Chief Justice P B Varale and Justice Krishna S. Dixit
Chief Justice P B Varale and Justice Krishna S. Dixit

"ಗುತ್ತಿಗೆದಾರರಿಂದ ಕೆಲಸ ಮಾಡಿಸಿಕೊಂಡ ಮೇಲೆ ಬಿಲ್ ಪಾವತಿಸಲು ತಕರಾರೇಕೆ?": ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

ನಾವು ಕಾನೂನು ಪದವಿ ಓದುತ್ತಿದ್ದಾಗ ‘ಸರ್ಕಾರವೇ ನಾಗರಿಕರ ಮೊದಲ ಶತ್ರು’ ಎಂಬ ಮಾತು ಹೇಳಲಾಗುತ್ತಿತ್ತು. ಇದೀಗ ಈ ಮಾತು ಸತ್ಯ ಎಂಬ ಭಾವನೆ ಮೂಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಲಯ.
Published on

ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸಲು ವಿಳಂಬ ಮಾಡುತ್ತಿರುವ ಬಗ್ಗೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಯ ಬಗ್ಗೆ ಮತ್ತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌, "ಗುತ್ತಿಗೆದಾರರಿಂದ ಕೆಲಸ ಮಾಡಿಸಿಕೊಂಡ ಮೇಲೆ ಬಿಲ್ ಪಾವತಿಸಲು ತಕರಾರೇಕೆ? ಸರ್ಕಾರವೇ ನಾಗರಿಕರ ಮೊದಲ ಶತ್ರು ಎಂಬ ಮಾತು ಸತ್ಯ ಎಂಬುದಾಗಿ ಭಾಸವಾಗುತ್ತಿದೆ" ಎಂದು ಮೌಖಿಕವಾಗಿ ಕಟುವಾಗಿ ನುಡಿದಿದೆ.

ನಿಕ್ಷೇಪ ಇನ್ಫ್ರಾ ಪ್ರಾಜೆಕ್ಟ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು.

"ಗುತ್ತಿದಾರರಿಗೆ ಹಣ ಪಾವತಿಸಲು ಫೆಬ್ರವರಿಯವರೆಗೆ ಕಾವಲಾವಕಾಶ ನೀಡಬೇಕು ಎಂಬ ಸರ್ಕಾರಿ ವಕೀಲರ ಮನವಿಯನ್ನು ಆಕ್ಷೇಪಿಸಿದ ವಿಭಾಗೀಯ ಪೀಠವು ನಿಮ್ಮ (ಸರ್ಕಾರ) ನಡೆಯಿಂದ ಕೆಲಸ ಮಾಡಲು ಗುತ್ತಿಗೆದಾರರು ಹಿಂಜರಿಯುವ ಸ್ಥಿತಿ ಸೃಷ್ಟಿಸುತ್ತಿದ್ದೀರಿ. ನಿಮ್ಮ ನೀತಿಯಿಂದ ಟೆಂಡರ್ ಮೊತ್ತ ಹಲವು ಪಟ್ಟು ಹೆಚ್ಚಾಗಬಹುದು. ಸರ್ಕಾರಕ್ಕೆ ಇಂತಹ ಸಲಹೆ ನೀಡುತ್ತಿರುವರಾರು? ನಾವು ಕಾನೂನು ಪದವಿ ಓದುತ್ತಿದ್ದಾಗ ‘ಸರ್ಕಾರವೇ ನಾಗರಿಕರ ಮೊದಲ ಶತ್ರು’ ಎಂಬ ಮಾತು ಹೇಳಲಾಗುತ್ತಿತ್ತು. ಇದೀಗ ಈ ಮಾತು ಸತ್ಯ ಎಂಬ ಭಾವನೆ ಮೂಡುತ್ತಿದೆ" ಎಂದಿತು.

ಆಗ ಸರ್ಕಾರಿ ವಕೀಲರು, ಅರ್ಜಿದಾರರಿಗೆ ಕಂತಿನಲ್ಲಿ ಬಿಲ್ ಪಾವತಿಸಲಾಗುತ್ತಿದೆ. ಫೆಬ್ರವರಿವರೆಗೆ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಗುತ್ತಿಗೆ ಕಾಮಗಾರಿಗಳ ಅಕ್ರಮ ಕುರಿತಂತೆ ತನಿಖೆ ನಡೆಸಲು ಸರ್ಕಾರ ಎಸ್‌ಐಟಿ ಮತ್ತು ಏಕವ್ಯಕ್ತಿ ಆಯೋಗ ರಚನೆ ಮಾಡಿರುವುದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಯು ಹೈಕೋರ್ಟ್‌ ಏಕ ಸದಸ್ಯ ಪೀಠದ ಮುಂದಿದೆ. ಈಗಾಗಲೇ ಎಸ್‌ಐಟಿ ತನಿಖೆಗೆ ಏಕ ಸದಸ್ಯ ನ್ಯಾಯಪೀಠ ತಡೆ ನೀಡಿದೆ ಎಂದು ವಿಭಾಗೀಯ ಪೀಠದ ಗಮನಕ್ಕೆ ತಂದರು.

ಅದನ್ನು ಪರಿಗಣಿಸಿದ ವಿಭಾಗೀಯ ಪೀಠವು ಅರ್ಜಿಯ ಸಂಬಂಧ ಯಾವುದೇ ಮುಂದಿನ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿ ವಿಚಾರಣೆಯನ್ನು 2024ರ ಫೆಬ್ರವರಿ 13ಕ್ಕೆ ಮುಂದೂಡಿದೆ.

ಅರ್ಜಿಯನ್ನು ಕಳೆದ ನವೆಂಬರ್‌ 29ರಂದು ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠವು ಕೆಲವು ಕಾಮಗಾರಿಗಳಿಗೆ ಸ್ಥಳೀಯ ಸಂಸ್ಥೆಗಳು ಟೆಂಡರ್ ಕರೆದು, ಆ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಬಳಿಕ ಹಣ ಪಾವತಿಗೆ ಅನಗತ್ಯ ವಿಳಂಬ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಸರ್ಕಾರವು ಗುತ್ತಿಗೆದಾರರನ್ನು ಮೂಲೆಗುಂಪು ಮಾಡಬಾರದು. ಈಗಾಗಲೇ ಇಬ್ಬರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೆಷ್ಟು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕು. ಬಾಕಿ ಹಣ ಬಿಡುಗಡೆ ಮಾಡುವುದರಲ್ಲಿಯೇ ಹಿರಿತನವನ್ನು ಏಕೆ ಅನುಸರಿಸಬೇಕು. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಲು ಬಿಡಬಾರದು ಎಂದು ಕಟುವಾಗಿ ನುಡಿದಿತ್ತು.

Kannada Bar & Bench
kannada.barandbench.com