
ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ಅಡ್ವೊಕೇಟ್ ಜನರಲ್ ನೇಮಕ ವಿಳಂಬವಾಗುತ್ತಿರುವ ಬಗ್ಗೆ ಹೈಕೋರ್ಟ್ ಇತ್ತೀಚೆಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ [ ಶ್ರೀ ನವ ದುರ್ಗಾ ಝಲೇರಿ ಮಾತಾ ಟ್ರಸ್ಟ್ ಹಾಗೂ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಅಡ್ವೊಕೇಟ್ ಜನರಲ್ ಅವರು ಇಲ್ಲದೇ ಇರುವುದರಿಂದ ಧಾರ್ಮಿಕ ಮತ್ತು ದತ್ತಿ ಟ್ರಸ್ಟ್‌ಗಳ ಉತ್ತಮ ನಿರ್ವಹಣೆಗಾಗಿ ಸಿವಿಲ್ ಮೊಕದ್ದಮೆ ಹೂಡಲು ಅಡ್ವೊಕೇಟ್ ಜನರಲ್‌ಗೆ (ಎಜಿ) ಅಧಿಕಾರ ನೀಡುವ ಸಿವಿಲ್ ಪ್ರಕ್ರಿಯಾ ಸಂಹಿತೆಯ (ಸಿಪಿಸಿ) ಸೆಕ್ಷನ್ 92 ನಿಷ್ಕ್ರಿಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿನ ಧಾರ್ಮಿಕ ಸ್ಥಳಗಳನ್ನು ನಿಭಾಯಿಸಲು ಕಾನೂನು ಜಾರಿಗೆ ಬರುವವರೆಗೆ, ನವ ದುರ್ಗಾ ಝಲೇರಿ ಮಾತಾ ದೇವಾಲಯದ ಆಡಳಿತವನ್ನು ಶಿವ ಖೋರಿ ದೇವಾಲಯ ಮಂಡಳಿಗೆ ಹಸ್ತಾಂತರಿಸುವ ನಿರ್ಧಾರ ಪ್ರಶ್ನಿಸಿ ಶ್ರೀ ನವದುರ್ಗಾ ಝಲೇರಿ ಮಾತಾ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ರಾಹುಲ್ ಭಾರ್ತಿ ಈ ವಿಚಾರ ತಿಳಿಸಿದರು.
ಜೂನ್ 4 ರಂದು ಸ್ವಾಧೀನಕ್ಕೆ ತಡೆ ನೀಡಿದ ನ್ಯಾಯಾಲಯ ಸಾರ್ವಜನಿಕ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ಉತ್ತಮ ನಿರ್ವಹಣೆಗಾಗಿ ಸಿವಿಲ್ ನ್ಯಾಯಾಲಯದ ವಿಚಾರಣೆಗಳನ್ನು ಪ್ರಾರಂಭಿಸುವಲ್ಲಿ ಅಡ್ವೊಕೇಟ್ ಜನರಲ್ ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂದಿತು.
ಈ ಶಾಸನಬದ್ಧ ಹುದ್ದೆಯನ್ನು ಭರ್ತಿ ಮಾಡದೆ, ಧಾರ್ಮಿಕ ಟ್ರಸ್ಟ್‌ಗಳಲ್ಲಿ ಹೊಣೆಗಾರಿಕೆ ವಹಿಸಲು ಉದ್ದೇಶಿಸಲಾದ ಕಾನೂನು ಕಾರ್ಯವಿಧಾನ ಅಮಾನತುಗೊಳ್ಳುತ್ತದೆ ಎಂದು ನ್ಯಾಯಾಲಯ ಗಮನ ಸೆಳೆಯಿತು. ಪ್ರಕರಣದ ಮುಂದಿನ ವಿಚಾರಣೆ ಜುಲೈ 16ರಂದು ನಡೆಯಲಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ, ಅಡ್ವೊಕೇಟ್ ಜನರಲ್ ಹುದ್ದೆ ಅಕ್ಟೋಬರ್ 2024ರಿಂದ ಖಾಲಿ ಇದೆ. ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾದಾಗ ಮಾಜಿ ಅಡ್ವೊಕೇಟ್ ಜನರಲ್ ಡಿಸಿ ರೈನಾ ಹುದ್ದೆಗೆ ರಾಜೀನಾಮೆ ನೀಡಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಲೆಫ್ಟಿನೆಂಟ್ ಗವರ್ನರ್ ಕಚೇರಿ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನೇತೃತ್ವದ ಹೊಸ ಸರ್ಕಾರದ ನಡುವಿನ ಬಿಕ್ಕಟ್ಟಿನಿಂದಾಗಿ ಈ ಸ್ಥಾನ ಖಾಲಿ ಉಳಿದಿದೆ.