿಎಟಿ ಆದೇಶ ಮಾಡಿದೆ ಎಂದು ರಾಜ್ಯ ಸರ್ಕಾರ ಸಿಎಟಿ ಆದೇಶಕ್ಕೆ ಆಕ್ಷೇಪಿಸಿತ್ತು.

ಮುಂದುವರೆದು, ಮ್ಯಾಜಿಸ್ಟೀರಿಯಲ್‌ ತನಿಖೆ ಮತ್ತು ನ್ಯಾಯಾಂಗ ತನಿಖಾ ಆಯೋಗ ರಚಿಸಿರುವುದನ್ನು ಸಿಎಟಿಯು ತಪ್ಪಾಗಿ ಅರ್ಥೈಸಿದ್ದು, ಸರ್ಕಾರವು ಕಾಲ್ತುಳಿತಕ್ಕೆ ಯಾರು ಕಾರಣ ಎಂಬುದನ್ನು ಇನ್ನಷ್ಟೇ ಪತ್ತೆಹಚ್ಚಬೇಕಿದೆ ಎಂದು ಹೇಳಿದೆ ಎಂಬ ನಿರ್ಧಾರಕ್ಕೆ ಬಂದಿದೆ ಎಂದು ಸಿಎಟಿಯ ಅವಲೋಕನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.

Kannada Bar & Bench
kannada.barandbench.com