ಸಂಪೂರ್ಣ ವೈಫಲ್ಯ: ಇ ಡಿ ಹಾಗೂ ಎಸ್ಎಫ್ಐಒಗೆ ಅಲಾಹಾಬಾದ್ ಹೈಕೋರ್ಟ್ ತರಾಟೆ

ಶೈನ್ ಸಿಟಿ ಇನ್ಫ್ರಾ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧದ ಪ್ರಕರಣದ ಎಲ್ಲಾ ತನಿಖೆಗಳೂ ಅದಕ್ಷತೆಯಿಂದ ನಡೆದಿವೆ ಎಂದು ಹೇಳಿದೆ ನ್ಯಾಯಾಲಯ.
ಸಂಪೂರ್ಣ ವೈಫಲ್ಯ: ಇ ಡಿ ಹಾಗೂ ಎಸ್ಎಫ್ಐಒಗೆ ಅಲಾಹಾಬಾದ್ ಹೈಕೋರ್ಟ್ ತರಾಟೆ

ಬಹುಕೋಟಿ 'ಶೈನ್-ಸಿಟಿ' ಹಗರಣವನ್ನು ಸರಿಯಾಗಿ ತನಿಖೆ ಮಾಡದ ಜಾರಿ ನಿರ್ದೇಶನಾಲಯ (ಇ ಡಿ), ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ) ಹಾಗೂ ಉತ್ತರ ಪ್ರದೇಶದ ಆರ್ಥಿಕ ಅಪರಾಧ ವಿಭಾಗವನ್ನು (ಇಒಡಬ್ಲ್ಯು) ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ [ಶ್ರೀರಾಮ್ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಉತ್ತರ ಪ್ರದೇಶದ ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿರುವ ಶೈನ್ ಸಿಟಿ ಇನ್ಫ್ರಾ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧದ ಪ್ರಕರಣದ ಸಂಪೂರ್ಣ ತನಿಖೆಯನ್ನು ತನಿಖಾ ಸಂಸ್ಥೆಗಳು ಅತ್ಯಂತ ಓತಪ್ರೋತವಾಗಿ ನಡೆಸಿವೆ ಎಂದು ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮತ್ತು ಪ್ರಶಾಂತ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಎಲ್ಲಾ ತನಿಖಾ ಸಂಸ್ಥೆಗಳು ತನಿಖೆಯನ್ನು ಸರಿಯಾಗಿ ನಡೆಸಲು ಸಂಪೂರ್ಣ ವಿಫಲವಾಗಿವೆ ಎಂದು ನ್ಯಾಯಾಲಯ ಭಾವಿಸುತ್ತದೆ. ತನಿಖೆ ಅತ್ಯಂತ ಅದಕ್ಷವಾಗಿ ನಡೆದಿದೆ. ಆರೋಪಿಗಳು ಮತ್ತು ಕಂಪನಿಗಳ ವಿರುದ್ಧ ಸೂಕ್ತ ತನಿಖೆ ಮತ್ತು ಕ್ರಮಕ್ಕೆ ಜೊತೆಗೆ ಹಣದ ಜಾಡನ್ನು ಪತ್ತೆ ಹಚ್ಚಲು ಪ್ರಾಮಾಣಿಕ ಪ್ರಯತ್ನ ನಡೆಸುವಂತೆ ಈ ಎಲ್ಲಾ ತನಿಖಾ ಸಂಸ್ಥೆಗಳಿಗೆ ನಿರ್ದೇಶಿಸಲಾಗುತ್ತಿದೆ ಎಂದು ನ್ಯಾಯಾಲಯ ವಿವರಿಸಿದೆ.

ಪ್ರಕರಣದ ತನಿಖೆಯ ಪ್ರಗತಿ ಕುರಿತಂತೆ ಸ್ಥಿತಿಗತಿ ವರದಿ ಸಲ್ಲಿಸುವಂತೆಯೂ ನ್ಯಾಯಾಲಯ ತನಿಖಾ ಸಂಸ್ಥೆಗಳಿಗೆ ಸೂಚಿಸಿದೆ.

ಶೈನ್ ಸಿಟಿ ಇನ್ಫ್ರಾ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಹೂಡಿಕೆದಾರರಾಗಿರುವ ಶ್ರೀರಾಮ್ ಅವರು ಶೈನ್ ಸಿಟಿ ಹಗರಣದ ವಿರುದ್ಧದ ಆರೋಪಗಳ ಬಗ್ಗೆ ನ್ಯಾಯಯುತ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಂಶಗಳನ್ನು ತಿಳಿಸಿದೆ.

ಕಂಪನಿ ಮತ್ತದರ ಅಧಿಕಾರಿಗಳು ವಿವಿಧ ಮಾಫಿಯಾಗಳೊಂದಿಗೆ ಹಣ ವರ್ಗಾವಣೆಯಲ್ಲಿ ತೊಡಗಿದ್ದು  ಅರ್ಜಿದಾರನಾದ ತನ್ನನ್ನೂ ಒಳಗೊಂಡಂತೆ ಅನೇಕ ಹೂಡಿಕೆದಾರರಿಂದ ವಿವಿಧ ಯೋಜನೆಗಳಡಿ ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ ಎಂದು ಶ್ರೀರಾಮ್‌ ವಾದಿಸಿದ್ದರು.  

ನ್ಯಾಯಾಲಯದ ಮೊರೆ ಹೋದ ನಂತರವಷ್ಟೇ ತನಿಖಾ ಸಂಸ್ಥೆಗಳು ಆರೋಪಿಗಳನ್ನು ಬಂದಿಸಿದ್ದು ಆರೋಪಿಗಳ ವಿರುದ್ಧ ಅವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದರು.

ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದರೂ, ಹಗರಣವನ್ನು ಸರಿಯಾಗಿ ತನಿಖೆ ಮಾಡಲು ತನಿಖಾ ಸಂಸ್ಥೆಗಳಿುಗೆ ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ನ್ಯಾಯಾಲಯ ತನಿಖೆ ಏಕೆ ಸರಿಯಾಗಿ ನಡೆಯುತ್ತಿಲ್ಲ ಎಂದು ಇ ಡಿ ನಿರ್ದೇಶಕರೇ ಖುದ್ದು ಪರಿಶೀಲಿಸಬೇಕು ಎಂಬುದಾಗಿ ಸೂಚಿಸಿತು.

 ಪರಾರಿಯಾಗಿರುವ ಆರೋಪಿಯನ್ನು ಹಿಡಿಯುವ ಸಂಬಂಧ ಸ್ಥಿತಿಗತಿ ವರದಿಯ ಪ್ರಮಾಣಪತ್ರ ಸಲ್ಲಿಸುವಂತೆ ನ್ಯಾಯಾಲಯ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಇದೇ ವೇಳೆ ಸೂಚಿಸಿದೆ.

ಇದಲ್ಲದೆ, ಹೂಡಿಕೆದಾರರು ಮತ್ತು ವಕೀಲರು ತನಿಖಾ ಸಂಸ್ಥೆಗಳಿಗೆ ತಾವಾಗಿಯೇ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ತನಿಖಾ ಸಂಸ್ಥೆಗಳ ಕಾರ್ಯವೈಖರಿ ಆಘಾತಕಾರಿ ಎಂದು ನ್ಯಾಯಾಲಯ ಚಾಟಿ ಬೀಸಿದೆ. ಪ್ರಕರಣದ ಮುಂದಿನ ತನಿಖೆ ಜುಲೈ 1ರಂದು ನಡೆಯಲಿದೆ.

Kannada Bar & Bench
kannada.barandbench.com