ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ವಿಸ್ತರಿಸಲು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ನಿರಾಕರಿಸಿದ್ದೇಕೆ?

ಕೇಜ್ರಿವಾಲ್ ಸಲ್ಲಿಸಿರುವ ಮುಖ್ಯ ಅರ್ಜಿ ಕುರಿತ ತೀರ್ಪು ಬಾಕಿ ಇರುವಾಗ ಅವರು ಮಧ್ಯಂತರ ಪರಿಹಾರ ವಿಸ್ತರಿಸುವಂತೆ ಕೋರುವುದು ಸಾಧ್ಯವಿಲ್ಲ ಎಂದು ಪ್ರಕರಣ ಪಟ್ಟಿ ವಿಭಾಗದ ರಿಜಿಸ್ಟ್ರಾರ್ ಡಿ ಪವನೇಶ್ ತಿಳಿಸಿದ್ದಾರೆ.
Arvind Kejriwal, Supreme Court and ED
Arvind Kejriwal, Supreme Court and EDFacebook
Published on

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ತನಗೆ ನೀಡಿರುವ ಮಧ್ಯಂತರ ಜಾಮೀನನ್ನು ಒಂದು ವಾರ ಕಾಲ ವಿಸ್ತರಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಇತ್ತೀಚೆಗೆ ತಿರಸ್ಕರಿಸಿದ್ದಾರೆ [ಅರವಿಂದ್‌ ಕೇಜ್ರಿವಾಲ್‌ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].

ಕೇಜ್ರಿವಾಲ್‌ ಸಲ್ಲಿಸಿರುವ ಮುಖ್ಯ ಅರ್ಜಿ ಕುರಿತ ತೀರ್ಪು ಬಾಕಿ ಇರುವಾಗ ಅವರು ಮಧ್ಯಂತರ ಪರಿಹಾರ ವಿಸ್ತರಿಸುವಂತೆ ಕೋರುವುದು ಸಾಧ್ಯವಿಲ್ಲ ಎಂದು ಪ್ರಕರಣ ಪಟ್ಟಿ ವಿಭಾಗದ ರಿಜಿಸ್ಟ್ರಾರ್‌ ಡಿ ಪವನೇಶ್‌ ತಿಳಿಸಿದ್ದಾರೆ.

ಯಾವುದೇ ಸಮಂಜಸವಾದ ಕಾರಣವನ್ನು ಬಹಿರಂಗಪಡಿಸದ ಅಥವಾ ಕ್ಷುಲ್ಲಕ ಅಥವಾ ಹಗರಣದ ವಿಷಯವನ್ನು ಒಳಗೊಂಡಿರುವ ಅರ್ಜಿಯನ್ನು ಸ್ವೀಕರಿಸಲು ಇಲ್ಲವೇ ನಿರಾಕರಿಸಲು 2013ರ ಸರ್ವೋಚ್ಚ ನ್ಯಾಯಾಲಯದ ನಿಯಮಮಾವಳಿ XV ನಿಯಮ 5ರ ಆದೇಶ ರಿಜಿಸ್ಟ್ರಾರ್‌ ಅವರಿಗೆ ಅಧಿಕಾರ ನೀಡುತ್ತದೆ. ಈ ಪ್ರಕರಣದಲ್ಲಿ ಅರ್ಜಿಯನ್ನು ಪರಿಶೀಲಿಸಿದಾಗ ಅರ್ಜಿದಾರರು ಅರ್ಜಿಯನ್ನು ಪುರಸ್ಕರಿಸಲು ಬೇಕಾದಂತಹ ಸಾಕ್ಷ್ಯಾಧಾರಗಳನ್ನು ನೀಡಿಲ್ಲ ಎಂದು ವಿವರಿಸಲಾಗಿದೆ.

ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ತಮಗೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯಕ್ಕೆಂದು ನೀಡಿರುವ ಮಧ್ಯಂತರ ಜಾಮೀನನ್ನು ವೈದ್ಯಕೀಯ ಕಾರಣಗಳಿಗಾಗಿ ಒಂದು ವಾರ ಕಾಲ ವಿಸ್ತರಿಸಬೇಕು ಎಂದು ಈ ಹಿಂದೆ ಕೇಜ್ರಿವಾಲ್‌ ಕೋರಿದ್ದರು. ತಾನು ಮಧುಮೇಹ ರೋಗಿಯಾಗಿದ್ದು, ಆರೋಗ್ಯಕ್ಕೆ ದೀರ್ಘಕಾಲೀನ ಹಾನಿಯಾಗದಂತೆ ತಡೆಯಲು ಈ ಸಮಯ ಅಗತ್ಯವಿದೆ ಎಂದು ದೆಹಲಿ ಸಿಎಂ ಹೇಳಿದ್ದರು.

ಆದರೆ ಕೋರಿದ ಪರಿಹಾರ ತಪ್ಪು ಗ್ರಹಿಕೆಯಿಂದ ಕೂಡಿದ್ದು ನೇರವಾಗಿ ಸುಪ್ರೀಂ ಕೋರ್ಟ್‌ ಆದೇಶದೊಂದಿಗೆ ಸಂಘರ್ಷದಲ್ಲಿದೆ ಎಂದು ರಿಜಿಸ್ಟ್ರಾರ್‌ ತಿಳಿಸಿದ್ದಾರೆ.

"ಮುಖ್ಯ ಪರಿಹಾರಕ್ಕೆ ಪೂರಕವಾಗಿ ಮಾತ್ರ ಮಧ್ಯಂತರ ಪರಿಹಾರವನ್ನು ಕೋರಬಹುದು ಎಂಬುದು ಇತ್ಯರ್ಥವಾಗಿರುವ ವಿಷಯವಾಗಿದೆ. ಅರ್ಜಿದಾರರ ಬಂಧನದ ಸಿಂಧುತ್ವಕ್ಕೆ ಸಂಬಂಧಿಸಿದ ವಿಷಯವು ಪ್ರಶ್ನಿಸಲ್ಪಟ್ಟಿದೆಯೇ ಹೊರತು ಅವರು ಜಾಮೀನಿನ ಮೇಲೆ ಬಿಡುಗಡೆಯಾಗುವುದರ ಕುರಿತಾಗಿ ಅಲ್ಲ... ಹಾಗಾಗಿ ಕೋರಲಾದ ಪರಿಹಾರವು ಮುಖ್ಯ ಮನವಿಯ ವ್ಯಾಪ್ತಿಯನ್ನು ಮೀರಿದೆ. ಈ ಎಲ್ಲಾ ಕಾರಣಗಳಿಗಾಗಿ, ಪ್ರಸ್ತುತ ಅರ್ಜಿಯನ್ನು ಸ್ವೀಕರಿಸಲು ನಾನು ನಿರಾಕರಿಸುತ್ತೇನೆ, ಏಕೆಂದರೆ ಅದು ಯಾವುದೇ ಸಮಂಜಸವಾದ ಕಾರಣವನ್ನು ನೀಡಿಲ್ಲ" ಎಂದರು.

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ನೀಡಿದ ದೂರಿನ ಮೇರೆಗೆ 2022ರಲ್ಲಿ ಸಿಬಿಐ ಪ್ರಕರಣ ದಾಖಲಿಸಿತ್ತು. ಅದರ ಬೆನ್ನಿಗೆ ಕೇಜ್ರಿವಾಲ್ ವಿರುದ್ಧ ಇ ಡಿ ತನಿಖೆ ನಡೆಸಿತ್ತು.

ಕೆಲವು ಮದ್ಯ ಮಾರಾಟಗಾರರಿಗೆ ಅನುಕೂಲವಾಗುವಂತೆ 2021-22ರ ದೆಹಲಿ ಅಬಕಾರಿ ನೀತಿಯನ್ನು ಸಡಿಲಗೊಳಿಸಲು ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ವಿವಿಧ ಎಎಪಿ ನಾಯಕರು ಕ್ರಿಮಿನಲ್ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಮಾರ್ಚ್ 21ರಂದು ಕೇಜ್ರಿವಾಲ್ ಅವರನ್ನು ಇ ಡಿ ಬಂಧಿಸಿತ್ತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ಅನುವಾಗುವಂತೆ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿ ಮೇ 10ರಂದು ಸುಪ್ರೀಂ ಕೋರ್ಟ್‌ ಆದೇಶ ಪ್ರಕಟಿಸಿತ್ತು.

ಮಧ್ಯಂತರ ಜಾಮೀನನ್ನು ಒಂದು ವಾರ ಕಾಲ ವಿಸ್ತರಿಸಬೇಕು ಎಂದು ಕೋರಿ ಕೇಜ್ರಿವಾಲ್‌ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್‌ ರಜಾಕಾಲೀನ ಪೀಠ ಕಳೆದ ಮಂಗಳವಾರ ನಿರಾಕರಿಸಿತ್ತು.

ವಿಶೇಷವೆಂದರೆ, ಕೇಜ್ರಿವಾಲ್ ಇಂದು ಈ ಪ್ರಕರಣದಲ್ಲಿ ನಿಯಮಿತ ಜಾಮೀನಿಗಾಗಿ ರೌಸ್‌ ಅವೆನ್ಯೂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

Kannada Bar & Bench
kannada.barandbench.com