ಮೋದಿ ರೋಡ್‌ಶೋನಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರೆ ಶಾಲೆ ವಿರುದ್ಧ ದೂರು ದಾಖಲಿಸಿದ್ದೇಕೆ? ಮದ್ರಾಸ್ ಹೈಕೋರ್ಟ್ ಪ್ರಶ್ನೆ

ರೋಡ್‌ ಶೋ ವೇಳೆ ಶಾಲಾ ಮಕ್ಕಳು ಸಮವಸ್ತ್ರದಲ್ಲಿ ಹಾಜರಿದ್ದ ಕಾರಣ ಶಾಲಾ ಆಡಳಿತದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಅಗತ್ಯವಿತ್ತೇ ಎಂಬುದನ್ನು ವಿವರಿಸುವ ಲಿಖಿತ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.
Madras High Court
Madras High Court

ಕೊಯಮತ್ತೂರಿನಲ್ಲಿ ಮಾರ್ಚ್‌ 18ರಂದು ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರೋಡ್‌ ಶೋನಲ್ಲಿ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರದಲ್ಲಿ ಪಾಲ್ಗೊಂಡಿದ್ದರು ಎಂಬ ಕಾರಣಕ್ಕೆ ಸ್ಥಳೀಯ ಶಾಲೆಯೊಂದರ ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದ  ಕೊಯಮತ್ತೂರು ಪೊಲೀಸರ ಕ್ರಮವನ್ನು ಮದ್ರಾಸ್‌ ಹೈಕೋರ್ಟ್‌ ಗುರುವಾರ ಪ್ರಶ್ನಿಸಿದೆ.

ರೋಡ್‌ಶೋ ಸಮಯದಲ್ಲಿ ಶಾಲಾ ಮಕ್ಕಳು ಸಮವಸ್ತ್ರದಲ್ಲಿ ಹಾಜರಿದ್ದ ಕಾರಣ ಶಾಲೆಯ ಆಡಳಿತದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಅಗತ್ಯವಿತ್ತೇ ಎಂಬುದನ್ನು ವಿವರಿಸಿ ಏಪ್ರಿಲ್ 8 ರೊಳಗೆ ಲಿಖಿತ ಉತ್ತರ ಸಲ್ಲಿಸುವಂತೆ ಕೊಯಮತ್ತೂರು ಪೊಲೀಸರಿಗೆ ನ್ಯಾಯಮೂರ್ತಿ ಜಿ ಜಯಚಂದ್ರನ್ ಅವರು ಸೂಚಿಸಿದರು.

ಶಾಲೆಯ ಆಡಳಿತ ಮಂಡಳಿ ಬಲವಂತವಾಗಿ ಮಕ್ಕಳನ್ನು ರೋಡ್‌ಶೋಗೆ ಕಳಿಸಿದೆ ಎಂದು , ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರಾ ದೇವಿ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದು  ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆಯ ಸೆಕ್ಷನ್ 75 ಸೇರಿದಂತೆ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ತನ್ನ ವಿರುದ್ಧ ದಾಖಲಿಸಲಾಗಿರುವ ಪ್ರಕರಣ ರದ್ದುಗೊಳಿಸುವಂತೆ ಕೋರಿ ಕೊಯಮತ್ತೂರಿನ ಶಾಲೆಯೊಂದರ ಪ್ರಾಂಶುಪಾಲರಾದ ಎಸ್ ಪುಕುಲ್ ವಡಿವು ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು.

ರೋಡ್‌ ಶೋಗೆ ಹಾಜರಾಗಲು ಬಲವಂತ ಮಾಡಲಾಗಿದೆ ಎಂಬ ಸುದ್ದಿ ವರದಿ ಆಧರಿಸಿ  ಮಕ್ಕಳ ರಕ್ಷಣಾ ಅಧಿಕಾರಿ ದೂರು ನೀಡಿದ ಮಾತ್ರಕ್ಕೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬಹುದೇ ಎಂದು ಗುರುವಾರ ನ್ಯಾಯಾಲಯ ಪ್ರಶ್ನಿಸಿದೆ.

ರಾಜಕೀಯ ಕಾರ್ಯಕ್ರಮಗಳಲ್ಲಿ ಮಕ್ಕಳ ಉಪಸ್ಥಿತಿಗೆ ಸಂಬಂಧಿಸಿದ ಇದೇ ರೀತಿಯ ಪ್ರಕರಣಗಳಿಗೂ ಈ ಪ್ರಕರಣಕ್ಕೂ ಅಜಗಜಾಂತರ ವ್ಯತ್ಯಾಸ ಇರುವಂತೆ ತೋರುತ್ತಿದೆ ಎಂದ ನ್ಯಾಯಾಲಯ ಏಪ್ರಿಲ್ 8ರಂದು ಹೆಚ್ಚಿನ ವಾದ ಮಂಡನೆಗೆ ಪೂರಕವಾದ ಅಂಶಗಳೊಂದಿಗೆ ಸಿದ್ಧತೆ ಮಾಡಿಕೊಂಡು ಬರುವಂತೆ ಸರ್ಕಾರಕ್ಕೆ ಸೂಚಿಸಿತು.

ಶಾಲಾ ಆಡಳಿತ ಮಂಡಳಿಗೆ ಈ ಹಿಂದೆ ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರು ನೀಡಿದ್ದ ಮಧ್ಯಂತರ ರಕ್ಷಣೆಯನ್ನು ನ್ಯಾ. ಜಯಚಂದ್ರನ್‌ ಏ. 8ರವರೆಗೆ ವಿಸ್ತರಿಸಿದರು.

Related Stories

No stories found.
Kannada Bar & Bench
kannada.barandbench.com