ಪ್ರಸಕ್ತ ವರ್ಷದಲ್ಲಿ ಸುಪ್ರೀಂ ಕೋರ್ಟ್ ಎನ್ ವಿ ರಮಣ, ಯು ಯು ಲಲಿತ್ ಮತ್ತು ಡಿ ವೈ ಚಂದ್ರಚೂಡ್ ಅವರ ರೂಪದಲ್ಲಿ ಮೂವರು ಮುಖ್ಯ ನ್ಯಾಯಮೂರ್ತಿಗಳನ್ನು ಕಂಡಿದೆ.
ಮೇಲಿನ ಮೂವರು ನ್ಯಾಯಮೂರ್ತಿಗಳ ಕಾಲದಲ್ಲಿ ಕಾನೂನು ಸಚಿವ ಕಿರೆನ್ ರಿಜಿಜು ಭಿನ್ನ ಸಂದರ್ಭದಲ್ಲಿ ನ್ಯಾಯಾಂಗ, ನ್ಯಾಯಮೂರ್ತಿಗಳು, ಕೊಲಿಜಿಯಂ ವ್ಯವಸ್ಥೆ ಸೇರಿದಂತೆ ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ವಿವಿಧ ವಿಚಾರಗಳ ಕುರಿತು ನೀಡಿದ ಹೇಳಿಕೆಗಳು ವಿವಿಧ ರೀತಿಯ ವ್ಯಾಖ್ಯಾನ, ಟೀಕೆ-ಟಿಪ್ಪಣಿಗೆ ಒಳಗಾಗಿವೆ. ಈ ಹಿನ್ನೆಲೆಯಲ್ಲಿ ಅವರು ನೀಡಿದ ಹೇಳಿಕೆಗಳನ್ನು ಮತ್ತೊಮ್ಮೆ ಸಾರ ಸಂಗ್ರಹವಾಗಿ ಇಲ್ಲಿ ನೀಡಲಾಗಿದೆ:
ನಾವು (ಸರ್ಕಾರ) ನ್ಯಾಯಮೂರ್ತಿಗಳ ನೇಮಕಾತಿ ಕಡತಗಳನ್ನು ಬಾಕಿ ಇರಿಸಿಕೊಂಡು ಕುಳಿತಿದ್ದೇವೆ ಎಂದು ಹೇಳಬೇಡಿ. ನೀವು ಹಾಗೆ ಹೇಳುವುದಾದರೆ ನಿಮ್ಮಿಷ್ಟದಂತೆ ನ್ಯಾಯಮೂರ್ತಿಗಳನ್ನು ನೇಮಕ ಮಾಡಿಕೊಂಡು ಕಾರ್ಯನಿರ್ವಹಣೆ ಮಾಡಿ ಎಂದು ಟೈಮ್ಸ್ ನೌ ಸಮಾವೇಶದಲ್ಲಿ ರಿಜಿಜು ಹೇಳಿದ್ದರು.
ಗುಜರಾತನ್‌ನಲ್ಲಿ ಏಪ್ರಿಲ್‌ನಲ್ಲಿ ನಡೆದಿದ್ದ ಮಧ್ಯಸ್ಥಿಕೆ ಮತ್ತು ಮಾಹಿತಿ ತಂತ್ರಜ್ಞಾನ ರಾಷ್ಟ್ರೀಯ ಸಮಾವೇಶದಲ್ಲಿ “ನ್ಯಾಯಾಂಗವು ಕಾರ್ಯಾಂಗದಿಂದ ಏನೆಲ್ಲಾ ಬಯಸುತ್ತದೋ ಅದನ್ನು ನಾವು ಪೂರೈಸುತ್ತೇವೆ” ಎಂದು ನ್ಯಾಯಾಂಗ ಮತ್ತು ಶಾಸಕಾಂಗದ ನಡುವೆ ಐಕ್ಯಮತವಿದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು.
ಸುಪ್ರೀಂ ಕೋರ್ಟ್ ಐಪಿಸಿ ಸೆಕ್ಷನ್ 124ಎ (ರಾಷ್ಟ್ರದ್ರೋಹ) ರದ್ದುಪಡಿಸಿದ್ದರ ಕುರಿತು ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ನವೆಂಬರ್ 4ರಂದು “ಯಾರು ದೇಶವನ್ನು ಮುನ್ನಡೆಸಬೇಕು? ನ್ಯಾಯಾಂಗ ದೇಶವನ್ನು ಮುನ್ನಡೆಸಬೇಕೆ ಅಥವಾ ಚುನಾಯಿತ ಸರ್ಕಾರವೇ. ನನಗೆ ತೀರ ಬೇಸರವಾಗಿದೆ… ಇದೊಂದು ಹಳೆಯ ಸೆಕ್ಷನ್ ಆಗಿದ್ದು, ಕೇಂದ್ರ ಸರ್ಕಾರವು ಅದನ್ನು ಪರಿಶೀಲಿಸುತ್ತಿತ್ತು. ಈ ನಡುವೆಯೂ ನ್ಯಾಯಾಲಯದಿಂದ ಆದೇಶ ಬಂದರೆ ಖಂಡಿತವಾಗಿಯೂ ಅದು ಒಳ್ಳೆಯ ಬೆಳವಣಿಗೆಯಲ್ಲ… ಎಲ್ಲರಿಗೂ ಲಕ್ಷ್ಮಣ ರೇಖೆ ಎಂಬುದೊಂದು ಇದೆ. ರಾಷ್ಟ್ರದ ಹಿತದೃಷ್ಟಿಯಿಂದ ಲಕ್ಷ್ಮಣ ರೇಖೆ ದಾಟಬೇಡಿ” ಎಂದು ಹೇಳಿದ್ದರು.
ಬಿಜೆಪಿ ರಾಷ್ಟ್ರೀಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಅವರ ಕುರಿತು ನೀಡಿದ್ದ ಹೇಳಿಕೆಯ ಹಿನ್ನೆಲೆಯಲ್ಲಿ ಅವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗಳನ್ನು ಒಟ್ಟಾಗಿಸಿ ದೆಹಲಿಗೆ ವರ್ಗಾಯಿಸುವ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ ಬಿ ಪರ್ದಿವಾಲಾ ಅವರ ನೇತೃತ್ವದ ವಿಭಾಗೀಯ ಪೀಠವು ಮುಕ್ತ ನ್ಯಾಯಾಲಯದಲ್ಲಿ ಕೆಲವು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ನ್ಯಾಯಮೂರ್ತಿಗಳ ಮೇಲೆ ವ್ಯಾಪಕ ದಾಳಿ ನಡೆಸಲಾಗಿತ್ತು. ಈ ಸಂಬಂಧ ಗುಜರಾತ್‌ನ ಅಹಮದಾಬಾದ್‌ನಲ್ಲಿ ಆರ್‌ಎಸ್‌ಎಸ್‌ನಿಂದ ಪ್ರಕಟಿತ ಮ್ಯಾಗಜೀನ್ ಆಯೋಜಿಸಿದ್ದ ʼಸಾಬರಮತಿ ಸಂವಾದ್ʼನಲ್ಲಿ ರಿಜಿಜು ಅವರು “ಸಾಮಾಜಿಕ ಮಾಧ್ಯಮಗಳು ಅಥವಾ ಸಾರ್ವಜನಿಕ ವೇದಿಕೆಯಲ್ಲಿ ನ್ಯಾಯಮೂರ್ತಿಗಳ ನಿಂದನೆ ಒಪ್ಪಲಾಗದು. ನ್ಯಾಯಾಂಗದ ಗೌರವಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ. ಆದರೆ, ನ್ಯಾಯಮೂರ್ತಿಯೊಬ್ಬರ ನಡತೆ ಅಥವಾ ಟೀಕೆಗಳು ತಪ್ಪಾಗಿ ಜನರ ಭಾವನೆಗಳನ್ನು ಪ್ರಚೋದಿಸುತ್ತದೆ ಎಂದರೆ ಆಗ ನಾವು ಆ ನ್ಯಾಯಮೂರ್ತಿಗಳು ಅಥವಾ ಅವರ ತೀರ್ಪು ಲಕ್ಷ್ಮಣ ರೇಖೆ ದಾಟಿದೆಯೇ, ಟೀಕೆಗೆ ಗುರಿಯಾಗುವ ವ್ಯಾಪ್ತಿಗೆ ಪ್ರವೇಶಿಸಿದ್ದಾರೆಯೆ ಎಂಬುದನ್ನು ಯೋಚಿಸಬೇಕಾಗುತ್ತದೆ. ಹೀಗಾಗಿ, ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು” ಎಂದಿದ್ದರು.
ಕೊಲಿಜಿಯಂ ವ್ಯವಸ್ಥೆ ಕುರಿತು ಮಾತನಾಡಿದ್ದ ರಿಜಿಜು ಅವರು “ಸಂವಿಧಾನಕ್ಕೆ ಕೊಲಿಜಿಯಂ ವ್ಯವಸ್ಥೆ ಅಪರಿಚಿತ. ಕೊಲಿಜಿಯಂ ವ್ಯವಸ್ಥೆಗೆ ಸಂವಿಧಾನದ ಯಾವ ನಿಬಂಧನೆಯಲ್ಲಿ ಅವಕಾಶವಿದೆ ಎಂಬುದನ್ನು ಹೇಳಿ. ಸುಪ್ರೀಂ ಕೋರ್ಟ್ ತನ್ನ ತೀರ್ಪಿನ ಮೂಲಕ ಕೊಲಿಜಿಯಂ ವ್ಯವಸ್ಥೆ ಸೃಷ್ಟಿಸಿದ್ದು, ಇದರ ಪ್ರಕಾರ ನ್ಯಾಯಮೂರ್ತಿಗಳ ಹೆಸರು ಶಿಫಾರಸ್ಸು ಮಾಡಲಾಗುತ್ತದೆ. ಸರ್ಕಾರ ಅದಕ್ಕೆ ಮುದ್ರೆ ಒತ್ತುತ್ತದೆ” ಎಂದು ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಅಸಮಾಧಾನ ಸೂಚಿಸಿದ್ದರು.
ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ದ ಕುರಿತು ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿದ್ದ ರಿಜಿಜು ಅವರು “ಎನ್‌ಜೆಎಸಿಯನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು ರದ್ದು ಮಾಡಿತ್ತು. ಸಂಸತ್‌ನಲ್ಲಿ ಒಕ್ಕೊರಲಿನಿಂದ ಪಾಸು ಮಾಡಲಾಗಿದ್ದ ಕಾಯಿದೆಯನ್ನು ರದ್ದುಪಡಿಸಿದ್ದು ಸರಿಯಾದ ಕ್ರಮವಲ್ಲ ಎಂದು ಹಲವು ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಸಾಂವಿಧಾನಿಕ ಪೀಠದ ಸದಸ್ಯರೇ ಹೇಳಿದ್ದಾರೆ” ಎಂದು ತಿಳಿಸಿದ್ದರು.
“ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ತಿಕ್ಕಾಟವಿದ್ದು, ಸರ್ಕಾರವು ನ್ಯಾಯಾಂಗವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸುತ್ತಿದೆ ಎಂದು ಹೇಳುವುದನ್ನು ಕೇಳುತ್ತಿದ್ದೀರಿ. ಕೆಲವು ರಾಜಕೀಯ ಪಕ್ಷಗಳು ಅಂಥ ಹೇಳಿಕೆ ನೀಡುತ್ತಿದ್ದು, ಕೆಲ ಸಂದರ್ಭದಲ್ಲಿ ಸುದ್ದಿ ಮಾಧ್ಯಮಗಳು ಮಸಾಲಾ ಸೇರಿಸಿ ಸುದ್ದಿ ಪ್ರಸಾರ ಮಾಡುತ್ತಿವೆ. ಆದರೆ, ಪ್ರಧಾನಿ ಮೋದಿ ಅವರು ಸಂವಿಧಾನ ಪವಿತ್ರ ಗ್ರಂಥ ಎಂದು ಹೇಳಿದ್ದು, ಅದರ ಪ್ರಕಾರ ದೇಶ ಮುನ್ನಡೆಸಲಾಗುತ್ತದೆ” ಎಂದು ಇತ್ತೀಚೆಗೆ ಹೇಳಿದ್ದರು.
ಕೊಲಿಜಿಯಂ ವ್ಯವಸ್ಥೆ ಕುರಿತು ಅವರು ಕೆಲ ದಿನದ ಹಿಂದೆ “ನ್ಯಾಯಮೂರ್ತಿಯನ್ನು ಯಾರೂ ಆಯ್ಕೆ ಮಾಡುವುದಿಲ್ಲ. ಅವರು ಸೃಷ್ಟಿಸಿಕೊಂಡಿರುವ ವ್ಯವಸ್ಥೆಯಿಂದ ಅವರು ಅಲ್ಲಿದ್ದಾರೆ. ನ್ಯಾಯಮೂರ್ತಿಗಳು ಏನನ್ನಾದರೂ ಮಾಡಿದರೆ ಅದು ಸಾರ್ವಜನಿಕ ಮತಗಣನೆಗೆ ಒಳಪಡುವುದಿಲ್ಲ. ಅದಾಗ್ಯೂ, ಸಾರ್ವಜನಿಕ ವಿಮರ್ಶೆ ಎಂಬುದೊಂದು ಇರುತ್ತದೆ. ನಾವು ಸಾರ್ವಜನಿಕರಿಗಾಗಿ ಕೆಲಸ ಮಾಡುತ್ತಿದ್ದು, ನ್ಯಾಯಾಂಗದಲ್ಲಿ ಕೆಲಸ ಮಾಡುತ್ತಿರುವವರೂ ಅದೇ ಧಾಟಿಯಲ್ಲಿ ಯೋಚಿಸಬೇಕು. ಒಂದಲ್ಲಾ ಒಂದು ರೀತಿಯಲ್ಲಿ ಅವರೂ ಸಹ ಜನರಿಗೆ ಉತ್ತರದಾಯಿಗಳಾಗಿದ್ದಾರೆ” ಎಂದು ಹೇಳುವ ಮೂಲಕ ಶಾಸಕಾಂಗದಂತೆಯೇ ನ್ಯಾಯಾಂಗವು ಜನರಿಗೆ ಉತ್ತರದಾಯಿಯಾಗಬೇಕು ಎಂದು ಆಗ್ರಹಿಸಿದ್ದರು.