ಡಿಕೆಶಿ ವಿರುದ್ಧ ಎಫ್‌ಐಆರ್‌ ದಾಖಲಿಸಿ 4 ವರ್ಷವಾದರೂ ಅಂತಿಮ ವರದಿ ಸಲ್ಲಿಸಿಲ್ಲವೇಕೆ ಎಂಬುದಕ್ಕೆ ಸಿಬಿಐ ಸಮಜಾಯಿಷಿ ಏನು?

2020ರ ಅ. 3ರಂದು ಎಫ್‌ಐಆರ್‌ ದಾಖಲಿಸಲಾಗಿದೆ. ಇದರಲ್ಲಿ ಎರಡು ವರ್ಷ ಕೋವಿಡ್‌ನಿಂದಾಗಿ ತನಿಖೆ ನಡೆಸಲಾಗಿಲ್ಲ. ಒಂದು ವರ್ಷ ಅರ್ಜಿದಾರರು ಪ್ರಕರಣದ ವಿಚಾರಣೆಗೆ ತಡೆ ಪಡೆದುಕೊಂಡಿದ್ದರಿಂದ ಯಾವುದೇ ಬೆಳವಣಿಗೆಯಾಗಿಲ್ಲ ಎಂದು ವಿವರಿಸಿದ ಎಸ್‌ಪಿಪಿ.
D K Shivakumar, CBI and Karnataka HC
D K Shivakumar, CBI and Karnataka HC

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಕೇಂದ್ರೀಯ ತನಿಖಾ ದಳವು (ಸಿಬಿಐ) ಎಫ್‌ಐಆರ್‌ ದಾಖಲಿಸಿ ಸುಮಾರು ನಾಲ್ಕು ವರ್ಷಗಳಾದರೂ ಅಂತಿಮ ವರದಿ ಸಲ್ಲಿಸದಿರುವ ಕುರಿತು ಶುಕ್ರವಾರ ಕರ್ನಾಟಕ ಹೈಕೋರ್ಟ್‌ ಮೌಖಿಕವಾಗಿ ಪ್ರಶ್ನಿಸಿತು.

ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ನೀಡಿದ್ದ ಅನುಮತಿ ಹಿಂಪಡೆದಿದ್ದ ಕ್ರಮ ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್‌ ಮತ್ತು ಉಮೇಶ್‌ ಎಂ. ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆಯ ಅಂತಿಮ ಹಂತದಲ್ಲಿ ನ್ಯಾ. ಅಡಿಗ ಅವರು ಸಿಬಿಐ ಇನ್ನೂ ವಿಚಾರಣೆ ಆರಂಭಿಸಿಲ್ಲವೇ ಎಂದು ಪ್ರಶ್ನಿಸಿದರು. ಈ ಪ್ರಶ್ನೆ ಮುಂದುವರಿಸಿದ ನ್ಯಾ. ಸೋಮಶೇಖರ್‌ ಅವರು ಸಿಬಿಐ ಯಾವಾಗ ಎಫ್‌ಐಆರ್‌ ದಾಖಲಿಸಿತು ಎಂದು ಸಿಬಿಐ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನ ಕುಮಾರ್‌ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರಸನ್ನ ಕುಮಾರ್‌ ಅವರು “2020ರ ಅಕ್ಟೋಬರ್‌ 3ರಂದು ಎಫ್‌ಐಆರ್‌ ದಾಖಲಿಸಲಾಗಿದೆ. ಇದರಲ್ಲಿ ಎರಡು ವರ್ಷ ಕೋವಿಡ್‌ನಿಂದಾಗಿ ತನಿಖೆ ನಡೆಸಲಾಗಿಲ್ಲ. ಒಂದು ವರ್ಷ ಅರ್ಜಿದಾರರು ಪ್ರಕರಣದ ವಿಚಾರಣೆಗೆ ತಡೆ ಪಡೆದುಕೊಂಡಿದ್ದರಿಂದ ಯಾವುದೇ ಬೆಳವಣಿಗೆಯಾಗಿಲ್ಲ. ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ ಕೆ ಶಿವಕುಮಾರ್‌ ಅವರು ಆರು ಅರ್ಜಿಗಳನ್ನು ನ್ಯಾಯಾಲಯದಲ್ಲಿ ಸಲ್ಲಿಕೆ ಮಾಡಿದ್ದಾರೆ ಎಂದರು. ಈ ಸಂಬಂಧ ವಿಸ್ತೃತ ಬೆಳವಣಿಗೆಯನ್ನು ನ್ಯಾಯಾಲಯದ ಮುಂದಿಡಲಾಗುವುದು” ಎಂದು ಸಮಜಾಯಿಷಿ ನೀಡಿದರು.

ಇದಕ್ಕೂ ಮುನ್ನ ವಾದಿಸಿದ ಪ್ರಸನ್ನ ಕುಮಾರ್‌ “ರಾಜ್ಯ ಸರ್ಕಾರವು ಸಿಬಿಐಗೆ ಅನುಮತಿ ಹಿಂಪಡೆದಿರುವ ಆದೇಶದಲ್ಲಿ ಕಾರಣಗಳನ್ನು ನೀಡಿಲ್ಲ. ಡಿ ಕೆ ಶಿವಕುಮಾರ್‌ ಅವರ ಅಕ್ರಮ ಆಸ್ತಿಯು 2013-18ರ ಅವಧಿಯಲ್ಲಿ 74.93 ಕೋಟಿ ರೂಪಾಯಿಯಷ್ಟಿದ್ದು, ಶೇ. 49.13ರಷ್ಟು ಹೆಚ್ಚಳವಾಗಿದೆ” ಎಂದರು.

“ಸಿಬಿಐ ತನಿಖೆ ರದ್ದತಿ ಕೋರಿ ಡಿ ಕೆ ಶಿವಕುಮಾರ್‌ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್‌ನ ಏಕಸದಸ್ಯ ಪೀಠವು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಡಿ ಕೆ ಶಿವಕುಮಾರ್‌ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆ ಬಾಕಿ ಇದ್ದಾಗ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆಯಲಾಗಿದೆ” ಎಂದು ಆಕ್ಷೇಪಿಸಿದರು.

Also Read
ಡಿ ಕೆ ಶಿವಕುಮಾರ್‌ ವಿರುದ್ಧದ ಸಿಬಿಐ ತನಿಖೆಗೆ ಅನುಮತಿ ವಾಪಸ್‌ ಪಡೆದ ಪ್ರಕರಣ: ವಿಚಾರಣೆ ಮುಂದೂಡಿದ ಹೈಕೋರ್ಟ್‌

“ಜನರಲ್‌ ಕ್ಲಾಸಸ್‌ ಕಾಯಿದೆ ಅಡಿ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆಯುವ ಅಧಿಕಾರವನ್ನು ಸರ್ಕಾರ ಹೊಂದಿದೆಯೇ? ಒಂದೊಮ್ಮೆ ರಾಜ್ಯ ಸರ್ಕಾರಕ್ಕೆ ಆ ಅಧಿಕಾರ ಇದೆ ಎಂದಾದರೆ ಸಿಬಿಐ ದಾಖಲಿಸಿರುವ ಎಫ್‌ಐಆರ್‌ ಗತಿ ಏನು? ‌ಜನರಲ್‌ ಕ್ಲಾಸಸ್‌ ಕಾಯಿದೆ ಅಡಿ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆಯುವ ಅಧಿಕಾರ ಸರ್ಕಾರಕ್ಕೆ ಇದೆ ಎಂದಾದರೂ ತನಿಖೆ ಪೂರ್ಣಗೊಳಿಸಿ, ಅಂತಿಮ ವರದಿ ಸಲ್ಲಿಸಲು ಸಿಬಿಐಗೆ ಅವಕಾಶ ಮಾಡಿಕೊಡಬೇಕು” ಎಂದು ಕೋರಿದರು.

ವಾದ ಆಲಿಸಿದ ಪೀಠವು ವಿಚಾರಣೆಯನ್ನು ಏಪ್ರಿಲ್‌ 18ಕ್ಕೆ ವಿಚಾರಣೆ ಮುಂದೂಡಿತು.

Kannada Bar & Bench
kannada.barandbench.com