'ದಿಕ್ಕು ತಪ್ಪಿಸುವ ಜಾಹೀರಾತಿನ ವಿರುದ್ಧ ಕ್ರಮಕೈಗೊಳ್ಳದಂತೆ ರಾಜ್ಯಗಳಿಗೆ ಸೂಚಿಸಿದ್ದೇಕೆ?' ಕೇಂದ್ರಕ್ಕೆ ಸುಪ್ರೀಂ ಚಾಟಿ

ಆಯುಷ್ ಜಾಹೀರಾತುಗಳಿಗೆ ಪರವಾನಗಿ ನೀಡಲು ಅಧಿಕಾರಿಗಳು ಸಹಿ ಹಾಕುವುದಕ್ಕೆ ಅನುವು ಮಾಡಿಕೊಡುವ 170ನೇ ನಿಯಮ ಜಾರಿಗೊಳಿಸದಂತೆ ಕೇಂದ್ರ ಸರ್ಕಾರ 2023ರಲ್ಲಿ ಹೊರಡಿಸಿದ ಪತ್ರದ ಮೂಲಕ ತಡೆಹಿಡಿಯಿತು ಎಂಬುದನ್ನು ನ್ಯಾಯಾಲಯ ಗಮನಿಸಿತು.
Baba Ramdev and Acharya Balkrishna
Baba Ramdev and Acharya Balkrishna

1945ರ ಔಷಧ ಮತ್ತು ಸೌಂದರ್ಯವರ್ಧಕಗಳ ನಿಯಮಾವಳಿ - 1945ರ 170ನೇ ನಿಯಮದ ಪ್ರಕಾರ ದಾರಿ ತಪ್ಪಿಸುವ ಜಾಹೀರಾತುಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಯುಷ್‌ ಅಧಿಕಾರಿಗಳಿಗೆ ಸೂಚಿಸಿದ್ದೇಕೆ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು [ಭಾರತೀಯ ವೈದ್ಯಕೀಯ ಸಂಘ ಮತ್ತು ಭಾರತ ಒಕ್ಕೂಟದ  ಇನ್ನಿತರರ ನಡುವಣ ಪ್ರಕರಣ].

ಕೋವಿಡ್‌ ಲಸಿಕೆ ಮತ್ತು ಆಧುನಿಕ ಔಷಧದ ವಿರುದ್ಧ ಪತಂಜಲಿ ಮತ್ತು ಅದರ ಸಂಸ್ಥಾಪಕರಾದ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಅವಹೇಳನಕಾರಿ ಅಭಿಯಾನ ನಡೆಸುತ್ತಿರುವುದನ್ನು ಪ್ರಶ್ನಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಪ್ರಶ್ನೆ ಕೇಳಿತು.

ಆಯುಷ್ ಜಾಹೀರಾತುಗಳಿಗೆ ಪರವಾನಗಿ ನೀಡಲು ಅಧಿಕಾರಿಗಳು ಸಹಿ ಅಗತ್ಯವೆನ್ನುವ 170ನೇ ನಿಯಮ ಜಾರಿಗೊಳಿಸುವುದನ್ನು ಕೇಂದ್ರ ಸರ್ಕಾರ 2023ರಲ್ಲಿ ಹೊರಡಿಸಿದ ಪತ್ರ ತಡೆಹಿಡಿಯಿತು ಎಂಬುದನ್ನು ನ್ಯಾಯಾಲಯ ಗಮನಿಸಿತು.

1945ರ ನಿಯಮಾವಳಿಗೆ 2018ರಲ್ಲಿ 170ನೇ ನಿಯಮವನ್ನು ಸೇರ್ಪಡೆ ಮಾಡಲಾಗಿತ್ತು. ಇದು ಔಷಧ ತಯಾರಿಸುವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಪರವಾನಗಿ ಅಧಿಕಾರಿಗಳ ಅನುಮೋದನೆಯಿಲ್ಲದೆ ಆಯುರ್ವೇದ, ಸಿದ್ಧ ಮತ್ತು ಯುನಾನಿ ಔಷಧಗಳ ಕುರಿತು ಜಾಹೀರಾತು ನೀಡುವುದನ್ನು ನಿಷೇಧಿಸುತ್ತದೆ. ದಾರಿತಪ್ಪಿಸುವ ಜಾಹೀರಾತುಗಳನ್ನು ನಿಯಂತ್ರಿಸುವುದು ನಿಯಮದ ಉದ್ದೇಶವಾಗಿತ್ತು.

ಈ ನಿಯಮದ ಕುರಿತು ಸಲ್ಲಿಸಿರುವ ಅರ್ಜಿಗಳು ನ್ಯಾಯಾಲಯಗಳಲ್ಲಿ ಬಾಕಿ ಇವೆ ಎಂಬ ವಾದವನ್ನು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್‌ ಅಮಾನುಲ್ಲಾ ಅವರಿದ್ದ ಪೀಠ ಇಂದಿನ ವಿಚಾರಣೆ ವೇಳೆ ಒಪ್ಪಲಿಲ್ಲ.

ಹೈಕೋರ್ಟ್‌ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದ್ದರೂ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದಂತೆ ರಾಜ್ಯಗಳಿಗೆ ಸೂಚಿಸಿದ್ದೇಕೆ ಎಂದು ನ್ಯಾ. ಅಮಾನುಲ್ಲಾ ಪ್ರಶ್ನಿಸಿದರು. ಅಲ್ಲಿಯವರೆಗೂ ಅದು ಉತ್ತಮ ಕಾನೂನಾಗಿತ್ತು ಅದನ್ನು ಅನ್ವಯಿಸಬಹುದಾಗಿತ್ತು ಎಂದು ನ್ಯಾ. ಕೊಹ್ಲಿ ಕುಟುಕಿದರು.

Kannada Bar & Bench
kannada.barandbench.com