ನ್ಯಾಯಾಲಯದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಮನರಂಜನೆಗಾಗಿ ಅರಿಯಲು ಇಚ್ಛಿಸುವುದಕ್ಕೆ ಸಹಮತವಿಲ್ಲ: ನ್ಯಾ.‌ ಪಟೇಲ್‌

“ನಾನು ಹೆಚ್ಚು ಮುಕ್ತವಾಗಿರುವುದಕ್ಕೆ ವಿರುದ್ಧವಿಲ್ಲ… ಈ ನಿಟ್ಟಿನಲ್ಲಿ ಇನ್ನೂ ಸರಿಯಾದ ವಿಧಾನ ಕಂಡುಕೊಂಡಿಲ್ಲ… ನಮ್ಮ ಉದ್ಯೋಗ ಬಯಸುವ ಸೂಕ್ಷ್ಮತೆ ಉಳಿಸಿಕೊಂಡು ಕಾರ್ಯನಿರ್ವಹಿಸುವ ವಿಧಾನವನ್ನು ನಾವು ಕಂಡುಕೊಂಡಿಲ್ಲ” - ನ್ಯಾ. ಪಟೇಲ್.
Justice Gautam Patel
Justice Gautam Patel

ನ್ಯಾಯಾಲಯದ ಕಲಾಪವನ್ನು ಹೆಚ್ಚು ಮುಕ್ತಗೊಳಿಸಲು ತನ್ನ ವಿರೋಧವಿಲ್ಲ ಎಂದಿರುವ ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ ಜಿ ಎಸ್‌ ಪಟೇಲ್‌ ಅವರು ನ್ಯಾಯಾಲಯದ ಕಲಾಪವನ್ನು ನೇರ ಪ್ರಸಾರ (ಲೈವ್‌ ಸ್ಟ್ರೀಮ್‌) ನಡೆಸುವ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಅಂತರ ಕಾಯ್ದುಕೊಂಡಿದ್ದಾರೆ. ಅಲ್ಲದೇ ಅನಿಯಂತ್ರಿತ ನೇರ ಪ್ರಸಾರಕ್ಕೆ ಅವಕಾಶ ಮಾಡಿಕೊಟ್ಟಿದ್ದೇ ಆದರೆ ಕೆಲವು ಸಮಸ್ಯೆಗಳು ಎದುರಾಗಲಿವೆ ಎಂದೂ ಹೇಳಿದ್ದಾರೆ.

ದಕ್ಷ್‌ ಸಂಸ್ಥೆ ಆಯೋಜಿಸಿದ್ದ 'ಆಡಳಿತ ಮತ್ತು ಹೊಣೆಗಾರಿಕೆಯಲ್ಲಿ ಮಾಧ್ಯಮದ ಪಾತ್ರʼ ಕುರಿತ ವಿಷಯದ ಮೇಲಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಾಸ್ತವದಲ್ಲಿ ನ್ಯಾಯಾಲಯದ ಕಲಾಪವನ್ನು ನೇರ ಪ್ರಸಾರ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ನ್ಯಾ. ಪಟೇಲ್‌ ಹೇಳಿದ್ದಾರೆ.

ಮುಂದುವರೆದು, ಇಲ್ಲಿರುವ ಸಮಸ್ಯೆ ಎಂದರೆ ನ್ಯಾಯಾಲಯದ ಗಹನವಾದ ಕೆಲಸ, ಮೊಕದ್ದಮೆ ಮತ್ತು ತೀರ್ಪು ನೀಡುವುದನ್ನು ಮನರಂಜನೆಯಾಗಿಸುವುದನ್ನು ತಡೆಯಲು ನಮ್ಮಲ್ಲಿ ಯಾವುದೇ ವಿಧಾನಗಳಿಲ್ಲ ಎಂದು ತಮ್ಮ ಆತಂಕ ವ್ಯಕ್ತಪಡಿಸಿದರು. “ಇದು ಸರ್ಕಸ್‌ ಅಲ್ಲ, ನಾನು ಯಾರಿಗೂ ಮನರಂಜನೆ ನೀಡಲು ಇಲ್ಲಿ ಬಂದಿಲ್ಲ. ಆದರೆ, ಅದು ಮನರಂಜನೆಯಾಗಿ ಬದಲಾಗುತ್ತದೆ. ಅಮೆರಿಕಾದಲ್ಲಿ ʼಜಡ್ಜ್‌ ಜುಡಿʼ ಅಥವಾ ಇನ್ನಿತರೆ ಕಾರ್ಯಕ್ರಮಗಳಿವೆ… ನನಗೆ ಜನರು ಸೋಮವಾರ ಮಧ್ಯಾಹ್ನದ ಬಳಿಕೆ ತಮಗೆ ಮಾಡಲು ಬೇರೆ ಕೆಲಸವಿಲ್ಲ ಎಂದು ಅಮೆಜಾನ್‌ ಫೈರ್‌ಸ್ಟಿಕ್ಸ್‌ಗೆ (ಟಿವಿಯ ಜೊತೆ ಸಂಪರ್ಕ ಸಾಧಿಸಿ ವಿವಿಧ ಕಾರ್ಯಕ್ರಮಗಳನ್ನು ವೀಕ್ಷಿಸಲು ಬಳಸುವ ಸ್ಟ್ರೀಮಿಂಗ್‌ ಸಾಧನ) ಹೋಗಿ ನ್ಯಾ. ಶಖ್ದೇರ್‌ ನ್ಯಾಯಾಲಯದ ಕೊಠಡಿ ಅಥವಾ ನ್ಯಾ. ಪಟೇಲ್‌ ನ್ಯಾಯಾಲಯದ ಕೊಠಡಿಯಲ್ಲಿ ಏನು ನಡೆಯುತ್ತಿದೆ ಎಂದು ಜನರು ನೋಡಲು ಬಯಸುವುದು ನನಗೆ ಇಷ್ಟವಿಲ್ಲ,” ಎಂದು ನ್ಯಾ. ಪಟೇಲ್‌ ಹೇಳಿದ್ದಾರೆ.

ನನ್ನ ನ್ಯಾಯಾಲಯದ ಕೊಠಡಿಯು ಎಲ್ಲರಿಗೂ ತೆರೆದಿರುತ್ತದೆ. ಆದರೆ, ನ್ಯಾಯಾಲಯದ ಪ್ರಕ್ರಿಯೆಯು ಜನರ ಮನರಂಜನೆಗಾಗಿ ಅಲ್ಲ ಎಂದಿದ್ದಾರೆ. “ನ್ಯಾಯಾಲಯದಲ್ಲಿ ಏನು ನಡೆಯುತ್ತದೆ ಎಂಬುದನ್ನು ತಿಳಿಯುವ ಆಸೆ ನಿಮಗಿದೆಯೇ? ಅದಕ್ಕೆ ನನ್ನ ನ್ಯಾಯಾಲಯದ ಕೊಠಡಿ ತೆರೆದಿರುತ್ತದೆ. ಪ್ರಯತ್ನ ಮಾಡಿ, ನ್ಯಾಯಾಲಯಕ್ಕೆ ಬನ್ನಿ, ನೀವು ಯಾರೆಂದು ನಾನು ಕೇಳುವುದಿಲ್ಲ. ಕುಳಿತು ಕಲಾಪದ ಪ್ರಕ್ರಿಯೆಯನ್ನು ಟಿಪ್ಪಣಿ ಮಾಡಿಕೊಳ್ಳಿ, ಕೇಳಿಸಿಕೊಳ್ಳಿ ಯಾವುದೇ ಸಮಸ್ಯೆಯಿಲ್ಲ. ಆದರೆ, ನಾನು ಇಲ್ಲಿ ನಿಮಗೆ ಮನರಂಜನೆ ನೀಡಲು ಇಲ್ಲ. ಮನರಂಜನೆ ನೀಡಲು ನಾನು ಒಪ್ಪುವುದಿಲ್ಲ. ಅದು ನನ್ನ ಉದ್ಯೋಗವಲ್ಲ,” ಎಂದು ಹೇಳಿದ್ದಾರೆ.

ಕಲಾಪವನ್ನು ನೇರಪ್ರಸಾರ ಮಾಡುವುದರಿಂದ ನ್ಯಾಯಮೂರ್ತಿಗಳನ್ನು ಬೆದರಿಸಲು ಮತ್ತು ಜನರ ಭಾವನೆಯನ್ನು ಪ್ರಭಾವಿಸಲು ವಕೀಲರು ಅದನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ ಎಂಬ ಆತಂಕವೂ ವ್ಯಕ್ತವಾಗಿದೆ.

“ನ್ಯಾಯಮೂರ್ತಿಗಳು ಮನುಷ್ಯರಾಗಿರುವುದರಿಂದ ಕೆಲವೊಮ್ಮೆ ಕಠಿಣವಾಗಿ ಪ್ರತಿಕ್ರಿಯಿಸಬಹುದು. ಅದನ್ನು ಅಗತ್ಯ ಮೀರಿ ಪ್ರಸ್ತಾಪಿಸುವ ಸಾಧ್ಯತೆ ಇರುತ್ತದೆ. ನೀವು ಇದನ್ನು ನಿಯಂತ್ರಿಸಲಾಗದು,” ಎಂದೂ ಅವರು ಹೇಳಿದರು.

ವಕೀಲರು ನ್ಯಾಯಯುತ ಹೇಳಿಕೆಯನ್ನು ನೀಡಿ ಕಾನೂನು ತಮ್ಮ ಪರವಿಲ್ಲ ಎಂದು ಹೇಳಿದ್ದನ್ನೂ ತಪ್ಪಾಗಿ ಅರ್ಥೈಸಿ, ಸಾರ್ವಜನಿಕ ವಲಯದಲ್ಲಿ ವಕೀಲರ ವಿರುದ್ಧ ತಪ್ಪು ಗ್ರಹಿಕೆ ರೂಪಿಸುವ ಸಾಧ್ಯತೆ ಉಂಟು ಎಂದು ನ್ಯಾ. ಪಟೇಲ್‌ ಹೇಳಿದ್ದಾರೆ. “ಯಾವುದೇ ನಿರ್ಬಂಧಗಳಿಲ್ಲದೇ ಕಲಾಪವನ್ನು ನೇರಪ್ರಸಾರ ಮಾಡುವ ಇರಾದೆಯನ್ನು ನೀವು ಹೊಂದಿದ್ದರೆ ನಾನು ಅದರ ಪರವಿಲ್ಲ. ಇಂಥ ವಿಚಾರಗಳಿಗೆ ಪರಿಹಾರ ಕಂಡುಕೊಳ್ಳುವ ವಿಧಾನಗಳು ನಮ್ಮಲ್ಲಿ ಇಲ್ಲ”ಎಂದು ಹೇಳಿದ್ದಾರೆ.

Also Read
ರೈತರ ಪ್ರತಿಭಟನೆ: ಸಮಿತಿಯಲ್ಲಿ ವಾಸ್ತವತೆ ತಿಳಿದ ಒಬ್ಬ ಸದಸ್ಯನಾದರೂ ಇರಬೇಕು ಎಂದ ನಿವೃತ್ತ ನ್ಯಾಯಮೂರ್ತಿ ಮಲಿಕ್

ಅದಾಗ್ಯೂ, ತಾನು ಹೆಚ್ಚು ಪಾರದರ್ಶಕತೆಗೆ ವಿರುದ್ಧವಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. “ಕೆಲವು ಸಂದರ್ಭದಲ್ಲಿ ನಮ್ಮ ಉದ್ಯೋಗ ಬಯಸುವ ಅತೀಸೂಕ್ಷ್ಮತೆಯನ್ನು ಉಳಿಸಿಕೊಂಡು ನಮ್ಮ ಕೆಲಸ ನಿರ್ವಹಿಸುವ ವಿಧಾನವನ್ನು ನಾವು ಕಂಡುಕೊಂಡಿಲ್ಲ” ಎಂದಿದ್ದಾರೆ.

ನ್ಯಾಯಾಲಯದ ಕಲಾಪದ ವರದಿಗಾರಿಕೆಯ ಬಗ್ಗೆ ಮಾತನಾಡಿದ ನ್ಯಾ. ಪಟೇಲ್‌ ಅವರು ಕಾನೂನು ಕ್ಷೇತ್ರ ವರದಿಗಾರಿಕೆ ಮಾಡುವ ಪತ್ರಕರ್ತರು ವಕೀಲರಾಗಿರಬೇಕು ಎಂದೇನಿಲ್ಲ. ಆದರೆ, ಅವರು ಕಾನೂನಿನ ಪ್ರಾಥಮಿಕ ಅಂಶಗಳ ಬಗ್ಗೆ ತಿಳಿದಿರಬೇಕು ಎಂದರು. ಮುಂದುವರೆದು, "ಪ್ರಾಥಮಿಕ ಅಂಶಗಳೆಡೆಗಿನ ಅಪರಿಚಿತತೆಯು ಊಹೆಗಿಂತ ಹೆಚ್ಚಿನ ಸಮಸ್ಯೆ ತಂದೊಡ್ಡುತ್ತದೆ,” ಎಂದು ಹೇಳಿದರು.

ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ರಾಜೀವ್‌ ಶಖ್ದೇರ್‌, ಇಂಡಿಯನ್‌ ಎಕ್ಸ್‌ಪ್ರೆಸ್‌ನ ಸಹಾಯಕ ಸಂಪಾದಕಿ ಅಪೂರ್ವ ವಿಶ್ವನಾಥ್‌, ದಕ್ಷ್‌ ಸಹ ಸಂಸ್ಥಾಪಕ ಹರೀಶ್‌ ನರಸಪ್ಪ ಅವರು ಸಂವಾದದಲ್ಲಿ ಭಾಗವಹಿಸಿದ್ದರು. ದಕ್ಷ್‌ ಕಾರ್ಯಕ್ರಮ ನಿರ್ದೇಶಕ ಸೂರ್ಯಪ್ರಕಾಶ್‌ ಬಿ ಎಸ್‌ ಅವರು ಕಾರ್ಯಕ್ರಮ ನಿರ್ವಹಿಸಿದರು.

Related Stories

No stories found.
Kannada Bar & Bench
kannada.barandbench.com