ಮಾಹಿತಿ ಸಂಗ್ರಹಿಸುವ ಅಧಿಕೃತ ಕರ್ತವ್ಯದ ಭಾಗವಾಗಿ ತಾನು ಮಾಲೆಗಾಂವ್ ಸ್ಫೋಟದ ಸಂಚಿನ ಆರೋಪ ಹೊತ್ತ ಅಭಿನವ್ ಭಾರತ್ ಸಂಘಟನೆಯ ಸಭೆಗಳಲ್ಲಿ ಭಾಗವಹಿಸಿದ್ದೆ ಎಂಬ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ತರ್ಕವನ್ನು ಬಾಂಬೆ ಹೈಕೋರ್ಟ್ ಸೋಮವಾರ ಪ್ರಶ್ನಿಸಿದೆ. ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಸ್ಫೋಟದ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ.
ಸೇವಾನಿರತ ಕರ್ತವ್ಯಾಧಿಕಾರಿಯಾಗಿರುವ ತಾನು ಉನ್ನತಾಧಿಕಾರಿಗಳ ಸೂಚನೆ ಮೇರೆಗೆ ಸ್ಫೋಟದ ಸಂಚು ರೂಪಿಸುತ್ತಿದ್ದ ಅಭಿನವ್ ಭಾರತ್ ಸಂಘಟನೆಯ ಸಭೆಗಳಲ್ಲಿ ಭಾಗವಹಿಸಿದ್ದು ಈ ಹಿನ್ನೆಲೆಯಲ್ಲಿ ಪ್ರಕರಣದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಅವರು ಕೋರಿದ್ದರು. ಮನವಿ ತಿರಸ್ಕರಿಸುವ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಆದರೆ ಸೇನಾಧಿಕಾರಿ ಪುರೋಹಿತ್‌ಗೆ ಮಾಲೆಗಾಂವ್ ಸ್ಫೋಟದ ಬಗ್ಗೆ ತಿಳಿದಿದ್ದರೆ ಅದನ್ನೇಕೆ ತಡೆಯಲಿಲ್ಲ ಎಂದು ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಪಿ ಡಿ ನಾಯ್ಕ್ ಅವರಿದ್ದ ಪೀಠ ಪ್ರಶ್ನಿಸಿತು.
ನ್ಯಾಯಾಲಯದ ಪ್ರಮುಖ ಅವಲೋಕನಗಳು
ಅಭಿನವ ಭಾರತಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲು ಅಧಿಕೃತ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ ಎಂಬ ಮೇಲ್ಮನವಿದಾರನ ವಾದವನ್ನು ಒಪ್ಪಿಕೊಳ್ಳುವುದಾದರೂ, ನಾಗರಿಕ ಪ್ರದೇಶದಲ್ಲಿ ನಡೆದ ಬಾಂಬ್ ಸ್ಫೋಟವನ್ನು ಏಕೆ ತಪ್ಪಿಸಲಿಲ್ಲ ಎಂಬ ಪ್ರಶ್ನೆಗೆ ಅವರು ಉತ್ತರಿಸಬೇಕಾಗಿದೆ. ಮಾಲೆಗಾಂವ್‌ನಲ್ಲಿ ಆರು ಅಮಾಯಕರ ಜೀವಹಾನಿ ಮತ್ತು ಸುಮಾರು 100 ಜನರಿಗೆ ಗಂಭೀರ ಗಾಯಗಳಾಗಿವೆ. ಅದು ಅಲ್ಲದೇ ಹೋದರೂ ಆರು ಜನರ ಸಾವಿಗೆ ಕಾರಣವಾದಂತಹ ಬಾಂಬ್ ಸ್ಫೋಟದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು ಮೇಲ್ಮನವಿದಾರರು ತನ್ನ ಅಧಿಕೃತ ಕರ್ತವ್ಯದ ಭಾಗವಾಗಿ ಮಾಡಿದ ಕೆಲಸವಲ್ಲ.
ಅಧಿಕೃತ ಕರ್ತವ್ಯದ ಭಾಗವಾಗಿ ಸಂಚಿನ ಸಭೆಗೆ ಹಾಜರಾಗುವ ಕೆಲಸ ಮಾಡಿಲ್ಲವಾದ್ದರಿಂದ ಅಧಿಕಾರಿಗಳಿಂದ ತನಿಖೆ ನಡೆಸುವವರು ಸೂಕ್ತ ಅನುಮತಿ ಪಡೆಯಬೇಕೆಂಬ ಪ್ರಶ್ನೆಯೇ ಉದ್ಭವಿಸದು.
ನಮ್ಮ ಪ್ರಕಾರ, ಅಪೀಲುದಾರರ ವಿರುದ್ಧ ಆಪಾದಿಸಲಾದ ಅಪರಾಧ ಮತ್ತು ಅವರ ಅಧಿಕೃತ ಕರ್ತವ್ಯದ ನಡುವೆ ಯಾವುದೇ ಸಮಂಜಸ ಸಂಬಂಧವಿಲ್ಲ. ಮೇಲ್ಮನವಿಗೆ ಸಂಬಂಧಿಸಿದಂತೆ ಆಪಾದಿಸಲಾದ ಕಾರ್ಯವು ಅವರ ಅಧಿಕೃತ ಕರ್ತವ್ಯ ನಿರ್ವಹಿಸುವಿಕೆಗೆ ಸಂಬಂಧಿಸಿದ್ದಲ್ಲ. ಆದ್ದರಿಂದ ಸಿಆರ್‌ಪಿಸಿ ಸೆಕ್ಷನ್ 197ರ ಅಡಿಯಲ್ಲಿ ಮೇಲ್ಮನವಿದಾರರನ್ನು ವಿಚಾರಣೆಗೆ ಒಳಪಡಿಸಲು ಯಾವುದೇ ಅನುಮತಿಯ ಪ್ರಶ್ನೆ ಉದ್ಭವಿಸುವುದಿಲ್ಲ.