ʼಕೈಲಾಸ ದೇಶದಲ್ಲಿ ಅತ್ಯುನ್ನತ ಸಾಂವಿಧಾನಿಕ ನ್ಯಾಯಾಧೀಶರು ಯಾರು?ʼ ಹೈಕೋರ್ಟ್‌ ಪ್ರಶ್ನೆ

ನ್ಯಾಯಾಲಯಕ್ಕೆ ಸಹಾಯ ಮಾಡುವುದು ಎಂದರೆ ನಿತ್ಯಾನಂದನ ಬಗ್ಗೆ ಮಾಹಿತಿ ನೀಡುವುದಾಗಿದೆ. ನಿತ್ಯಾನಂದ ಕೈಲಾಸ ದೇಶದಲ್ಲಿ 'ಕಿಂಗ್‌ ಆಫ್‌ ಕಿಂಗ್' ಎಂದು ಹೇಳಿದ ಪೀಠ.
Nithyananda and Karnataka HC
Nithyananda and Karnataka HC

"ಬಿಡದಿಯ ನಿತ್ಯಾನಂದ ಧ್ಯಾನ ಪೀಠದ ಪೀಠಾಧಿಪತಿ ನಿತ್ಯಾನಂದ ಅವರ ಕೈಲಾಸ ದೇಶದಲ್ಲಿ ಅತ್ಯುನ್ನತ ಸಾಂವಿಧಾನಿಕ ನ್ಯಾಯಾಧೀಶರು ಯಾರು?" ಎಂದು ಕರ್ನಾಟಕ ಹೈಕೋರ್ಟ್‌ ಸೋಮವಾರ ಮೌಖಿಕವಾಗಿ ಲಘು ದಾಟಿಯಲ್ಲಿ ಪ್ರಶ್ನಿಸಿತು.

ಜಾರ್ಖಂಡ್‌ ರಾಜ್ಯದ ರಾಂಚಿಯ ದಯಾಶಂಕರ್‌ ಪಾಲ್‌ ಅವರು ತಮ್ಮ ಪುತ್ರ ಕೃಷ್ಣಕುಮಾರ್‌ ಪಾಲ್‌ ಕಾಣೆಯಾಗಿರುವ ಹಿನ್ನೆಲೆಯಲ್ಲಿ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್‌ ಮತ್ತು ನ್ಯಾಯಮೂರ್ತಿ ಉಮೇಶ್‌ ಎಂ. ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ವಿಶೇಷ ಸರ್ಕಾರಿ ಅಭಿಯೋಜಕ ಬಿ ಎ ಬೆಳ್ಳಿಯಪ್ಪ ಅವರು “ಬಿಡದಿಯ ನಿತ್ಯಾನಂದ ಪೀಠದಲ್ಲಿ ಕೃಷ್ಣ ಕುಮಾರ್‌ ಅವರ ಇರುವಿಕೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಅಲ್ಲಿ ಅವರು ಪತ್ತೆಯಾಗಿಲ್ಲ. ತೃತೀಯ ಪ್ರತಿವಾದಿಯಾಗಿರುವ ಬಿಡದಿಯ ನಿತ್ಯಾನಂದ ಧ್ಯಾನ ಪೀಠದಿಂದ ನಿತ್ಯಾನಂದ ಅವರು ಪ್ರಪಂಚ ತ್ಯಜಿಸಿದ್ದಾರೆ ಎಂದು ಈಮೇಲ್‌ ಬಂದಿದೆ. ಮಠದವರಿಗೂ ನಿತ್ಯಾನಂದ ಎಲ್ಲಿದ್ದಾರೆ ಎನ್ನುವ ಮಾಹಿತಿ ಇಲ್ಲ” ಎಂದರು.

ಇದನ್ನು ಆಲಿಸಿದ ಪೀಠವು ಸಮಗ್ರ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿತು.

ಆಗ ಅರ್ಜಿದಾರರ ಪರ ವಕೀಲ ರಾಜಕುಮಾರ್‌ ಅವರು “ನಿತ್ಯಾನಂದ ಕೈಲಾಸದಲ್ಲಿದ್ದಾರೆ” ಎಂದರು.

ಇದಕ್ಕೆ ಪೀಠವು “ನಿತ್ಯಾನಂದ ಎಲ್ಲಿದ್ದಾರೆ ಎಂಬ ಮಾಹಿತಿ ಕೊಟ್ಟರೆ ನಾನು ಅಲ್ಲಿಗೆ ಪ್ರೊಸೆಸ್‌ ಕೊಡುತ್ತೇನೆ. ಕೈಲಾಸ ದೇಶದಲ್ಲಿ ಅತ್ಯುನ್ನತ ಸಾಂವಿಧಾನಿಕ ನ್ಯಾಯಾಧೀಶರು ಯಾರು? ಕೈಲಾಸದಲ್ಲಿ ನಿತ್ಯಾನಂದ ಮಹಾಸ್ವಾಮಿ ಇದ್ದಾನೆ ಎಂದು ನೀವು ಹೇಳಿದ ಮೇಲೆ ಅದರ ಮಾಹಿತಿ ಕೊಡಿ. ಅದು ನಿಮ್ಮ ಕರ್ತವ್ಯ. ನ್ಯಾಯಾಲಯಕ್ಕೆ ಸಹಾಯ ಮಾಡುವುದು ಎಂದರೆ ನಿತ್ಯಾನಂದನ ಬಗ್ಗೆ ಮಾಹಿತಿ ನೀಡುವುದಾಗಿದೆ. ನಿತ್ಯಾನಂದ ಕೈಲಾಸ ದೇಶದಲ್ಲಿ ಕಿಂಗ್‌ ಆಫ್‌ ಕಿಂಗ್” ಎಂದು ಚಟಾಕಿ ಹಾರಿಸಿದರು.

ಮುಂದುವರಿದು ಪೀಠವು, “ನೀವು ಅದರ ಮಾಹಿತಿ ನೀಡಿದರೆ ಕಾನ್ಸುಲೇಟ್‌ ಮೂಲಕ ನಾನು ಪ್ರೊಸೆಸ್‌ ಕೊಡುತ್ತೇನೆ. ಇಲ್ಲವಾದರೆ ಕಮಿಷನರೇಟ್‌ ಮೂಲಕ ಅಥವಾ ರಾಯಭಾರಿಗಳ ಮೂಲಕ ಪ್ರೊಸೆಸ್‌ ಕೊಡುತ್ತೇನೆ. ನೀವು ಮಾಹಿತಿ ನೀಡಿದರೆ ನಾನು ಕಾನ್ಸುಲೇಟ್‌ ಮೂಲಕ ಹೋಗುವೆ. ಎಕ್ಸಿಕ್ಯೂಟ್‌ ಮಾಡಲು ನಿಮ್ಮನ್ನೇ ಕಳುಹಿಸುವೆ. ನೀವು ಕೈಲಾಸ ದೇಶದಲ್ಲೂ ಎಂಜಾಯ್‌ ಮಾಡಬೇಕು" ಎಂದಿತು.

ಅಂತಿಮವಾಗಿ ಪೀಠವು ಮಾರ್ಚ್‌ 4ಕ್ಕೆ ವಿಚಾರಣೆ ಮುಂದೂಡಿತು.

Kannada Bar & Bench
kannada.barandbench.com