
ಪಶ್ಚಿಮ ಬಂಗಾಳದ ಖರಗ್‌ಪುರದಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಐಐಟಿ ಖರಗ್‌ಪುರ) ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಸೋಮವಾರ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.
ಪ್ರಕರಣದ ಆರಂಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಸಂಸ್ಥೆ ಯೋಚನೆ ಮಾಡಿದೆಯೇ ಎಂದು ಪ್ರಶ್ನಿಸಿತು.
“ಐಐಟಿ ಖರಗ್‌ಪುರದ ಸಮಸ್ಯೆ ಏನು? ವಿದ್ಯಾರ್ಥಿಗಳು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ? ನೀವು ಅದರ ಬಗ್ಗೆ ಯೋಚಿಸಿದ್ದೀರಾ?" ಎಂದು ಪೀಠ ಪ್ರಶ್ನಿಸಿತು.
ಸಂಸ್ಥೆಯ ಪರ ಹಾಜರಾದ ವಕೀಲರು, ಈ ಸಮಸ್ಯೆಯನ್ನು ನಿಭಾಯಿಸಲು 10 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಉತ್ತರಿಸಿದರು.
"ಆಪ್ತಾ ಸಮಾಲೋಚನಾ ಕೇಂದ್ರ ಇದ್ದು ಅಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ. (ಆಪ್ತ ಸಮಾಲೋಚನೆಗಾಗಿ) ಎಂಥದ್ದೇ ಸಮಯದಲ್ಲಾದರೂ ಕರೆಗೆ ಲಭ್ಯವಿರುವಂತಹ ಫೋನ್ ಸಂಖ್ಯೆಯನ್ನು ಒದಗಿಸಲಾಗಿದೆ" ಎಂದು ವಕೀಲರು ಹೇಳಿದರು.
ಐಐಟಿ ಖರಗ್‌ಪುರ ಮತ್ತು ಉತ್ತರ ಪ್ರದೇಶದ ಖಾಸಗಿ ವಿಶ್ವವಿದ್ಯಾಲಯ ಶಾರದಾ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಈ ಘಟನೆಗಳ ಕುರಿತು ಪ್ರತಿಕ್ರಿಯಿಸುವಂತೆ ಅದು ಎರಡೂ ಸಂಸ್ಥೆಗಳಿಗೆ ಸೂಚಿಸಿತ್ತು.
ಇಂದಿನ ವಿಚಾರಣೆ ವೇಳೆ ಎರಡೂ ಸಂಸ್ಥೆಗಳಲ್ಲಿ ನಡೆದಿರುವ ಆತ್ಮಹತ್ಯೆ ಘಟನೆಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಹೀಗಾಗಿ ತಾನು ಹೆಚ್ಚಿನ ಅವಲೋಕನಕ್ಕೆ ಮುಂದಾಗುವುದಿಲ್ಲ. ತನಿಖೆ ಮುಂದುವರೆಸಬಹುದು ಎಂದು ಪೀಠ ಹೇಳಿದೆ.
"ಶಾರದಾ ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆಯ ಬಗ್ಗೆ ಮೃತರ ತಂದೆ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ತನಿಖೆ ನಡೆಯುತ್ತಿದೆ ಎಂದು ನಮಗೆ ತಿಳಿಸಲಾಗಿದೆ. ಕಾನೂನು ಪ್ರಕಾರ ಮುಂದುವರಿಯಲಿ. ಐಐಟಿ ಖರಗ್‌ಪುರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ, ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದ 30 ನಿಮಿಷಗಳ ಒಳಗೆ ಆಡಳಿತ ಮಂಡಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ನಮಗೆ ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ತನಿಖೆ ಪ್ರಗತಿಯಲ್ಲಿದೆ. ತನಿಖೆ ಸರಿಯಾದ ದಿಕ್ಕಿನಲ್ಲಿ ಮುಂದುವರಿಯಲಿ" ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ನಾಲ್ಕು ವಾರಗಳ ಬಳಿಕ ಪ್ರಕರಣ ಆಲಿಸುವುದಾಗಿ ಅದು ತಿಳಿಸಿತು.
ವಿಚಾರಣೆಯ ಸಮಯದಲ್ಲಿ, ಜೂನ್ 4ರಂದು ಐಐಟಿ ದೆಹಲಿಯಲ್ಲಿ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಅದರ ಮೇಲೆ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಪ್ರಕರಣವನ್ನು ಅಮಿಕಸ್ ಕ್ಯೂರಿ ಅವರ ಗಮನಕ್ಕೆ ತರುವಂತೆ ಪೀಠ ಆಗ ಸೂಚಿಸಿತು.