ಆದೇಶ ಉಲ್ಲಂಘನೆ: ದೇಶದ ಆರು ಪ್ರಮುಖ ಪಟಾಕಿ ತಯಾರಕರಿಗೆ ಶೋಕಾಸ್ ನೋಟಿಸ್ ನೀಡಿದ ಸುಪ್ರೀಂಕೋರ್ಟ್

ಪಟಾಕಿ ತಯಾರಕರು ಇನ್ನೂ ಪಟಾಕಿಯಲ್ಲಿ ಬೇರಿಯಂ ನೈಟ್ರೇಟ್ ಮತ್ತು ಇತರ ಬೇರಿಯಂ ಲವಣಗಳನ್ನು ಬಳಸುತ್ತಿದ್ದಾರೆ ಎಂದು ಸಿಬಿಐ ಜಂಟಿ ನಿರ್ದೇಶಕರು ಸಲ್ಲಿಸಿದ ಪ್ರಾಥಮಿಕ ವರದಿ ಸೂಚಿಸಿರುವುದನ್ನು ನ್ಯಾಯಾಲಯ ಪರಿಗಣಿಸಿತು.
Supreme court of India, Firecrackers
Supreme court of India, Firecrackers
Published on

ಪಟಾಕಿಯಲ್ಲಿ ಬೇರಿಯಂ ಬಳಕೆ ನಿಷೇಧಿಸಿ ಹೊರಡಿಸಿದ್ದ ಈ ಹಿಂದಿನ ಆದೇಶ ಉಲ್ಲಂಘಿಸಿದ್ದಕ್ಕಾಗಿ ನ್ಯಾಯಾಂಗ ನಿಂದನೆ ಕ್ರಮ ಏಕೆ ಕೈಗೊಳ್ಳಬಾರದು ಎಂದು ಕೇಳಿ ದೇಶದ ಆರು ಪ್ರಮುಖ ಪಟಾಕಿ ತಯಾರಕ ಕಂಪೆನಿಗಳಿಗೆ ಸುಪ್ರೀಂಕೋರ್ಟ್‌ ಇಂದು ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ.

ಪಟಾಕಿಗಳನ್ನು ನಿಯಂತ್ರಿಸುವ ಹಾಗೂ ಬೇರಿಯಂ ನೈಟ್ರೇಟ್‌ನಂತಹ ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುವ ಪಟಾಕಿಗಳ ತಯಾರಿಕೆ ನಿಷೇಧಿಸುವ ಕುರಿತು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠ ನಡೆಸಿತು.

ಪಟಾಕಿ ತಯಾರಕರು ಇನ್ನೂ ಪಟಾಕಿಯಲ್ಲಿ ಬೇರಿಯಂ ನೈಟ್ರೇಟ್ ಮತ್ತು ಇತರ ಬೇರಿಯಂ ಲವಣಗಳನ್ನು ಬಳಸುತ್ತಿದ್ದಾರೆ ಎಂದು ಸಿಬಿಐನ ಚೆನ್ನೈ ಘಟಕದ ಜಂಟಿ ನಿರ್ದೇಶಕರು ಸಲ್ಲಿಸಿದ ಪ್ರಾಥಮಿಕ ವರದಿ ಸೂಚಿಸಿರುವುದನ್ನು ನ್ಯಾಯಾಲಯ ಗಮನಿಸಿತು.

ಚೆನ್ನೈನ ಕೇಂದ್ರೀಯ ತನಿಖಾ ದಳದ (ಸಿಬಿಐ) ಜಂಟಿ ನಿರ್ದೇಶಕರು ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ಪಟಾಕಿ ತಯಾರಕರು ಇನ್ನೂ ಪಟಾಕಿಯಲ್ಲಿ ಬೇರಿಯಂ ನೈಟ್ರೇಟ್ ಮತ್ತು ಇತರ ಬೇರಿಯಂ ಲವಣಗಳನ್ನು ಬಳಸುತ್ತಿದ್ದಾರೆ. ಪಟಾಕಿ ತಯಾರಿಕೆಗೆ ಸಂಬಂಧಿಸಿದಂತೆ ಬಳಸಲಾಗುತ್ತಿರುವ ಪದಾರ್ಥಗಳ ಸರಿಯಾದ ಮಾಹಿತಿಯನ್ನೂ ಅವರು ನೀಡುತ್ತಿಲ್ಲ ಎನ್ನುವ ಅಂಶವನ್ನು ದಾಖಲಿಸಲಾಗಿದೆ.

ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ತನ್ನ ಆದೇಶದಲ್ಲಿ, ತಾನು ಈ ಹಿಂದೆ ನೀಡಿರುವ ಆದೇಶಗಳಿಗೆ ಸಂಬಂಧಿಸಿದಂತೆ (ಪಟಾಕಿ) ತಯಾರಕರಿಂದ ಸ್ಪಷ್ಟವಾದ ಉಲ್ಲಂಘನೆಯಾಗಿದೆ. ನ್ಯಾಯಾಲಯದ ಹಿಂದಿನ ಆದೇಶ ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬಾರದು ಎಂದು ಕೇಳಿ ಶೋಕಾಸ್‌ ನೋಟಿಸ್‌ ನೀಡಲಾಗುತ್ತಿದೆ ಎಂದಿತು.

ಸಿಬಿಐ ವರದಿ ಪರಿಶೀಲಿಸಿ ಅದಕ್ಕೆ ಪ್ರತಿಕ್ರಿಯೆ ಸಲ್ಲಿಸಲು ಪಟಾಕಿ ತಯಾರಕರಿಗೆ ನ್ಯಾಯಾಲಯ ಇಂದು ಅವಕಾಶ ನೀಡಿದ್ದು ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 6ಕ್ಕೆ ನಿಗದಿಪಡಿಸಿದೆ.

“ವರದಿಗೆ ಸಂಬಂಧಿಸಿದಂತೆ ತಮ್ಮ ವಾದ ಮಂಡಿಸಲು ಮತ್ತೊಂದು ಅವಕಾಶ ನೀಡಲಾಗುತ್ತಿದೆ. ಸಿಬಿಐನ ಪ್ರಾಥಮಿಕ ತನಿಖಾ ವರದಿಯ ಪ್ರತಿಯನ್ನು ನಾಳೆ ಸಂಬಂಧಪಟ್ಟ ಎಲ್ಲಾ ವಕೀಲರಿಗೆ ನೀಡುವಂತೆ ನಿರ್ದೇಶಿಸಲಾಗಿದೆ. ತಮ್ಮ ವಿರುದ್ಧದ ಆಪಾದನೆಗಳಿಗೆ ಪ್ರತಿಕ್ರಿಯೆ ನೀಡಲು ಪಟಾಕಿ ತಯಾರಕರು ಮುಕ್ತರಾಗಿರುತ್ತಾರೆ…” ಎಂದು ನ್ಯಾಯಾಲಯ ಹೇಳಿದೆ.

ಹಸಿರು ಪಟಾಕಿಗಳನ್ನು ಮಾತ್ರ ಬಳಸವುಂತೆ ಆದೇಶ ಹೊರಡಿಸಿದರೂ ಕೂಡ ಅವು ಬ್ಯಾನರ್‌ಗಳ ಮೇಲೆ ಮಾತ್ರ ಇರಲಿದ್ದು ಬೇರಿಯಂ ಲವಣ ಬಳಕೆ ಮುಂದುವರೆಯಲಿದೆ. ಆಸ್ತಮಾದಿಂದ ಬಳಲುತ್ತಿರುವವರಿಗೆ ಮಾತ್ರ ಇದು ತಂದೊಡ್ಡುವ ಸಮಸ್ಯೆ ಅರ್ಥವಾಗುತ್ತದೆ. ಪ್ರತಿದಿನವೂ ಒಂದಿಲ್ಲೊಂದು ಸಂಭ್ರಮಾಚರಣೆ ಇರುವುದರಿಂದ ನಾವು ಸಮತೋಲಿತ ದೃಷ್ಟಿಯಲ್ಲಿ ವಿಷಯವನ್ನು ನೋಡಬೇಕು. ಇದೇ ವೇಳೆ ನಾವು ಇತರೆ ಅಂಶಗಳನ್ನು ಕೂಡ ಗಮನಿಸಬೇಕಿದ್ದು ಯಾರೊಬ್ಬರನ್ನೂ ನೋವು ಅನುಭವಿಸಿ, ಸಾಯಲು ಬಿಡಲಾಗದು” ಎಂದು ಪೀಠ ಹೇಳಿದೆ.

Kannada Bar & Bench
kannada.barandbench.com