

ಬಿಹಾರ ಸೇರಿದಂತೆ ಹನ್ನೆರಡು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಲಿರುವಂತೆ ಅಸ್ಸಾಂನಲ್ಲಿ ಮತದಾರರ ಪಟ್ಟಿಯ ವಿಶೇಷ ಆಮೂಲಾಗ್ರ ಪರಿಷ್ಕರಣೆ ನಡೆಸದೆ ಕೇವಲ ವಿಶೇಷ ಪರಿಷ್ಕರಣೆ ನಡೆಸುತ್ತಿರುವ ಭಾರತೀಯ ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ನವೆಂಬರ್ 17 ರಂದು ಚುನಾವಣಾ ಆಯೋಗ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಗುವಾಹಟಿ ಹೈಕೋರ್ಟ್ ವಕೀಲರ ಸಂಘದ ಮಾಜಿ ಅಧ್ಯಕ್ಷ ಮೃಣಾಲ್ ಕುಮಾರ್ ಚೌಧರಿ ಈ ಅರ್ಜಿ ಸಲ್ಲಿಸಿದ್ದಾರೆ.
ಛತ್ತೀಸ್‌ಗಢ, ಗೋವಾ, ಗುಜರಾತ್, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ ಹಾಗೂ ಪುದುಚೇರಿಗಳಲ್ಲಿ ವಿಶೇಷ ಆಮೂಲಾಗ್ರ ಪರಿಷ್ಕರಣೆ ನಡೆಸುತ್ತಿರುವಾಗ, ಅಸ್ಸಾಂಗೆ ಕಡಿಮೆ ಸ್ವರೂಪದ ಪರಿಷ್ಕರಣೆಗೆ ನಿರ್ದೇಶಿಸುವ ಮೂಲಕ ಇಸಿಐ ಅನಿಯಂತ್ರಿತ ಮತ್ತು ತಾರತಮ್ಯ ಧೋರಣೆ ಅನುಸರಿಸಿದೆ ಎಂದು ಅರ್ಜಿ ಹೇಳಿದೆ.
ಅರ್ಜಿಯ ಪ್ರಮುಖಾಂಶಗಳು
ಈ ಕ್ರಮ, ದೇಶದೆಲ್ಲೆಡೆ ಮತದಾರರ ಪಟ್ಟಿ ವಿಶೇಷ ಆಮೂಲಾಗ್ರ ಪರಿಷ್ಕರಣೆ ನಡೆಸಲಾಗವುದು ಎಂದು ಸುಪ್ರೀಂ ಕೋರ್ಟ್‌ಗೆ ಆಯೋಗ ಖುದ್ದು ಸಲ್ಲಿಸಿದ್ದ ಅಫಿಡವಿಟ್‌ಗೆ ವಿರುದ್ಧವಾಗಿದೆ.
ಅಸ್ಸಾಂನಲ್ಲಿ ಲಕ್ಷಾಂತರ ಅಕ್ರಮ ವಲಸಿಗರು ಇದ್ದು ವಿಶೇಷ ಆಮೂಲಾಗ್ರ ಪರಿಷ್ಕರಣೆ ನಡೆಸದಿದ್ದರೆ ಇವರು ಮತದಾನದ ಹಕ್ಕನ್ನು ಪಡೆದು ಸಾಮಾಜಿಕ ರಾಜಕೀಯ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಜನಸಂಖ್ಯಾ ಅಸಮತೋಲನ ಉಂಟಾಗುತ್ತದೆ.
ಕೇವಲ ವಿಶೇಷ ಪರಿಷ್ಕರಣೆ ನಡೆಸಿದರೆ ಮತದಾರರ ಪಟ್ಟಿಯನ್ನು ಸಡಿಲವಾಗಿ ಪರಿಶೀಲಿಸುವ ಸಾಧ್ಯತೆ ಇದ್ದು ವಯಸ್ಸು, ವಾಸಸ್ಥಳ, ಪೌರತ್ವ ಕುರಿತು ಕಟ್ಟುನಿಟ್ಟಿನ ದಾಖಲೆಗಳನ್ನು ಅಪೇಕ್ಷಿಸುವುದಿಲ್ಲ.
ಆದರೆ ವಿಶೇಷ ಆಮೂಲಾಗ್ರ ಪರಿಷ್ಕರಣೆಯಲ್ಲಿ ದಾಖಲೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವುದು ಕಡ್ಡಾಯವಾಗಿದ್ದು ಅದನ್ನು ಅಸ್ಸಾಂನಲ್ಲಿ ನಡೆಸದೆ ಇರುವುದು ಅಪಾಯಕಾರಿಯಾಗಿದೆ.
ಮತದಾರರ ಪಟ್ಟಿ ಪರಿಷ್ಕರಿಸುವಾಗ ಹೆಸರು ಸೇರ್ಪಡೆಗೆ ಆಧಾರ್ ಕಾರ್ಡನ್ನು ಮಾನ್ಯ ದಾಖಲೆಯಾಗಿ ಪರಿಗಣಿಸದಂತೆ ನಿರ್ದೇಶನ ನೀಡಬೇಕು.
ಅಸ್ಸಾಂನಲ್ಲಿಯೂ ಉಳಿದ ರಾಜ್ಯಗಳಂತೆಯೇ ಆಮೂಲಾಗ್ರ ಪರಿಷ್ಕರಣೆ ನಡೆಯಬೇಕು.