ಮದುವೆಯಾದ 7 ವರ್ಷದೊಳಗೆ ಪತ್ನಿಯ ಸಾವು ಸಾಕ್ಷ್ಯ ಕಾಯಿದೆಯಡಿ ಸದಾ ಆತ್ಮಹತ್ಯೆ ಪ್ರಚೋದನೆ ಎನಿಸದು: ಕಲ್ಕತ್ತಾ ಹೈಕೋರ್ಟ್

ಪತ್ನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಆರೋಪ ಹೊತ್ತಿದ್ದ ಪತಿ ಮತ್ತು ಆತನ ಸಂಬಂಧಿಕರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ರದ್ದುಪಡಿಸಿದ ನ್ಯಾ. ರಾಯ್ ಚಟ್ಟೋಪಾಧ್ಯಾಯ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಲ್ಕತ್ತಾ ಹೈಕೋರ್ಟ್
ಕಲ್ಕತ್ತಾ ಹೈಕೋರ್ಟ್
Published on

ಮದುವೆಯಾದ ಏಳು ವರ್ಷಗಳೊಳಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಮಾತ್ರಕ್ಕೆ, ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 113 ಎ ಅಡಿ ಆಕೆಯ ಪತಿ ಅಥವಾ ಅತ್ತೆ ಮಾವಂದಿರನ್ನು ಅಪರಾಧಿಗಳು ಎಂದು ತನ್ನಿಂತಾನೇ ಪರಿಗಣಿಸಲಾಗದು ಎಂಬುದಾಗಿ ಕಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದೆ. (ಕೃಷ್ಣಪಾದ ಮಹತೋ ವಿರುದ್ಧ ಪಶ್ಚಿಮ ಬಂಗಾಳ ರಾಜ್ಯ)

ವಿವಾಹಿತ ಮಹಿಳೆ ಮದುವೆಯಾದ ಏಳು ವರ್ಷಗಳ ಒಳಗೆ ಸಾವನ್ನಪ್ಪಿದರೆ ಮತ್ತು ಆ ಸಮಯದಲ್ಲಿ ಅವಳು ಕ್ರೌರ್ಯಕ್ಕೆ ಒಳಗಾಗಿದ್ದರೆ ಆಕೆಯ ಪತಿ ಮತ್ತು ಅತ್ತೆ ಮಾವಂದಿರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಊಹಿಸಬಹುದು ಎನ್ನುತ್ತದೆ ಸೆಕ್ಷನ್ 113 ಎ.

ಪತ್ನಿ ಕ್ರೌರ್ಯಕ್ಕೆ ಒಳಗಾಗಿದ್ದಾಳೆ ಎಂದು ತೋರಿಸಲು ಮೇಲ್ನೋಟದ ಪುರಾವೆಗಳು ಇದ್ದಾಗ ಮಾತ್ರ ಸೆಕ್ಷನ್ 113 ಎ ಅಡಿಯಲ್ಲಿ ಇದು ಅಪರಾಧವಾಗುತ್ತದೆ ಎಂದು ನ್ಯಾಯಮೂರ್ತಿ ರಾಯ್ ಚಟ್ಟೋಪಾಧ್ಯಾಯ ವಿವರಿಸಿದರು.

"ಆರೋಪಪಟ್ಟಿಯಲ್ಲಿರುವ ಆರೋಪಿಗಳು ಪತ್ನಿಯನ್ನು ಕ್ರೌರ್ಯಕ್ಕೆ ಒಳಪಡಿಸಿದ್ದಾರೆ ಎಂದು ಮೇಲ್ನೋಟಕ್ಕೆ ಸಾಬೀತಾಗದ ಹೊರತು ಮದುವೆಯಾದ ದಿನದಿಂದ ಏಳು ವರ್ಷದೊಳಗೆ ಆತ್ಮಹತ್ಯೆ ಮಾಡಿಕೊಂಡಾಕೆಯನ್ನು ಕೇವಲ ಕಾಯಿದೆಯ ಊಹೆಯಡಿ ತರಲಾಗದು " ಎಂದು ಅವರು ಹೇಳಿದರು.

ಪತ್ನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಆರೋಪ ಹೊತ್ತಿದ್ದ ಪತಿ ಮತ್ತು ಆತನ ಸಂಬಂಧಿಕರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ರದ್ದುಪಡಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪತಿ ಮತ್ತು ಸಂತ್ರಸ್ತೆಯ ನಡುವಿನ ವಿವಾಹದ ಅವಧಿ ಏಳು ವರ್ಷಗಳನ್ನು ಮೀರಬಾರದು ಎಂಬ ಸೆಕ್ಷನ್ 113 ಎ ಅಡಿಯ ಊಹೆ ಆಧಾರದ ಮೇಲೆ ಸರಳವಾಗಿ ಮುಂದುವರೆಯುವ ಮೂಲಕ ವಿಚಾರಣಾ ನ್ಯಾಯಾಲಯ ಎಡವಿದೆ ಎಂದು ಹೈಕೋರ್ಟ್ ಹೇಳಿದೆ.

ಹೀಗಾಗಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498 ಎ (ಕ್ರೌರ್ಯ) ಮತ್ತು 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪತಿ ಕೃಷ್ಣಪಾದ ಮಹತೋ ಮತ್ತು ಅವರ ಕುಟುಂಬ ಸದಸ್ಯರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಪೀಠ ರದ್ದುಗೊಳಿಸಿತು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Attachment
PDF
Krishnapada Mahato vs State of West Bengal.pdf
Preview
Kannada Bar & Bench
kannada.barandbench.com