ಗಂಡನ ಎರಡನೇ ವಿವಾಹಕ್ಕೆ ಮೊದಲ ಪತ್ನಿ ಸಮ್ಮತಿಸಿದ್ದರೂ ಕೂಡ ಐಪಿಸಿ ಸೆಕ್ಷನ್ 498 ಎ ಅಡಿಯಲ್ಲಿ ಕ್ರೌರ್ಯ ಕುರಿತ ದೂರು ದಾಖಲಿಸಬಹುದು ಎಂದು ಪಾಟ್ನಾ ಹೈಕೋರ್ಟ್ ಕಳೆದ ವಾರ ಹೇಳಿದೆ [ಅರುಣ್ ಕುಮಾರ್ ಸಿಂಗ್ ಮತ್ತು ನಿರ್ಮಲಾ ದೇವಿ ನಡುವಣ ಪ್ರಕರಣ].
ಮೇ 1978ರಲ್ಲಿ ಮದುವೆಯಾಗಿದ್ದ ತನ್ನ ಮೊದಲ ಪತ್ನಿಯ ಪೂರ್ವಾನುಮತಿ ಪಡೆದು 2004ರಲ್ಲಿ ಎರಡನೇ ಮದುವೆಯಾಗಿದ್ದಾಗಿ ತಿಳಿಸಿದ್ದ ಪತಿಯ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಪವನಕುಮಾರ್ ಬಜಂತ್ರಿ ಮತ್ತು ಜಿತೇಂದ್ರ ಕುಮಾರ್ ಅವರಿದ್ದ ವಿಭಾಗೀಯ ಪೀಠ ನಿರಾಕರಿಸಿತು.
2005ರಲ್ಲಿ ಎರಡನೇ ಮದುವೆ ವಿಫಲವಾಗಿದ್ದು ಬಳಿಕ 2010ರಲ್ಲಿ ಮೊದಲ ಪತ್ನಿ ತನಗೆ ಕ್ರೌರ್ಯ ಎಸಗಿದ್ದಕ್ಕಾಗಿ ಪತಿ ವಿರುದ್ಧ ಸೆಕ್ಷನ್ 498ಎ ಅಡಿ ಪ್ರಕರಣ ದಾಖಲಿಸಿದ್ದಾಳೆ ಎಂಬ ಅಂಶವನ್ನು ಪೀಠ ಗಮನಿಸಿತು.
ಪತಿ ತನ್ನ ಮೊದಲ ಪತ್ನಿಯ ಸಮ್ಮತಿಯೊಂದಿಗೆ ಎರಡನೇ ಮದುವೆ ಮಾಡಿಕೊಂಡಿದ್ದರೂ ಕೂಡ ಎರಡನೇ ಮದುವೆ ಮಾಡಿಕೊಳ್ಳುವುದು ಮೊದಲ ಹೆಂಡತಿಯ ವಿರುದ್ಧ ಎಸಗುವ ಕ್ರೌರ್ಯವಾಗುತ್ತದೆ ಎಂದು ಅದು ಹೇಳಿದೆ.
“ಸಾಮಾನ್ಯವಾದ ಅರಿವಿನ ಪ್ರಕಾರ ಎರಡನೇ ಮದುವೆಯನ್ನು ಯಾವುದೇ ಹೆಂಡತಿ ಸಹಿಸುವುದಿಲ್ಲ. ಹೀಗಾಗಿ ಎರಡನೇ ವಿವಾಹವಾಗುವುದರಿಂದ ಆಕೆ ಪ್ರತ್ಯೇಕವಾಗಿ ವಾಸ ಮಾಡಬೇಕಾಗುವುದರಿಂದ ಕ್ರೌರ್ಯಕೆ ಸಮನಾಗಲಿದ್ದು ಸೆಕ್ಷನ್ 498 ಎ ಅಡಿ ಮೊಕದ್ದಮೆ ಹೂಡಲು ವ್ಯಾಜ್ಯಕಾರಣವಾಗುತ್ತದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪತ್ನಿಯು ಸೆಕ್ಷನ್ 498ಎ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ ಮಾತ್ರಕ್ಕೆ ಪತಿಗೆ ಕ್ರೌರ್ಯ ಉಂಟಾಗಿದೆ ಎನ್ನಲಾಗದು ಎಂದು ಕೂಡ ಪೀಠ ತಿಳಿಸಿದೆ.
ಶೇಖ್‌ಪುರದ ಕೌಟುಂಬಿಕ ನ್ಯಾಯಾಲಯದ ಜುಲೈ 2017ರಲ್ಲಿ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿತು.