ಗಾಂಜಾ ಮತ್ತು ಚರಸ್ ದೊರೆತಿರುವುದಕ್ಕೆ ಸಂಬಂಧಿಸಿದಂತೆ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ಕಾಯಿದೆ (ಎನ್‌ಡಿಪಿಎಸ್) ಅನ್ವಯಿಸಿರುವ ಪ್ರಕರಣದಲ್ಲಿ ತಾನು ಜಾಮೀನು ನೀಡುವ ಮನಸ್ಸು ಮಾಡಬಹುದೇ ಹೊರತು ಹೆರಾಯಿನ್ ಸಂಬಂಧಿತ ಪ್ರಕರಣಗಳಲ್ಲಿ ಅಲ್ಲ ಎಂದು ಗುರುವಾರ ಸುಪ್ರೀಂ ಕೋರ್ಟ್ ಹೇಳಿದೆ.
“ಚರಸ್ ಮತ್ತು ಗಾಂಜಾ ಸಂಬಂಧಿತ ಪ್ರಕರಣಗಳಲ್ಲಿ ಜಾಮೀನು ಕೋರಿದಾಗ ನಾವು ಒಲವು ತೋರಿದ್ದೇವೆ. ಆದರೆ, ಹೆರಾಯಿನ್ ಸಂಬಂಧಿತ ಪ್ರಕರಣಗಳಲ್ಲಿ ನಾವು ಕಠಿಣವಾಗಿ ನಡೆದುಕೊಳ್ಳಬೇಕಾಗುತ್ತದೆ” ಎಂದು ನ್ಯಾಯಮೂರ್ತಿಗಳಾದ ಸಿ ಟಿ ರವಿಕುಮಾರ್ ಮತ್ತು ಸಂಜಯ್ ಕರೋಲ್ ಅವರ ವಿಭಾಗೀಯ ಪೀಠ ಹೇಳಿದೆ.
ನ್ಯಾಯಾಲಯವು 61 ವರ್ಷದ ಮಹಿಳೆಯೊಬ್ಬರು 500 ಗ್ರಾಂನಷ್ಟು ಹೆರಾಯಿನ್ ಕೊಂಡೊಯ್ಯುತ್ತಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿತು. ಹೆರಾಯಿನ್ ಸಾಗಿಸುತ್ತಿದ್ದ ಕಾರಿನಲ್ಲೇ ಆರೋಪಿ ಮಹಿಳೆ ಸಂಚಾರ ಮಾಡುತ್ತಿದ್ದರು ಎಂದು ಈಚೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಜಾಮೀನು ಮಂಜೂರು ಮಾಡಲು ನಿರಾಕರಿಸಿತ್ತು.
ಆರೋಪಿ ಮಹಿಳೆಗೆ ವಯಸ್ಸಾಗಿದ್ದು, ಆಕೆಯ ಬಳಿ ಯಾವುದೇ ಆಕ್ಷೇಪಾರ್ಹವಾದ ಉತ್ಪನ್ನ ಪತ್ತೆಯಾಗಿಲ್ಲ ಎಂದು ಆಕೆಯ ವಕೀಲರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದರು. ಆಗ ನ್ಯಾ. ರವಿಕುಮಾರ್ ಅವರು “ಆರೋಪಿ ಮಹಿಳೆಯ ಬಳಿ 500 ಗ್ರಾಂ ಹೆರಾಯಿನ್ ಪತ್ತೆಯಾಗಿದೆ” ಎಂದರು.
ಇದಕ್ಕೆ ಧ್ವನಿಗೂಡಿಸಿದ ನ್ಯಾ. ಕರೋಲ್ ಅವರು “ಹೆರಾಯಿನ್ ಎಲ್ಲವನ್ನೂ ಮುಗಿಸುತ್ತದೆ. ಇದು ಇಡೀ ಯುವ ಸಮುದಾಯವನ್ನು ನಾಶಪಡಿಸುತ್ತದೆ. ಈಗ ನಾವು ಮಧ್ಯಪ್ರವೇಶ ಮಾಡಲಾಗದು” ಎಂದರು.