ಮನುನೀದಿ ಚೋಳ ಮತ್ತು ವಿದ್ಯುತ್‌ಸ್ಪರ್ಶ ಪ್ರಕರಣ: ದೇಶದ ನ್ಯಾಯಾಲಯಗಳು ತಮಿಳುನಾಡಿನ ಆ ಚೋಳರಾಜನನ್ನು ಸ್ಮರಿಸುವುದೇಕೆ?

ರಾಜ ಮನುನೀದಿ ಚೋಳ ಕೇವಲ ನ್ಯಾಯದಾನ ಮಾಡುತ್ತಿರಲಿಲ್ಲ. ಬದಲಿಗೆ ಅವನೊಬ್ಬ ನ್ಯಾಯವೇತ್ತನಾಗಿದ್ದ. ಅರಸ ಇಲ್ಲವಾಗಿ ಯುಗಗಳೇ ಕಳೆದಿವೆ. ಆದರೆ ಈಗ ಕೂಡ ನ್ಯಾಯಾಲಯಗಳು ಆತನನ್ನು ನೆನೆಯುವುದಕ್ಕೆ ಒಂದು ಕಾರಣವಿದೆ...
ಮನುನೀದಿ ಚೋಳ ಮತ್ತು ವಿದ್ಯುತ್‌ಸ್ಪರ್ಶ ಪ್ರಕರಣ: ದೇಶದ ನ್ಯಾಯಾಲಯಗಳು ತಮಿಳುನಾಡಿನ ಆ ಚೋಳರಾಜನನ್ನು ಸ್ಮರಿಸುವುದೇಕೆ?
Published on

ಇತ್ತೀಚೆಗೆ ವಿದ್ಯುತ್‌ ಆಘಾತದಿಂದ ಸಾವನ್ನಪ್ಪಿದ 22 ವರ್ಷದ ಯುವಕನ ಕುಟುಂಬದ ನೆರವಿಗೆ ಧಾವಿಸಿದ ಮದ್ರಾಸ್‌ ಹೈಕೋರ್ಟ್‌ ಪ್ರಕರಣದ ವಿಚಾರಣೆ ವೇಳೆ ಚೋಳ ವಂಶದ ದಂತಕತೆ ರಾಜ ಮನು ನೀದಿ ಚೋಳನನ್ನು ಸ್ಮರಿಸಿದೆ. ಆ ಮೂಲಕ ಚೋಳರಾಜನ ಕುರಿತಾದ ಕತೆಯೊಂದು ಮುನ್ನೆಲೆಗೆ ಬರುವಂತೆ ಮಾಡಿದೆ.

ಅಂದಹಾಗೆ ನ್ಯಾಯಾಲಯಗಳು ಮನು ನೀದಿ ಚೋಳನನ್ನು ಸ್ಮರಿಸುತ್ತಿರುವುದು ಇದೇ ಮೊದಲಲ್ಲ. 2017ರಲ್ಲಿ ಸುಪ್ರೀಂಕೋರ್ಟಿನ 44ನೇ ಮುಖ್ಯ ನ್ಯಾಯಮೂರ್ತಿಯಾಗಿ ಜೆ ಎಸ್‌ ಖೆಹರ್‌ ಅವರ ಪದೋನ್ನತಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯ ಮನುನೀದಿಯ ನ್ಯಾಯಧರ್ಮವನ್ನು ಕೊಂಡಾಡಿದ್ದು ʼದ ಹಿಂದೂʼ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ವರದಿಯಾಗಿತ್ತು.

ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಉಪನ್ಯಾಸಗಳು ಮನುನೀದಿ ಚೋಳನ ಕತೆಗಳನ್ನು ಉಲ್ಲೇಖಿಸದೇ ಮುಂದುವರೆಯುವುದಿಲ್ಲ. ಅನೇಕ ಲೇಖಕರು ಕಾನೂನಿನ ಕುರಿತು ಪ್ರಸ್ತಾಪಿಸುವಾಗ ಮನುನೀದಿಯ ಕತೆಯನ್ನು ಬರೆಯದೇ ಬಿಡುವುದಿಲ್ಲ. ಆತ ಅದೆಷ್ಟು ಮಹತ್ವದ ನ್ಯಾಯದಾನಿಯಾಗಿದ್ದ ಎನ್ನುವುದಕ್ಕೆ ಉದಾಹರಣೆಯಾಗಿ ಖುದ್ದು ಮದ್ರಾಸ್‌ ಹೈಕೋರ್ಟ್‌ ಮುಂದೆ ಆತನ ಪುತ್ಥಳಿ ಸ್ಥಾಪಿಸಲಾಗಿದೆ. ಅನೇಕ ಚಾರಿತ್ರಿಕ ದಾಖಲೆಗಳು ಆತನ ಜೀವನಗಾಥೆಯನ್ನು ಚಿತ್ರಿಸಿವೆ.

ನವೆಂಬರ್‌ 2ರ ತೀರ್ಪು…

ಅಕ್ಟೋಬರ್ 29 ರಂದು ನಡುವಯಸ್ಸಿನ ಜಿ ಸೆಂಧಟ್ಟಿಕಲೈಪಾಂಡಿಯನ್ ಮದ್ರಾಸ್‌ ಹೈಕೋರ್ಟ್‌ ಎದುರು ಅರ್ಜಿ ಹಿಡಿದು ನಿಂತಿದ್ದರು. ಅದೇನೆಂದು ನ್ಯಾಯಮೂರ್ತಿ ಜಿ ಆರ್‌ ಸ್ವಾಮಿನಾಥನ್‌ ಅವರು ವಿಚಾರಣೆ ಮಾಡಿದಾಗ ಅವರ ಮಗ ಸರವಣನ್‌ ಅದೇ ತಿಂಗಳು ವಿದ್ಯುತ್‌ ಸ್ಪರ್ಶದಿಂದ ಸಾವನ್ನಪ್ಪಿದ್ದರು. ಸೆಂಧಟ್ಟಿಕಲೈಪಾಂಡಿಯನ್ ಅವರ ಕುಟುಂಬದ ಆಧಾರವೇ ಆಗಿದ್ದ ಸರವಣನ್ ಒಂದು ದಿನ ನಾಗರಿಕ ಸೇವಾ ಪರೀಕ್ಷೆ ಬರೆದು ಜಿಲ್ಲಾಧಿಕಾರಿಯಾಗುವ ಕನಸು ಕಂಡಿದ್ದರು. ಆದರೆ ದುರಾದೃಷ್ಟ ಸಾವಿನ ರೂಪದಲ್ಲಿ ಎರಗಿತ್ತು. ಎಂದಿನಂತೆ ಪರಿಹಾರ ಒದಗಿಸಲು ವಿದ್ಯುತ್‌ ಇಲಾಖೆ ಅಧಿಕಾರಿಗಳು, ಪೊಲೀಸರು ಹಿಂದೆ- ಮುಂದೆ ನೋಡುತ್ತಿದ್ದರು. ಇದನ್ನೆಲ್ಲಾ ಗಮನಿಸಿದ ನ್ಯಾಯಾಲಯ ಅನಗತ್ಯ ಔಪಚಾರಿಕತೆ ಬದಿಗಿಟ್ಟು ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಸೂಚಿಸಿದೆ. ಆಗಲೇ ಶತಮಾನಗಳ ಹಿಂದಿನ ʼನ್ಯಾಯದೇವತೆʼ ಮನುನೀದಿ ಚೋಳನ ಕತೆ ತೇಲಿ ಬಂದದ್ದು.

ನ್ಯಾಯಕ್ಕಾಗಿ ಮಗನಿಗೇ ಮರಣದಂಡನೆ !

ʼದೊರೆ ಅರಮನೆಯ ಮುಂದೆ ದೊಡ್ಡ ಘಂಟೆಯೊಂದನ್ನು ತೂಗುಹಾಕಿದ್ದ. ನ್ಯಾಯ ಬೇಡಿ ಯಾರೇ ಬಂದರೂ ಆ ಘಂಟೆ ಬಾರಿಸಬಹುದಿತ್ತು. ಅದನ್ನು ಕೇಳಿ ಆತ ನ್ಯಾಯದಾನಕ್ಕೆ ಮುಂದಾಗುತ್ತಿದ್ದ. ಒಂದು ದಿನ ತನ್ನ ಏಕೈಕ ಪುತ್ರ ವೀಧಿ ವಿದಂಗನ್‌ ಸಂಚರಿಸುತ್ತಿದ್ದಾಗ ಆತನ ರಥ ಪುಟ್ಟ ಕರುವೊಂದರ ಮೇಲೆ ಹರಿಯಿತು. ಅರಮನೆಗೆ ಧಾವಿಸಿದ ತಾಯಿಹಸು ನ್ಯಾಯದ ಘಂಟೆ ಬಾರಿಸಿತು. ಘಟನೆ ಹೇಗೆ ನಡೆಯಿತು ಎಂದು ರಾಜ ಅರಿತ. ಬಳಿಕ ʼನನ್ನ ಮಗನೂ ಕರುವಿನ ರೀತಿಯಲ್ಲಿಯೇ ಸಾವನ್ನಪ್ಪಿ ನಾನು ಕೂಡ ಹಸುವಿನಂತೆ ಕಷ್ಟ ಅನುಭವಿಸಬೇಕುʼ ಎಂದು ಘೋಷಿಸಿದ. ಈ ದಂತಕತೆಯನ್ನು ವಿತ್ತ ವಸಲ್ ಬಳಿಯ ದೇವಾಲಯವೊಂದರಲ್ಲಿ ಕೆತ್ತಿರುವುದನ್ನು ಆದೇಶದಲ್ಲಿ ಪ್ರಸ್ತಾಪಿಸಿರುವ ನ್ಯಾ. ಸ್ವಾಮಿನಾಥನ್‌ ʼಇದು ನನ್ನ ಚಿಕ್ಕಂದಿನ ನೆನಪುಗಳಲ್ಲಿ ಒಂದುʼ ಎಂದು ಹೇಳಿದ್ದಾರೆ. ಅಂದಹಾಗೆ ತೀರ್ಪು ನೀಡಿದ ನ್ಯಾಯಮೂರ್ತಿಗಳು ಮನುನೀದಿ ಚೋಳ ಆಳ್ವಿಕೆ ನಡೆಸಿದ ತಿರುವರೂರಿನವರು. ಅಲ್ಲದೆ ʼಮನು ಎಂಬ ಹೆಸರು ರಾಜಕೀಯವಾಗಿ ಸೂಕ್ತವಲ್ಲ ಎನ್ನುವ ಕಾರಣಕ್ಕೆ ತಾವು ಆ ಹೆಸರಿನಿಂದ ಆತನನ್ನು ಕರೆಯದೇ ಇರುವುದಿಲ್ಲ, ಅಥವಾ ಬೇರೆ ಹೆಸರಿನಿಂದ ಕರೆಯುವುದಿಲ್ಲʼ ಎಂದು ಕೂಡ ಅವರು ಹೇಳಿದ್ದಾರೆ.

ವಿದ್ಯುತ್‌‌ ಆಘಾತದಿಂದ ಸರವಣನ್‌ ಮೃತಪಟ್ಟ ಪ್ರಕರಣದಲ್ಲಿ, ತಮಿಳುನಾಡು ವಿದ್ಯುತ್‌ ಉತ್ಪಾದನಾ ಮತ್ತು ಪ್ರಸರಣ ಮಂಡಳಿಯು ಸಂತ್ರಸ್ತ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರವನ್ನು ಘೋಷಿಸಿತ್ತು. ಪ್ರಕರಣದಲ್ಲಿ ಮಂಡಳಿಯ ಕಡೆಯಿಂದ ಯಾವುದೇ ಕರ್ತವ್ಯಲೋಪ ಆಗದೆ ಇರುವುದನ್ನು ಸ್ಥಳ ಪರಿಶೀಲನೆಯ ವೇಳೆ ಖುದ್ದು ನ್ಯಾಯಮೂರ್ತಿಯವರೇ ಮನಗಂಡರು. ಇದೊಂದು ನೈಸರ್ಗಿಕ ವಿಧಿವಿಪರೀತವೆಂದು ಪ್ರಕರಣವನ್ನು ಕರೆದ ನ್ಯಾಯಾಲಯವು ಸಂತ್ರಸ್ತ ಕುಟುಂಬಕ್ಕೆ ಹೆಚ್ಚುವರಿಯಾಗಿ ರೂ.8.86 ಲಕ್ಷ ಪರಿಹಾರವನ್ನು 12 ವಾರಗಳೊಳಗೆ ನೀಡುವಂತೆ ತಮಿಳುನಾಡು ವಿದ್ಯುತ್‌ ಮಂಡಳಿಗೆ ಸೂಚಿಸಿದೆ. ಅಲ್ಲದೆ, ಅನುಕಂಪದ ಆಧಾರದಲ್ಲಿ ಸಂತ್ರಸ್ತ ಕುಟುಂಬಕ್ಕೆ ಆಸರೆಯಾಗುವ ಸಲುವಾಗಿ ಅಗಲಿದ ವ್ಯಕ್ತಿಯ ಸಹೋದರನಿಗೆ ಉದ್ಯೋಗವನ್ನು ನೀಡುವಂತೆಯೂ ಮಂಡಳಿಗೆ ಆದೇಶಿಸಿದೆ.

Kannada Bar & Bench
kannada.barandbench.com