ಮುಡಾ ಪ್ರಕರಣ: ಸಿದ್ದರಾಮಯ್ಯ ಪತ್ನಿ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂ; ರಾಜಕೀಯ ಸಮರಕ್ಕೆ ಇ ಡಿ ಬಳಕೆಗೆ ಕಿಡಿ

ರಾಜಕೀಯ ಸಮರಗಳನ್ನು ನ್ಯಾಯಾಲಯದ ಹೊರಗೆ ನಡೆಸಬೇಕು ಎಂದ ಪೀಠ ಇಂತಹ ಕದನ ನಡೆಸಲು ಇ ಡಿಯನ್ನು ಏಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರಶ್ನಿಸಿತು.
Supreme Court and ED
Supreme Court and ED
Published on

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದಲ್ಲಿ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿಎಂ ಪಾರ್ವತಿ ಅವರಿಗೆ ನೀಡಲಾದ ಸಮನ್ಸ್ ರದ್ದುಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.

ರಾಜಕೀಯ ಸಮರಗಳನ್ನು ನ್ಯಾಯಾಲಯದ ಹೊರಗೆ ನಡೆಸಬೇಕು ಎಂದ ಸಿಜೆಐ ಬಿ ಆರ್‌ ಗವಾಯಿ ನ್ಯಾಯಮೂರ್ತಿ ಕೆ ವಿನೋದ್‌ ಚಂದ್ರನ್‌ ಅವರಿದ್ದ ಪೀಠ ಇಂತಹ ಕದನ ನಡೆಸಲು ಇ ಡಿಯನ್ನು ಏಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರಶ್ನಿಸಿತು.

Also Read
ಮುಡಾ ಬ್ರಹ್ಮಾಂಡ ಭ್ರಷ್ಟಚಾರಕ್ಕೆ ಸಿಎಂ ಪತ್ನಿ ಪಾರ್ವತಿ ಯಾವುದೇ ರೀತಿಯಲ್ಲೂ ಜವಾಬ್ದಾರರಲ್ಲ: ಹೈಕೋರ್ಟ್‌ ಸ್ಪಷ್ಟ ನುಡಿ

"ದುರದೃಷ್ಟವಶಾತ್, ನನಗೆ ಮಹಾರಾಷ್ಟ್ರದಲ್ಲಿ ಇಂತಹ ಒಂದಿಷ್ಟು ಅನುಭವವಿದೆ. ದಯವಿಟ್ಟು ಟೀಕಿಸಲು ನಮ್ಮನ್ನು ಪ್ರೇರೇಪಿಸದಿರಿ. ಇಲ್ಲವಾದರೆ, ನಾವು ಜಾರಿ ನಿರ್ದೇಶನಾಲಯದ ಬಗ್ಗೆ ತುಂಬಾ ಕಠಿಣವಾಗಿ ಮಾತನಾಡಬೇಕಾಗುತ್ತದೆ. ರಾಜಕೀಯ ಹೋರಾಟಗಳು ಮತದಾರರ ಮುಂದೆ ನಡೆಯಲಿ. ಇದಕ್ಕಾಗಿ ನಿಮ್ಮನ್ನು (ಇ ಡಿಯನ್ನು) ಏಕೆ ಬಳಸಿಕೊಳ್ಳಲಾಗುತ್ತಿದೆ?" ಎಂದು ನ್ಯಾಯಾಲಯ ಕೇಳಿದೆ.

ರಾಜಕೀಯ ಹೋರಾಟಗಳು ಮತದಾರರ ಮುಂದೆ ನಡೆಯಲಿ. ಇ ಡಿಯನ್ನು ಏಕೆ ಅದಕ್ಕೆ ಬಳಸಿಕೊಳ್ಳಲಾಗುತ್ತಿದೆ?

ಸುಪ್ರೀಂ ಕೋರ್ಟ್

"ಸರಿ, ನಾವು (ಪ್ರಕರಣದಿಂದ) ಹಿಂದೆ ಸರಿಯುತ್ತೇವೆ. ಆದರೆ ಅದನ್ನು ಪೂರ್ವನಿದರ್ಶನವೆಂದು ಪರಿಗಣಿಸಬಾರದು" ಎಂದು ಇ ಡಿ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ರಾಜು ಹೇಳಿದರು.

ನಂತರ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ ಸಮನ್ಸ್ ರದ್ದುಗೊಳಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ತಾರ್ಕಿಕತೆಯಲ್ಲಿ ಯಾವುದೇ ದೋಷವಿಲ್ಲ ಎಂದು ಹೇಳಿತು.

Also Read
ಮುಡಾ ಹಗರಣ: ಆತುರದ ಕ್ರಮಕ್ಕೆ ಮುಂದಾಗದಂತೆ ಜಾರಿ ನಿರ್ದೇಶನಾಲಯಕ್ಕೆ ನೀಡಿದ್ದ ಆದೇಶ ವಿಸ್ತರಿಸಿದ ಹೈಕೋರ್ಟ್‌

"ಏಕ ಸದಸ್ಯ ಪೀಠದ ತಾರ್ಕಿಕತೆಯಲ್ಲಿ ನಮಗೆ ಯಾವುದೇ ದೋಷ ಕಂಡುಬಂದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದ ವಿಶೇಷ ಸಂದರ್ಭ ಸನ್ನಿವೇಶಗಳ ಹಿನ್ನೆಲೆಯಲ್ಲಿ, ನಾವು ಅರ್ಜಿ ತಿರಸ್ಕರಿಸುತ್ತಿದ್ದೇವೆ. ಕೆಲವು ಕಠಿಣ ಟೀಕೆಗಳನ್ನು (ಇ ಡಿ ವಿರುದ್ಧ) ಮಾಡಲು ಅವಕಾಶ ನೀಡದೆ ಇದ್ದುದಕ್ಕಾಗಿ ಎಎಸ್‌ಜಿ ಅವರಿಗೆ ಧನ್ಯವಾದ ಹೇಳಬೇಕ" ಎಂದು ನ್ಯಾಯಾಲಯ ನುಡಿಯಿತು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ವಿಚಾರದಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಹೆಚ್ಚಿನ ಮೌಲ್ಯ ಹೊಂದಿರುವ ಬಡಾವಣೆಯಲ್ಲಿ ಮುಡಾ ಬದಲಿ ನಿವೇಶನ ನೀಡಿದೆ ಎಂದು ಆರೋಪಿಸಲಾಗಿತ್ತು.

Kannada Bar & Bench
kannada.barandbench.com