ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಬೇಸತ್ತು ಪತ್ನಿಯು ಪತಿಯ ಮನೆ ಬಿಟ್ಟು ಹೋದ ಸಂದರ್ಭದಲ್ಲಿ ಸ್ವಇಚ್ಛೆಯಿಂದ ಅಥವಾ ಪರಸ್ಪರ ಸಮ್ಮತಿಯ ಮೇರೆಗೆ ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ ಎಂದು ಪ್ರತಿಪಾದಿಸಲು ಪತಿಗೆ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಅಭಿಪ್ರಾಯಪಟ್ಟಿದೆ.
ಜೀವನಾಂಶ ಕೋರಿ ಪತ್ನಿ ಸಲ್ಲಿಸಿರುವ ಮನವಿಯ ಕುರಿತು ದೊಡ್ಡಬಳ್ಳಾಪುರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ತಮಿಳುನಾಡಿನ ಕೊಯಮತ್ತೂರಿನ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಮೇಲಿನಂತೆ ಹೇಳಿದೆ.
“ಪತಿ ಮತ್ತು ಆತನ ತಾಯಿ ಕಿರುಕುಳ ನೀಡಿದ್ದು, ತಾಯಿಯ ಸೂಚನೆ ಮೇರೆಗೆ ಪತಿ ಮನೆಯಿಂದ ಹೊರಹಾಕಿದ್ದಾರೆ. ಕಿರುಕುಳ ತಾಳಲಾರದೆ ಪತಿಯ ಮನೆ ತೊರೆದು ಬೇರೊಂದು ಮನೆಯಲ್ಲಿ ವಾಸಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಮಹಿಳೆ ಹೇಳಿದ್ದಾರೆ. ಹೀಗಿರುವಾಗ ಪರಸ್ಪರ ಒಪ್ಪಂದದ ಮೇರೆಗೆ ಪತ್ನಿಯು ಮನೆ ತೊರೆದು ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಆದ್ದರಿಂದ, ಜೀವನಾಂಶ ಕೋರಿ ಆಕೆ ಸಲ್ಲಿಸಿರುವ ಅರ್ಜಿ ವಿಚಾರಣಾ ಮಾನ್ಯತೆ ಹೊಂದಿಲ್ಲ ಎಂಬ ಪತಿಯ ವಾದವನ್ನು ಒಪ್ಪಲಾಗದು” ಎಂದು ಪೀಠವು ಅರ್ಜಿ ವಜಾ ಮಾಡಿದೆ.
2016ರ ನವೆಂಬರ್ 1ರಂದು ವಿವಾಹವಾಗಿದ್ದ ದಂಪತಿಯ ನಡುವೆ ಭಿನ್ನಾಭಿಪ್ರಾಯ ಮೂಡಿ ವೈವಾಹಿಕ ಸಂಬಂಧದಲ್ಲಿ ಬಿರುಕುಂಟಾಗಿತ್ತು. ಇದರಿಂದ, ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ, ಉದ್ದೇಶಪೂರ್ವಕವಾಗಿ ಅಪಮಾನಿಸಿದ ಆರೋಪದಲ್ಲಿ ಪತ್ನಿ 2020ರ ಡಿಸೆಂಬ್ 7ರಂದು ದೂರು ದಾಖಲಿಸಿದ್ದರು. ಈ ನಡುವೆ ಜೀವನಾಂಶ ಕೋರಿ ದೊಡ್ಡಬಳ್ಳಾಪುರ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು.
ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಪತಿಯು ಸ್ವಇಚ್ಛೆಯಿಂದ ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ. ಅಪರಾಧ ದಂಡಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 125(4)ರ ಪ್ರಕಾರ ದಂಪತಿ ಪರಸ್ಪರ ಸಮ್ಮತಿಯ ಮೇರೆಗೆ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಂತಹ ಸಂದರ್ಭದಲ್ಲಿ ಪತ್ನಿ ಜೀವನಾಂಶ ಪಡೆಯಲು ಅರ್ಹವಾಗುವುದಿಲ್ಲ. ಆದ್ದರಿಂದ, ಪತ್ನಿ ಸಲ್ಲಿಸಿರುವ ಅರ್ಜಿ ಕುರಿತ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿದ್ದರು. ಈಗ ಈ ಮನವಿಯನ್ನು ಪೀಠ ವಜಾ ಮಾಡಿದೆ.