ರಾಹುಲ್ ಗಾಂಧಿ ವಿರುದ್ಧದ ಚುನಾವಣಾ ಅರ್ಜಿಯನ್ನು ಅಲಾಹಾಬಾದ್ ಹೈಕೋರ್ಟ್ ಮುಂದೂಡಿದ್ದೇಕೆ?
ಲೋಕಸಭೆಗೆ ರಾಹುಲ್ ಗಾಂಧಿ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಅಲಾಹಾಬಾದ್ ಹೈಕೋರ್ಟ್ ಈಚೆಗೆ ಮುಂದೂಡಿದೆ.
ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ 2016ರಲ್ಲಿ ನ್ಯಾಯಾಲಯವು ವಕೀಲ ಅಶೋಕ್ ಪಾಂಡೆ ಅವರು ಮುಂದೆ ಯಾವುದೇ ಅರ್ಜಿ ಸಲ್ಲಿಸಿದಾಗ ಅದರೊಟ್ಟಿಗೆ ₹25,000 ಮೌಲ್ಯದ ಡಿ ಡಿ ಸಲ್ಲಿಸಿದರೆ ಮಾತ್ರ ಅದನ್ನು ಪರಿಗಣಿಸಲಾಗುವುದು ಎಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಅಲೋಕ್ ಮಾಥೂರ್ ಮತ್ತು ಅರುಣ್ ಕುಮಾರ್ ಸಿಂಗ್ ದೇಶ್ವಾಲ್ ನೇತೃತ್ವದ ವಿಭಾಗೀಯ ಪೀಠವು ರಿಜಿಸ್ಟ್ರಿಯು ಈ ಸಂಬಂಧ ಯಾವುದೇ ವರದಿ ಸಲ್ಲಿಸಿಲ್ಲ ಎಂದು ಹೇಳಿ ಪ್ರಕರಣ ಮುಂದೂಡಿತು.
ವಕೀಲ ಪಾಂಡೆ ಅವರು 2016 ನಿರ್ದೇಶನವನ್ನು ಅನುಪಾಲಿಸಿದ್ದಾರೆಯೇ ಎಂಬುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ವರದಿ ಸಲ್ಲಿಸಲು ರಿಜಿಸ್ಟ್ರಿಗೆ ನಿರ್ದೇಶಿಸಿತು. ನ್ಯಾಯಾಲಯವು 2016ರ ಆದೇಶ ನೆನಪಿಸುತ್ತಿದ್ದಂತೆ ಪಾಂಡೆ ಅವರು ತಾನು ಅಂದಿನಿಂದಲೂ ವಾದಿಸುತ್ತಿರುವುದಾಗಿ ಹೇಳಿದರು. ಆಗ ಪೀಠವು ಆದೇಶದ ಬಗ್ಗೆ ರಿಜಿಸ್ಟ್ರಿಗೆ ತಿಳಿದಿರಲಿಲ್ಲ ಎನಿಸುತ್ತದೆ ಎಂದಿತು.
ಆಗ ಪಾಂಡೆ ಈ ವಿಚಾರ ರಿಜಿಸ್ಟ್ರಿಗೆ ತಿಳಿದಿತ್ತು. ಆದರೆ, ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಗೆ ರಿಜಿಸ್ಟ್ರಿ ಆಕ್ಷೇಪಿಸಿರಲಿಲ್ಲ ಎಂದರು. ಈ ವೇಳೆ ಪೀಠವು ವರದಿ ಸಲ್ಲಿಸಲು ರಿಜಿಸ್ಟ್ರಿಗೆ ಸೂಚಿಸಿತು.
ಕರ್ನಾಟಕ ಮೂಲದ ಎಸ್ ವಿಘ್ನೇಶ್ ಶಿಶಿರ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ ರಾಹುಲ್ ಗಾಂಧಿ ಅವರು ಬ್ರಿಟನ್ ಪ್ರಜೆಯಾಗಿದ್ದು, ಅವರು ಭಾರತದ ಪ್ರಜೆಯಾಗಿಲ್ಲ. ಹೀಗಾಗಿ ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಕೋರಲಾಗಿದೆ.
ರಾಯಬರೇಲಿ ಕ್ಷೇತ್ರದಲ್ಲಿ ಕಾನೂನಿನ ಯಾವ ಅಧಿಕಾರದಡಿ ರಾಹುಲ್ ಸಂಸತ್ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಲು ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ತಮ್ಮ ದಾಖಲೆಗೆ ಪೂರಕವಾಗಿ ರಾಹುಲ್ ಗಾಂಧಿ ಅವರು 2003 ಮತ್ತು 2009ರಲ್ಲಿ ಮೆಸರ್ಸ್ ಬ್ಯಾಕ್‌ಡಾಪ್ಸ್ ಲಿಮಿಟೆಡ್‌ನ ನಿರ್ದೇಶಕ ಎಂದು ಬ್ರಿಟನ್ ಮೂಲದ ಕಂಪೆನಿ ಸಲ್ಲಿಸಿದ್ದ ದಾಖಲೆಗಳನ್ನು ಉಲ್ಲೇಖಿಸಿ, ರಾಹುಲ್ ವಿದೇಶಿ ಪ್ರಜೆ ಎಂದು ಹೇಳಲಾಗಿದೆ. 2006ರಲ್ಲಿ ಈ ಕಂಪೆನಿ ಸಲ್ಲಿಸಿದ ದಾಖಲೆಗಳಲ್ಲಿ ರಾಹುಲ್ ಗಾಂಧಿ ಬ್ರಿಟನ್ ಪ್ರಜೆ ಎಂದು ಹೇಳಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಅಲ್ಲದೆ, ಸೂರತ್‌ನ ವಿಚಾರಣಾಧೀನ ನ್ಯಾಯಾಲಯವು ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿ, ಅವರಿಗೆ ಶಿಕ್ಷೆ ವಿಧಿಸಿರುವುದರಿಂದ ಅವರು ರಾಯಬರೇಲಿ ಸಂಸತ್ ಸದಸ್ಯರಾಗಿ ಮುಂದುವರಿಯಾಗಲಾಗದು ಎಂದೂ ಹೇಳಲಾಗಿದೆ.