

ಪಾಕಿಸ್ತಾನದ ಹೊಸ ಸಾಂವಿಧಾನಿಕ ವ್ಯವಸ್ಥೆ ನ್ಯಾಯಾಂಗ ಸ್ವಾತಂತ್ರ್ಯವನ್ನು ಟೊಳ್ಳು ಮಾಡುತ್ತಿದೆ ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಬೆನ್ನಿಗೇ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಪಾಕಿಸ್ತಾನದ ಸುಪ್ರೀಂ ಕೋರ್ಟ್‌ಗೂ ಉನ್ನತವಾದ "ಒಕ್ಕೂಟ ಸಾಂವಿಧಾನಿಕ ನ್ಯಾಯಾಲಯ" (ಫೆಡರಲ್ ಕಾನ್ಸ್ಟಿಟ್ಯೂಷನ್ ಕೋರ್ಟ್ - ಎಫ್‌ಸಿಸಿ) ಅಸ್ತಿತ್ವಕ್ಕೆ ತರಲು ಯತ್ನಿಸುವ 27ನೇ ಸಾಂವಿಧಾನಿಕ ತಿದ್ದುಪಡಿಗೆ ವಿರೋಧಿಸಿ ಈ ರಾಜೀನಾಮೆ ಸಲ್ಲಿಸಲಾಗಿದೆ.
ಸರ್ಕಾರ ಮತ್ತು ಮೂಲಭೂತ ಹಕ್ಕುಗಳ ಜಾರಿ ಪ್ರಕರಣಗಳನ್ನು ವಿಚಾರಣೆ ನಡೆಸುವ ಅಧಿಕಾರ ವ್ಯಾಪ್ತಿ ಒಕ್ಕೂಟ ಸಾಂವಿಧಾನಿಕ ನ್ಯಾಯಾಲಯಕ್ಕೆ ದೊರೆಯಲಿದ್ದು ಪಾಕಿಸ್ತಾನ ಸುಪ್ರೀಂ ಕೋರ್ಟ್ ಅಥವಾ ಅದರ ಸಾಂವಿಧಾನಿಕ ಪೀಠಗಳಲ್ಲಿ ಬಾಕಿ ಇರುವ ಎಲ್ಲಾ ಅರ್ಜಿಗಳು ಅಥವಾ ಮೇಲ್ಮನವಿಗಳು ಎಫ್‌ಸಿಸಿಗೆ ವರ್ಗಾವಣೆಯಾಗಲಿವೆ.
27ನೇ ತಿದ್ದುಪಡಿ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ವಿಚಾರಣೆ ನಡೆಸುವ ಅಧಿಕಾರವನ್ನು ರದ್ದುಗೊಳಿಸುತ್ತದೆ. ಯಾಹ್ಯಾ ಅಫ್ರಿದಿ ಅವರು ತಮ್ಮ ಉಳಿದ ಅಧಿಕಾರಾವಧಿಗೆ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿಯಾಗಿ ಮುಂದುವರೆಯಲಿದ್ದರೂ ಪಾಕಿಸ್ತಾನ ಎಂಬ ಪದವನ್ನು ಸುಪ್ರೀಂ ಕೋರ್ಟ್‌ನಿಂದ ತೆಗೆದುಹಾಕಲಾಗುತ್ತದೆ. ಅರ್ಥಾತ್ ಈ ನ್ಯಾಯಾಲಯವನ್ನು ಭವಿಷ್ಯದಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟ್ (ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯ) ಎಂದು ಕರೆಯುವುದಿಲ್ಲ.,
ನ್ಯಾಯಮೂರ್ತಿಗಳಾದ ಅಥರ್ ಮಿನಲ್ಲಾ ಮತ್ತು ಸೈಯದ್ ಮನ್ಸೂರ್ ಅಲಿ ಶಾ ಅವರು ಈ ಬೆಳವಣಿಗೆಯನ್ನು ಖಂಡಿಸಿ ರಾಜೀನಾಮೆ ನೀಡಿದ್ದಾರೆ.
ಪಾಕಿಸ್ತಾನದ ಅಧ್ಯಕ್ಷರಿಗೆ ಕಳುಹಿಸಲಾದ ರಾಜೀನಾಮೆ ಪತ್ರದಲ್ಲಿ, ನ್ಯಾಯಮೂರ್ತಿ ಮಿನಲ್ಲಾ ಅವರು ನಾನು ಪ್ರತಿಜ್ಞಾವಿಧಿ ಕೈಗೊಂಡಿದ್ದ ಸಂವಿಧಾನ ಈಗ ಉಳಿದಿಲ್ಲ. ಸುಪ್ರೀಂ ಕೋರ್ಟ್ ವರ್ಚಸ್ಸು ಮತ್ತು ಅಧಿಕಾರವನ್ನು ಸರ್ಕಾರ ಬಲಪ್ರಯೋಗಿಸಿ ಕುಗ್ಗಿಸುತ್ತಿದೆ. ಹೀಗೆ ಕುಗ್ಗಿದ ನ್ಯಾಯಾಂಗದ ಭಾಗವಾಗಲು ನೈತಿಕವಾಗಿ ತಮಗೆ ಒಪ್ಪಿತವಾಗಿರದೆ ಇರುವುದರಿಂದ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ವಿವರಿಸಿದ್ದಾರೆ.
ನ್ಯಾಯಮೂರ್ತಿ ಶಾ ಅವರು ತಮ್ಮ 13 ಪುಟಗಳ ರಾಜೀನಾಮೆ ಪತ್ರದಲ್ಲಿ ಇದೇ ರೀತಿಯ ಕಳವಳ ವ್ಯಕ್ತಪಡಿಸಿದ್ದು, ರಾಜ್ಯದ ಕ್ರಮವು ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯದ ಸಮಗ್ರತೆಗೆ ಧಕ್ಕೆ ತಂದಿದ್ದು ಅದರ ಸಾಂವಿಧಾನಿಕ ನ್ಯಾಯವ್ಯಾಪ್ತಿಯನ್ನು ಕಸಿದುಕೊಂಡಿದೆ ಎಂದು ದೂರಿದ್ದಾರೆ.
ಅಲ್ಲದೆ ತಿದ್ದುಪಡಿ ವಿರೋಧಿಸುವಲ್ಲಿ ಮುಖ್ಯ ನ್ಯಾಯಮೂರ್ತಿ ವಿಫಲರಾಗಿದ್ದಾರೆ ಎಫ್‌ಸಿಸಿ ರಚನೆಯ ಹಿಂದೆ ರಾಜಕೀಯ ಉದ್ದೇಶ ಇದ್ದು ನ್ಯಾಯಾಂಗ ಸುಧಾರಣೆಗಾಗಿ ಈ ಕ್ರಮ ಕೈಗೊಂಡಿಲ್ಲ. ಹೊಸ ತಿದ್ದುಪಡಿ ಪ್ರಕಾರ ಕಾಯಿದೆಗೆ ಮಾಡಲಾದ ತಿದ್ದುಪಡಿ ಪರಿಶೀಲಿಸುವ ಅಧಿಕಾರವೇ ಇರುವುದಿಲ್ಲ ಇದು ಸಂವಿಧಾನಕ್ಕೆ ಅಪಾಯಕರ. ಹೀಗಾಗಿ ಸ್ಪಷ್ಟ ಆತ್ಮಸಾಕ್ಷಿಯಿಂದ ಮತ್ತು ಯಾವುದೇ ವಿಷಾದವಿಲ್ಲದೆ ಸುಪ್ರೀಂಕೋರ್ಟ್‌ನಿಂದ ನಿರ್ಗಮಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.