ಮನೆಯಲ್ಲಿ ಬೇರೆ ಮಹಿಳೆ ಇರಿಸಿಕೊಂಡ ಪತಿ ತನ್ನ ಜೊತೆ ವಾಸಿಸುವಂತೆ ಪತ್ನಿಯ ಒತ್ತಾಯಿಸಲಾಗದು: ಹಿಮಾಚಲ ಪ್ರದೇಶ ಹೈಕೋರ್ಟ್‌

ಪತ್ನಿ ತನ್ನನ್ನು ತೊರೆದಿದ್ದಾಳೆ ಎಂಬ ವ್ಯಕ್ತಿಯ ಆರೋಪವನ್ನು ತಳ್ಳಿಹಾಕಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
Matrimonial Dispute
Matrimonial Dispute
Published on

ಪತಿಯು ಬೇರೊಬ್ಬ ಮಹಿಳೆಯನ್ನು ಮನೆಯಲ್ಲಿ ಇರಿಸಿಕೊಂಡು ಪತ್ನಿಯನ್ನು ಜೊತೆಯಲ್ಲಿ ವಾಸಿಸುವಂತೆ ಒತ್ತಾಯಿಸುವಂತಿಲ್ಲ ಎಂದು ಹಿಮಾಚಲ ಪ್ರದೇಶ ಹೈಕೋರ್ಟ್‌ ಹೇಳಿದೆ [ನೈನ್‌ ಸುಖ್‌ ಮತ್ತು ಸೀಮಾ ದೇವಿ ನಡುವಣ ಪ್ರಕರಣ].

ಪತ್ನಿ ತನ್ನನ್ನು ತೊರೆದು ಕ್ರೌರ್ಯದಿಂದ ವರ್ತಿಸಿದ್ದಾಳೆ ಎಂದು ಆರೋಪಿಸಿ ವಿಚ್ಛೇದನ ಕೋರಿದ್ದ ಪತಿಯ ಮನವಿಯನ್ನು ವಜಾಗೊಳಿಸುವ ವೇಳೆ ನ್ಯಾ. ಸತ್ಯೇನ್ ವೈದ್ಯ ಮೇಲಿನಂತೆ ತಿಳಿಸಿದರು.

Also Read
ಕಕ್ಷಿದಾರರು ವೈವಾಹಿಕ ವ್ಯಾಜ್ಯ ಇತ್ಯರ್ಥಪಡಿಸಿಕೊಂಡರೆ ನ್ಯಾಯಾಲಯಗಳು ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬಹುದು: ಸುಪ್ರೀಂ

"ಪ್ರತಿವಾದಿಗೆ (ಪತ್ನಿ) ಪ್ರತ್ಯೇಕವಾಗಿ ವಾಸಿಸಲು ಸಮರ್ಥನೀಯ ಕಾರಣ ಇದೆ, ಏಕೆಂದರೆ ಬೇರೊಬ್ಬ ಮಹಿಳೆಯನ್ನು ಇರಿಸಿಕೊಂಡ ಪತಿ ವೈವಾಹಿಕ ಮನೆಯಲ್ಲಿ (ಪತಿ ಪತ್ನಿ ಒಗ್ಗೂಡಿ ಇರುವ ಮನೆ) ಇರುವಂತೆ ಹೆಂಡತಿಯನ್ನು ಬಲವಂತಪಡಿಸುವಂತಿಲ್ಲ" ಎಂದು ನ್ಯಾಯಾಲಯ ಹೇಳಿದೆ.

ಆ ಮೂಲಕ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹಿಂದೂ ವಿವಾಹ ಕಾಯಿದೆಯ ಸೆಕ್ಷನ್‌ 13ರ ಅಡಿಯಲ್ಲಿ ವಿಚ್ಛೇದನಕ್ಕೆ ಪತಿ ಮಾಡಿದ್ದ ಮನವಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಪತ್ನಿ ತೊರೆದಿರುವುದನ್ನು ತಾನು ಸೂಕ್ತ ರೀತಿಯಲ್ಲಿ ಸಾಬೀತು ಪಡಿಸಿರುವುದಾಗಿ ಪತಿ ಹೇಳಿಕೊಂಡಿದ್ದ. ಪತ್ನಿ ತನ್ನ ಮತ್ತು ತನ್ನ ಕುಟುಂಬದೆಡೆಗೆ ಹಗೆತನದಿಂದ ವರ್ತಿಸುತ್ತಿದ್ದಳು ಮತ್ತು ಮನೆಯನ್ನು ಅಂತಿಮವಾಗಿ ತೊರೆಯುವವರೆಗೂ ಸಣ್ಣಪುಟ್ಟ ಕಾರಣಗಳನ್ನು ತೆಗೆದು ಜಗಳ ಮಾಡುತ್ತಿದ್ದಳು ಎಂದು ವಿವರಿಸಿದ್ದ.

ಆದರೆ ಪತಿಯ ಕ್ರೌರ್ಯದ ಆರೋಪಗಳು ಅಸ್ಪಷ್ಟವಾಗಿದ್ದು, ಸಾಮಾನ್ಯ ಸ್ವರೂಪದಲ್ಲಿರುವುದನ್ನು ಹೈಕೋರ್ಟ್ ಗಮನಿಸಿತು. ಆತ ಕ್ರೌರ್ಯದ ಯಾವುದೇ ನಿರ್ದಿಷ್ಟ ನಿದರ್ಶನವನ್ನು ಉಲ್ಲೇಖಿಸಿರಲಿಲ್ಲ ಅಥವಾ ಮನವಿ ಮಾಡಿರಲಿಲ್ಲ ಎಂಬುದನ್ನು ಪರಿಗಣಿಸಿತು.

 ಹಿಂದೂ ವಿವಾಹ ಮತ್ತು ವಿಚ್ಛೇದನ (ಹಿಮಾಚಲ ಪ್ರದೇಶ) ನಿಯಮಾವಳಿ- 1982ರ ಪ್ರಕಾರ ಕ್ರೌರ್ಯ ನಡೆದ ಸಮಯ ಮತ್ತು ಸ್ಥಳ ಹಾಗೂ ಇತರ ಸಂಗತಿಗಳನ್ನು ಅವಲಂಬಿಸಿ ಸಾಕಷ್ಟು ನಿರ್ದಿಷ್ಟತೆಯೊಂದಿಗೆ ಕ್ರೌರ್ಯದ ಆಪಾದನೆ ಮಾಡುವ ಅಗತ್ಯವಿರುತ್ತದೆ ಎಂದು ಹೇಳಿದ ನ್ಯಾಯಾಲಯ ಪತಿಯ ಅರ್ಜಿಯನ್ನು ವಜಾಗೊಳಿಸಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯಿತು.  

Kannada Bar & Bench
kannada.barandbench.com