ಕ್ರಿಕೆಟಿಗ ಶಮಿ ಬಂಧನಕ್ಕೆ ಇರುವ ತಡೆಯಾಜ್ಞೆ ತೆರವು ಕೋರಿ ಸುಪ್ರೀಂ ಮೊರೆ ಹೋದ ಪತ್ನಿ: ವಿವಾಹೇತರ ಸಂಬಂಧದ ಆರೋಪ

ಶಮಿ ವರದಕ್ಷಿಣೆ ನೀಡುವಂತೆ ಒತ್ತಾಯಿಸುತ್ತಿದ್ದರು. ಅವರು ನಿರಂತರವಾಗಿ ವಿವಾಹೇತರ ಅಕ್ರಮ ಸಂಬಂಧಗಳಲ್ಲಿ ತೊಡಗಿದ್ದಾರೆ ಎಂದು ಹಸೀನ್ ಜಹಾನ್ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ವಿವರಿಸಿದ್ದಾರೆ.
Hasin Jahan, Mohammad Shami and Supreme Court
Hasin Jahan, Mohammad Shami and Supreme Court

ವರದಕ್ಷಿಣೆ ಬೇಡಿಕೆ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಮೊಹಮ್ಮದ್‌ ಶಮಿ ವಿರುದ್ಧ ನಡೆಯುತ್ತಿದ್ದ ಕ್ರಿಮಿನಲ್‌ ವಿಚಾರಣೆ ಪುನರಾರಂಭಿಸಬೇಕು ಮತ್ತು ಕ್ರಿಕೆಟಿಗನ ಬಂಧನಕ್ಕೆ ಸೆಷನ್ಸ್‌ ನ್ಯಾಯಾಲಯ ವಿಧಿಸಿದ್ದ ತಡೆಯಾಜ್ಞೆ ಹಿಂಪಡೆಯುವಂತೆ ಭಾರತೀಯ ಕ್ರಿಕೆಟಿಗ ಮೊಹಮ್ಮದ್‌ ಶಮಿ ಅವರಿಂದ ಬೇರೆಯಾಗಿ ವಾಸಿಸುತ್ತಿರುವ ಅವರ ಪತ್ನಿ ಹಸೀನ್‌ ಜಹಾನ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಶಮಿ ವರದಕ್ಷಿಣೆ ನೀಡುವಂತೆ ಒತ್ತಾಯಿಸುತ್ತಿದ್ದರು, ಅವರು ನಿರಂತರವಾಗಿ ವಿವಾಹೇತರ ಅಕ್ರಮ ಸಂಬಂಧಗಳಲ್ಲಿ ತೊಡಗಿದ್ದಾರೆ ಎಂದು ಹಸೀನ್ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ವಿವರಿಸಿದ್ದಾರೆ.

ಈ ವರ್ಷ ಜನವರಿಯಲ್ಲಿ ಕೊಲ್ಕತ್ತಾ ನ್ಯಾಯಾಲಯವು ಶಮಿ ಅವರು ಹಸೀನ್‌ ಅವರಿಗೆ ಮಾಸಿಕ ₹ 50,000 ಜೀವನಾಂಶ ನೀಡಬೇಕು ಎಂದು ಆದೇಶಿಸಿತ್ತು. ಶಮಿ ವಿರುದ್ಧ ಹೊರಡಿಸಿದ್ದ ಬಂಧನ ವಾರಂಟ್‌ಗೆ 2019ರಲ್ಲಿ ಪಶ್ಚಿಮ ಬಂಗಾಳದ ಸೆಷನ್ಸ್ ನ್ಯಾಯಾಲಯ ತಡೆ ನೀಡಿತ್ತು. ಅಲ್ಲದೆ ಶಮಿ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನೂ ಸ್ಥಗಿತಗೊಳಿಸಿತ್ತು

ಇದನ್ನು ಪ್ರಶ್ನಿಸಿ ಜಹಾನ್‌ ಕಲ್ಕತ್ತಾ ಹೈಕೋರ್ಟ್‌ ಮೊರೆ ಹೋಗಿದ್ದರು. ಅವರ ಮನವಿಯನ್ನು ಉಚ್ಚ ನ್ಯಾಯಾಲಯ ವಜಾಗೊಳಿಸಿದ್ದರಿಂದ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ಬಿಸಿಸಿಐ ಪ್ರವಾಸದ ವೇಳೆ, ಹೋಟೆಲ್‌ಗಳಲ್ಲಿ ಶಮಿ ವೇಶ್ಯೆಯರೊಂದಿಗೆ ಸಂಬಂಧ ಹೊಂದಿದ್ದರು. ವೇಶ್ಯೆಯರೊಂದಿಗಿನ ಒಡನಾಟಕ್ಕಾಗಿ ಶಮಿ ಎರಡನೇ ಮೊಬೈಲ್‌ ಫೋನ್‌ ಬಳಸುತ್ತಿದ್ದು ಈಗ ಅದು ಪೊಲೀಸರ ವಶದಲ್ಲಿದೆ. ಇಷ್ಟಾದರೂ ವೇಶ್ಯೆಯರೊಂದಿಗಿನ ಅವರ ನಂಟು ಮುಂದುವರೆದಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕಳೆದ 4 ವರ್ಷಗಳಿಂದ ವಿಚಾರಣೆ ಪ್ರಗತಿಯಾಗಿಲ್ಲ. ಅದನ್ನು ತಡೆ ಹಿಡಿಯಲಾಗಿದೆ. ಜೊತೆಗೆ ಶಮಿ ವಿಚಾರಣಾ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Kannada Bar & Bench
kannada.barandbench.com