ಪತ್ನಿಯ ಹಾರ್ಮೋನ್ ಅಸಮತೋಲನ, ಅನಿಯಮಿತ ಋತುಸ್ರಾವ ಮತ್ತು ಜನನಾಂಗವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಕೋರಿ ಪತಿಯು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ.
ಪತಿಯ ಅಸಹಕಾರದಿಂದ ಪ್ರಸ್ತಕಾರ್ಯವು ಪೂರ್ಣಗೊಳ್ಳದೆ ವಿವಾಹವು ಸಂಪನ್ನವಾಗಿಲ್ಲ ಎಂದು ಪತ್ನಿ ಈಗಾಗಲೇ ವಿವರಿಸಿದ್ದು, ವೈದ್ಯಕೀಯ ಪರೀಕ್ಷೆಗೆ ಆದೇಶ ನೀಡುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ಆರ್ ಎನ್ ಮಂಜುಳಾ ತಿಳಿಸಿದರು.
ಪತ್ನಿಯ ಜನನಾಂಗವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದು ಆಕೆಯ ಸ್ವಾಭಿಮಾನದ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಹೇಳಿದೆ.
ತನ್ನ ಪತ್ನಿ ವೈವಾಹಿಕ ಜೀವನಕ್ಕೆ ಅನರ್ಹಳು, ಸಂಭೋಗಕ್ಕೆ ಸಹಕರಿಸಲಿಲ್ಲ ಮತ್ತು ಸಂಸಾರ ನಡೆಸಲು ನಿರಾಕರಿಸುತ್ತಿದ್ದು ಲೈಂಗಿಕ ಬಯಕೆ ಈಡೇರಿಸದೇ ಇರುವುದರಿಂದ ಮದುವೆಯನ್ನು ರದ್ದುಗೊಳಿಸುವಂತೆ ಪತಿ ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರು.
ಅನಿಯಮಿತ ಅವಧಿಗಳಿಂದ ಉಂಟಾಗುವ ಹಾರ್ಮೋನ್ ಅಸಮತೋಲನದಿಂದಾಗಿ ಅವರು ಸಹಕರಿಸಲಿರಲಿಲ್ಲ. ತನ್ನ ಹಾರ್ಮೋನ್ ಅಸಮತೋಲನದ ವಿಚಾರವನ್ನು ಬಹಿರಂಗಪಡಿಸದೇ ಮೋಸ ಮಾಡಿದ್ದಾರೆ ಎಂದು ಪತಿ ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯ ಪತ್ನಿಯ ವೈದ್ಯಕೀಯ ಪರೀಕ್ಷೆಗೆ ಆದೇಶಿಸಿತ್ತು.
ತನ್ನ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಡೆಸಲು ಹೊರಟಿರುವ ಪರೀಕ್ಷೆ ಮೂಲ ಅರ್ಜಿಯ ವ್ಯಾಪ್ತಿಯನ್ನು ಮೀರಿದೆ ಎಂಬ ಕಾರಣಕ್ಕಾಗಿ ಪತ್ನಿ ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.