ಡಿಜಿಟಲ್‌ ಸಹಿ ಇರುವ ನೋಟಿಸ್‌ ಏಕೆ ನೀಡಿಲ್ಲ? ಸಹಿ ಇಲ್ಲದ ನೋಟಿಸ್‌ ನೀಡಿದ ಪೊಲೀಸರಿಗೆ ಹೈಕೋರ್ಟ್‌ ತರಾಟೆ

“ಆರೋಪಿತ ಅಪರಾಧ ಪ್ರಕರಣ ಮೀರಿ ಕಿರುಕುಳ ಅಥವಾ ತನಿಖೆ ನಡೆಸುವುದನ್ನು ಪೀಠದ ಗಮನಕ್ಕೆ ತಂದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು” ಎಂದು ಹೈಕೋರ್ಟ್‌ ಹೇಳಿದೆ.
Karnataka High Court, Police
Karnataka High Court, Police
Published on

ಪೊಲೀಸ್‌ ನೋಟಿಸ್‌ನಲ್ಲಿ ಯಾವ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಹಾಜರಾಗಲು ಸೂಚಿಸಲಾಗುತ್ತಿದೆ ಎಂಬುದನ್ನು ಉಲ್ಲೇಖಿಸದಿರುವುದಕ್ಕೆ ಮತ್ತು ಅದರಲ್ಲಿ ಸಂಬಂಧಿತ ಅಧಿಕಾರಿಯ ಹೆಸರು ಮತ್ತು ಪದನಾಮ ಕೈಬಿಟ್ಟಿರುವುದಕ್ಕೆ ಪೊಲೀಸರ ವಿರುದ್ಧ ಕರ್ನಾಟಕ ಹೈಕೋರ್ಟ್‌ ಈಚೆಗೆ ಕಿಡಿಕಾರಿದೆ.

ಬೆಂಗಳೂರಿನ ವರುಣ್‌ ಜುವೆಲ್ಲರ್ಸ್‌ನ ಸ್ಥಾಪಕರಾದ ನರೇಶ್‌ ಕುಮಾರ್‌ ಸಿಯಾಲ್‌ ಮತ್ತು ಪ್ರಕಾಶ್‌ ಚಾಂದ್‌ ಸಿಯಾಲ್‌ ಅವರು ಬೆಂಗಳೂರಿನ ಅತ್ತಿಬೆಲೆ ಠಾಣೆಯ ಪೊಲೀಸರು ಸಹಿ ಮತ್ತು ನಿರ್ದಿಷ್ಟ ಸೆಕ್ಷನ್‌ ಉಲ್ಲೇಖಿಸದೇ ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದ ನೋಟಿಸ್‌ ಪ್ರಶ್ನಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice K V Aravind
Justice K V Aravind

“ಆಕ್ಷೇಪಾರ್ಹವಾದ ನೋಟಿಸ್‌ಗಳನ್ನು ಯಾವ ಸೆಕ್ಷನ್‌ ಅಡಿ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ಮಾಡಲಾಗಿದೆ ಮತ್ತು ಅದನ್ನು ನೀಡಿರುವ ಅಧಿಕಾರಿಯ ಪದನಾಮ ಮತ್ತು ಹೆಸರನ್ನು ಏಕೆ ಉಲ್ಲೇಖಿಸಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಎರಡು ವಾರದಲ್ಲಿ ಅಫಿಡವಿಟ್‌ ಸಲ್ಲಿಸಬೇಕು” ಎಂದು ನ್ಯಾಯಾಲಯ ಪೊಲೀಸರಿಗೆ ನಿರ್ದೇಶಿಸಿದೆ.

“ನೋಟಿಸ್‌ನಲ್ಲಿ ಯಾವ ಅಪರಾಧಕ್ಕೆ ನೋಟಿಸ್‌ ನೀಡಲಾಗುತ್ತಿದೆ ಎಂಬುದಕ್ಕೆ ಏಕೆ ಉಲ್ಲೇಖಿಸಿಲ್ಲ? ಅಧಿಕಾರಿಯ ಹೆಸರು ಮತ್ತು ಪದನಾಮವೂ ಇಲ್ಲ. ಯಾವ ನಿಬಂಧನೆಯಡಿ ಈ ನೋಟಿಸ್‌ಗಳನ್ನು ಜಾರಿ ಮಾಡಲಾಗಿದೆ. ಕಾನೂನಿನ ಅಡಿ ಮಾತ್ರ ಅಧಿಕಾರ ಚಲಾಯಿಸಬಹುದು. ಕಾನೂನಿನಲ್ಲಿ ಅವಕಾಶವಿಲ್ಲ ಎಂದಾದರೆ ಜನರನ್ನು ಪೊಲೀಸರು ಠಾಣೆಗೆ ಕರೆಯಲಾಗದು. ಯಾವ ಅಪರಾಧ ಕೃತ್ಯದ ಆರೋಪದ ಮೇಲೆ ತಮ್ಮನ್ನು ತನಿಖೆಗೆ ಕರೆಯಲಾಗುತ್ತದೆ ಎಂಬುದನ್ನು ಪೊಲೀಸರು ವಿವರಿಸಬೇಕು. ಇ-ಆಫೀಸ್‌ ಇರಬೇಕಲ್ಲವೇ. ಡಿಜಿಟಲ್‌ ಸಹಿ ಹೊಂದಿರುವ ನೋಟಿಸ್‌ ಅನ್ನು ಏಕೆ ನೀಡಲಾಗಿಲ್ಲ” ಎಂದು ಪೀಠ ಪ್ರಶ್ನಿಸಿತು.

ಇದಕ್ಕೆ ಸರ್ಕಾರದ ಪರ ವಕೀಲೆಯು ಮಾಹಿತಿ ಪಡೆದು ತಿಳಿಸಲಾಗುವುದು ಎಂದರು.

“ಆಕ್ಷೇಪಾರ್ಹ ನೋಟಿಸ್‌ಗಳನ್ನು ಯಾವ ಸೆಕ್ಷನ್‌ ಅಡಿಯಲ್ಲಿ ನೀಡಲಾಗಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ ಮತ್ತು ಅದನ್ನು ನೀಡುವ ಪ್ರಾಧಿಕಾರದ ಹೆಸರು ಮತ್ತು ಪದನಾಮವು ಸ್ಪಷ್ಟವಾಗಿ ಕಾಣೆಯಾಗಿದೆ, ಇದು ನೋಟಿಸ್‌ಗಳನ್ನು ನೀಡುವ ಸತ್ಯಾಸತ್ಯತೆ ಮತ್ತು ನೈಜತೆಯನ್ನು ಅನುಮಾನಿಸುತ್ತದೆ” ಎಂದು ಪೀಠ ಹೇಳಿದೆ.

“ಆಪಾದಿತ ಅಪರಾಧವನ್ನು ಹೊರತುಪಡಿಸಿ ಯಾವುದೇ ಕಿರುಕುಳ ಅಥವಾ ಯಾವುದೇ ತನಿಖೆಯನ್ನು ಈ ನ್ಯಾಯಾಲಯಕ್ಕೆ ವರದಿ ಮಾಡಿದರೆ, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚಿಂತಿಸಲಾಗುವುದು” ಎಂದು ನ್ಯಾಯಾಲಯ ಎಚ್ಚರಿಸಿದೆ.

ಮಾರ್ಚ್‌ನಲ್ಲಿ ಬೆಂಗಳೂರಿನ ಆನೇಕಲ್‌ ತಾಲ್ಲೂಕಿನ ಅತ್ತಿಬೆಲೆಯಲ್ಲಿ 26 ವರ್ಷದ ಮೋಹನ್‌ ಎಂಬ ವ್ಯಕ್ತಿಯು ಚೀಟಿ ವ್ಯವಹಾರದಲ್ಲಿ ನಷ್ಟ ಅನುಭವಿಸಿ, ಸಾಲ ನೀಡಿರುವವರ ಕಿರುಕುಳ ತಾಳಲಾರದೇ ತಾಯಿ, ರೋಗ ಬಾದಿತಳಾದ ಅಕ್ಕನಿಗೆ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದನು. ಅಕ್ಕನ ಮಗನನ್ನು ಕತ್ತು ಕೊಯ್ದು ಸಾಯಿಸಿ, ತಾನೂ ಕೊಲೆಗೆ ಯತ್ನಿಸಿದ್ದನು. ಅದೃಷ್ಟವಶಾತ್‌ ಅಕ್ಕನ ಮಗ ಮತ್ತು ಮೋಹನ್‌ ಬದುಕುಳಿದ್ದರು.

ಕೊಲೆಗೂ ಮುನ್ನ ಮೋಹನ್‌ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಸಾಲ ಪಡೆದಿರುವುದನ್ನು ತೀರಿಸಲಾಗದೇ ಅವರ ಕಿರುಕುಳದಿಂದ ಸಾವಿಗೆ ಮುಂದಾಗಿರುವುದಾಗಿ ಹೇಳಿಕೊಂಡಿದ್ದನು. ಈ ಪ್ರಕರಣದ ಸಂಬಂಧ ಅರ್ಜಿದಾರರನ್ನು ಪೊಲೀಸರು ತನಿಖೆಯಲ್ಲಿ ಭಾಗವಹಿಸುವಂತೆ ಸೂಚಿಸಿದ್ದರು.

ಅರ್ಜಿದಾರರ ಪರ ವಕೀಲರು “ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಆರೋಪಿಗಳ ವಿರುದ್ಧದ ಪ್ರಕರಣಕ್ಕೆ ಸಮನ್ವಯ ಪೀಠ ತಡೆ ನೀಡಿದೆ. ಆದರೆ, ಅರ್ಜಿದಾರರ ವಿರುದ್ಧ ಯಾವುದೇ ಪ್ರಕರಣ ದಾಖಲಾಗದಿದ್ದರೂ ವಿನಾ ಕಾರಣ ಅವರಿಗೆ ನೋಟಿಸ್‌ ನೀಡಲಾಗಿದೆ. ನೋಟಿಸ್‌ನಲ್ಲಿ ಯಾವ ಸೆಕ್ಷನ್‌ ಅಡಿ ಅಪರಾಧಕ್ಕೆ ಅರ್ಜಿದಾರರನ್ನು ಕರೆಯಲಾಗಿದೆ ಎಂದು ಉಲ್ಲೇಖಿಸಲಾಗಿಲ್ಲ. ಅಲ್ಲದೇ, ತನಿಖಾಧಿಕಾರಿಯ ಸಹಿ ಮತ್ತು ಪದನಾಮವನ್ನೂ ಉಲ್ಲೇಖಿಸಿಲ್ಲ. ಪೊಲೀಸರು ಪ್ರಕರಣದ ತನಿಖೆ ಹೊರತುಪಡಿಸಿ, ತನ್ನ ಉದ್ಯಮದ ಬಗ್ಗೆ ಹೆಚ್ಚು ಆಸಕ್ತರಾಗಿದ್ದಾರೆ” ಎಂದು ಆರೋಪಿಸಿದ್ದರು.

Kannada Bar & Bench
kannada.barandbench.com