ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ನಡೆದ ಚುನಾವಣಾ ಬಾಂಡ್ ಕುರಿತಾದ ವಿಚಾರಣೆಯು ವಿಶೇಷವೆನಿಸುವ ವಿಚಾರ ವಿನಿಮಯಕ್ಕೆ ಸಾಕ್ಷಿಯಾಯಿತು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ ಅವರು ತಮ್ಮ ರಾಜಕೀಯ ಸಂಬಂಧ, ಒಲವುಗಳ ಬಗ್ಗೆ ಚರ್ಚೆಗಿಳಿದಿದ್ದು ಕಲಾಪವನ್ನು ಆಸಕ್ತಿಕರವಾಗಿಸಿತು.
ವಿಚಾರಣೆಯ ವೇಳೆ ಎಸ್‌ಜಿ ಮೆಹ್ತಾ ಅವರು ಒಂದು ಊಹಾತ್ಮಕ ಸನ್ನಿವೇಶವನ್ನು ತಮ್ಮ ವಾದದಲ್ಲಿ ಉಲ್ಲೇಖಿಸಿದರು. ವ್ಯಕ್ತಿಯೊಬ್ಬರು ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಲು ಉತ್ಸುಕರಾಗಿರುತ್ತಾರೆ ಅದರೆ ಅವರಿಗೆ ಅದು ಭಾರತೀಯ ಜನತಾ ಪಕ್ಷಕ್ಕೆ ತಿಳಿಯುವುದು ಬೇಕಿರುವುದಿಲ್ಲ ಎನ್ನುವ ಅಂಶವನ್ನು ಮೆಹ್ತಾ ಉದಾಹರಣೆಯಾಗಿ ನೀಡಬಯಸಿದರು.
ಎಸ್‌ಜಿ ಮೆಹ್ತಾ ಅವರು ಹೇಳಿದ್ದು ಹೀಗಿತ್ತು, “ಸಿಬಲ್ ಅವರಿಗೆ ಸರಿ ಎನಿಸುವುದಾದರೆ ನನ್ನ ಈ ಉದಾಹರಣೆಯನ್ನು ಪರಿಗಣಿಸಬಹುದು, ಹಗುರ ದಾಟಿಯಲ್ಲಿ ಹೇಳುವುದಾದರೆ ನಾನೊಬ್ಬ ಗುತ್ತಿಗೆದಾರನಾಗಿದ್ದು ಕಾಂಗ್ರೆಸ್‌ಗೆ ದೇಣಿಗೆ ನೀಡುತ್ತೇನೆ. ಆದರೆ, ನನಗೆ ಈ ವಿಚಾರ ಬಿಜೆಪಿ ತಿಳಿಯುವುದು ಬೇಕಿರುವುದಿಲ್ಲ. ಏಕೆಂದರೆ ಅವರು ಮುಂಧೆ ಸರ್ಕಾರ ರಚಿಸಬಹುದು” ಎಂದರು.
ಇದಕ್ಕೆ ಸಿಬಲ್ ಅವರು “ನಾನು ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ನನ್ನ ಗೆಳೆಯ ಮೆಹ್ತಾ ಅವರು ನಾನು ಕಾಂಗ್ರೆಸ್‌ನಲ್ಲಿ ಇಲ್ಲ ಎಂಬ ವಿಚಾರ ಮರೆತಿರುವಂತಿದೆ” ಎಂದರು.
ಆಗ ಮೆಹ್ತಾ ಅವರು “ಪ್ರಕರಣ ಒಂದರಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕರೊಬ್ಬರನ್ನು ಸಿಬಲ್ ಪ್ರತಿನಿಧಿಸಿದ್ದರು” ಎಂದರು. ಇದಕ್ಕೆ ಸಿಬಲ್ “ಮೆಹ್ತಾ ಅವರು ಸರ್ಕಾರ ಪ್ರತಿನಿಧಿಸುತ್ತಿದ್ದಾರೆ ಎಂದಾಕ್ಷಣ ಅವರು ಬಿಜೆಪಿ ಸದಸ್ಯರೇ ಅಗಿರಬೇಕು ಎಂದೇನೂ ಇಲ್ಲ” ಎಂದರು.
ಇದಕ್ಕೆ ಮೆಹ್ತಾ ಅವರು “ಹೌದು, ಖಂಡಿತವಾಗಿಯೂ” ಎಂದು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಬಲ್ “ನಾನು ಸಹ ಹಾಗೆಯೇ” ಎಂದರು.