

ಹತ್ತು ದಿನಗಳ ಹಳೆಯ ವಾಹನ ಎಂದು ಹೇಳಿ 82 ದಿನಗಳ ಹಳೆಯ ವಾಹನವನ್ನು (ಕಾರು) ನೀಡಿದ ಆರೋಪದ ಮೇಲೆ ದಾಖಲಾದ ದೂರು ರದ್ದುಪಡಿಸುವಂತೆ ಕೋರಿ ಆಟೋಮೊಬೈಲ್ಸ್ ಕಂಪನಿಯ ನಿರ್ದೇಶಕ ಸಲ್ಲಿಸಿರುವ ಅರ್ಜಿಯ ಸಂಬಂಧ ವೈಯಾಲಿಕಾವಲ್ ಕಾವಲ್ ಪೊಲೀಸರಿಗೆ ನೋಟಿಸ್ ಜಾರಿ ಮಾಡಿರುವ ಕರ್ನಾಟಕ ಹೈಕೋರ್ಟ್, 82 ದಿನಗಳ ಹಳೆಯ ವಾಹನವನ್ನು 10 ದಿನಗಳ ವಾಹನ ಎಂದು ತಿಳಿಸಿ ಏಕೆ ಮಾರಾಟ ಮಾಡಿದ್ದೀರಿ? ಎಂದು ಅರ್ಜಿದಾರರನ್ನು ಪ್ರಶ್ನಿಸಿದೆ.
ತಮ್ಮ ವಿರುದ್ಧದ ನಗರದ ಒಂದನೇ ಎಸಿಜೆಎಂ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಸ್ಯಾಂಕಿ ರಸ್ತೆಯ ಟ್ರೈಡೆಂಟ್ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಸಮಿರ್ ಚೌಧರಿ ಮತ್ತು ರಕ್ಷಿತ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ಅರ್ಜಿದಾರರ ಪರ ವಕೀಲರು “ಅರ್ಜಿದಾರರಿಂದ ವಾಹನ ಖರೀದಿಸಿದ್ದ ದೂರುದಾರರು ದಾಖಲಿಸಿದ್ದ ದೂರು ಇದಾಗಿದೆ ಎಂದು ತಿಳಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಪೀಠವು “ಹೌದು ವಕೀಲರೆ... ನಿಮ್ಮ ಅರ್ಜಿದಾರರು 82 ದಿನಗಳ ಹಳೆಯ ವಾಹನವನ್ನು 10 ದಿನಗಳ ವಾಹನ ಎಂದು ತಿಳಿಸಿ ದೂರುದಾರರಿಗೆ ಏಕೆ ಮಾರಾಟ ಮಾಡಿದ್ದೀರಿ?” ಎಂದು ಪ್ರಶ್ನಿಸಿತು.
ಅರ್ಜಿದಾರರ ಪರ ವಕೀಲರು “ಯಾವ ವಾಹನವು ಲಭ್ಯವಿತ್ತೋ; ಅದನ್ನು ನೀಡಲಾಗಿದೆ” ಎಂದರು.
ಪೀಠ “ದಾಖಲೆಗಳಲ್ಲಿ ಆ ವಾಹನ ಕೇವಲ 10 ದಿನ ಹಳೆಯದು ಎಂದು ಹೇಗಿತ್ತು? ಎಂಬ ವಿಚಾರದ ಬಗ್ಗೆ ನಮಗೆ ಹೇಳಿ” ಎಂದು ಕೇಳಿತು.
ಅರ್ಜಿದಾರರ ಪರ ವಕೀಲರು “ಆ ವಾಹನಕ್ಕಾಗಿ ಸ್ವತಃ ದೂರುದಾರರೇ ಬೇಡಿಕೆಯಿಟ್ಟಿದ್ದರು” ಎಂದು ಉತ್ತರಿಸಿದರು.
“ಇದರಿಂದ ಕೊಂಚ ಗಟ್ಟಿಧ್ವನಿಯಲ್ಲಿ, ಮೊಟ್ಟ ಮೊದಲಿಗೆ ನೀವು (ಅರ್ಜಿದಾರರು) ಇದೇ ರೀತಿಯಲ್ಲಿ ಹಳೆಯ ವಾಹನಗಳನ್ನು ಮಾರಾಟ ಮಾಡುತ್ತೀರಾ? ಟ್ರೈಡೆಂಟ್ ಹುಂಡೈ ಕಂಪನಿಯು ಹಳೆಯ ವಾಹನಗಳನ್ನು ಮಾರಾಟ ಮಾಡುತ್ತದೆಯೇ? ಈ ವಾಹನವನ್ನು ಹೇಗೆ ಮಾರಾಟ ಮಾಡಿದಿರಿ? ನೀವು 82 ದಿನಗಳ ಹಳೆಯ ವಾಹನಗಳನ್ನು 10 ದಿನಗಳ ಹಳೆಯ ವಾಹನವೆಂದು ಮಾರಾಟ ಮಾಡಿದ್ದೀರಿ. ಅದು ಏತಕ್ಕಾಗಿ?” ಎಂದು ಪ್ರಶ್ನಿಸಿತು.
ದೂರುದಾರರು ತಯಾರಾದ ದಿನದಿಂದ 10 ದಿನಗಳು ಎಂಬುದಾಗಿ ಕ್ಲೇಮು ಮಾಡಿದರು ಎಂದು ಉತ್ತರಿಸುತ್ತಿದ್ದ ಅರ್ಜಿದಾರರ ಪರ ವಕೀಲರನ್ನು ತಡೆದ ಪೀಠವು “ಹಳೆಯ ವಾಹನವನ್ನು ಏಕೆ ಮಾರಾಟ ಮಾಡಿದ್ದೀರಿ?” ಎಂದು ಮತ್ತೆ ಮತ್ತೆ ಕೇಳಿತಲ್ಲದೆ, ಅರ್ಜಿಯಲ್ಲಿ ಪ್ರತಿವಾದಿಗಳಾದ ವೈಯಾಲಿಕಾವಲ್ ಠಾಣಾ ಪೊಲೀಸರು ಮತ್ತು ದೂರುದಾರಾದ ಕೆ ಬಿ ವೆಂಕಟೇಶ್ ಕುಮಾರ್‌ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಅರ್ಜಿದಾರರಿಂದ 2025ರಲ್ಲಿ ವಾಹನ ಖರೀದಿಸಿದ್ದ ದೂರುದಾರ ವೆಂಕಟೇಶ್ ಕುಮಾರ್, 2025ರ ಅಕ್ಟೋಬರ್ 18ರಂದು ಒಂದನೇ ಎಸಿಜೆಎಂ ನ್ಯಾಯಾಲಯವು ಖಾಸಗಿ ದೂರು ದಾಖಲಿಸಿದ್ದರು. ಅರ್ಜಿದಾರರು 10 ದಿನಗಳ ಹಳೆಯ ವಾಹನ ಎಂದು ತಿಳಿಸಿ ನನಗೆ 82 ದಿನಗಳ ಹಳೆಯ ವಾಹನವನ್ನು ಮಾರಾಟ ಮಾಡಿದ್ದಾರೆ. ಆ ಮೂಲಕ ವಂಚಿಸಿದ್ದಾರೆ ಎಂದು ಆರೋಪಿಸಿದ್ದರು. ಪ್ರಕರಣವನ್ನು ತನಿಖೆ ನಡೆಸುವಂತೆ 2026ರ ಜನವರಿ 8ರಂದು ವೈಯಾಲಿಕಾವಲ್ ಠಾಣಾ ಪೊಲೀಸರಿಗೆ ನ್ಯಾಯಾಲಯ ನಿರ್ದೇಶನ ನೀಡಿತ್ತು.
ದೂರಿನೊಂದಿಗೆ ಲಗತ್ತಿಸಿದ ಪ್ರಮಾಣ ಪತ್ರ ಹಾಗೂ ಇತ್ಯಾದಿ (ವಾಟ್ಸಾಪ್ ಸಂದೇಶ, ಲೆಡ್ಜರ್ ರಿಪೋರ್ಟ್, ಇನ್ವಾಯೀಸ್, ಪೊಲೀಸ್ ಆಯುಕ್ತರಿಗೆ ದೂರುದಾರರು ನೀಡಿದ ದೂರು, ಸ್ವೀಕೃತಿ ಪ್ರತಿ) ದಾಖಲೆಗಳನ್ನು ಪರಿಶೀಲಿಸಲಾಗಿದೆ. ತನಿಖೆಗೆ ಇದು ಅರ್ಹ ದೂರವಾಗಿದೆ. ಅದರಂತೆ ವೈಯಾಲಿಕಾವಲ್ ಠಾಣಾ ಪೊಲೀಸರು ದೂರಿನ ಕುರಿತು ತನಿಖೆ ನಡೆಸಿ ವರದಿಯನ್ನು ಸಲ್ಲಿಸಬೇಕು ಎಂದು ಎಸಿಜೆಎಂ ನ್ಯಾಯಾಲಯ ನಿರ್ದೇಶನ ನೀಡಿತ್ತು. ಇದರಿಂದ ತಮ್ಮ ವಿರುದ್ಧದ ದೂರಿಗೆ ಸಂಬಂಧಿಸಿದಂತೆ ಎಸಿಜೆಎಂ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.