ತಾನು ಆತ್ಮಹತ್ಯೆಗೆ ಪ್ರಯತ್ನಿಸಲು ಪತಿ ಕಾರಣ ಎಂದು ಪತ್ನಿ ಆರೋಪಿಸುವುದು ಕ್ರೌರ್ಯ: ದೆಹಲಿ ಹೈಕೋರ್ಟ್

ಇಂತಹ ನಡೆಯಿಂದಾಗಿ, ಪತಿ ಮತ್ತು ಆತನ ಕುಟುಂಬ ಸುಳ್ಳು ಪ್ರಕರಣಗಳಲ್ಲಿ ಸಿಲುಕುವ ನಿರಂತರ ಬೆದರಿಕೆಗೆ ತುತ್ತಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವಿಚ್ಛೇದನ
ವಿಚ್ಛೇದನ

ಹೆಂಡತಿ ಆತ್ಮಹತ್ಯೆಗೆ ಯತ್ನಿಸಿ ಅದಕ್ಕೆ ತನ್ನ ಪತಿ ಮತ್ತು ಅತ್ತೆ ಕಾರಣ ಎಂದು ಆರೋಪಿಸುವುದು ಅತ್ಯಂತ ಕ್ರೌರ್ಯದ ಕೃತ್ಯವಾಗಿದ್ದು ಇದನ್ನು ಆಧರಿಸಿ ವಿಚ್ಛೇದನ ನೀಡಬಹುದು ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.

ಇಂತಹ ನಡೆಯಿಂದಾಗಿ, ಪತಿ ಮತ್ತು ಆತನ ಕುಟುಂಬ ಸುಳ್ಳು ಪ್ರಕರಣಗಳಲ್ಲಿ ಸಿಲುಕುವ ನಿರಂತರ ಬೆದರಿಕೆಗೆ ತುತ್ತಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ನೀನಾ ಬನ್ಸಾಲ್ ಕೃಷ್ಣ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ಆದ್ದರಿಂದ, ಕ್ರೌರ್ಯದ ಆಧಾರದ ಮೇಲೆ ಪತಿಗೆ ವಿಚ್ಛೇದನ ನೀಡಿದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಪೀಠ ತಿರಸ್ಕರಿಸಿತು.

ದಂಪತಿ 2007ರಲ್ಲಿ ವಿವಾಹವಾಗಿದ್ದರು. ಅವರಿಗೊಂದು ಮಗುವೂ ಜನಿಸಿತ್ತು. ಆದರೆ ಮದುವೆಯಾದ ಕೇವಲ ನಾಲ್ಕು ತಿಂಗಳಲ್ಲಿ ಪತ್ನಿ ವೈವಾಹಿಕ ಗೃಹ ತೊರೆದಳು ಎಂದು ಪತಿ ಆರೋಪಿಸಿದ್ದರು.

ಮದುವೆ ವೇಳೆ ಭಾರಿ ಪ್ರಮಾಣದ ವರದಕ್ಷಿಣೆ ನೀಡಲಾಗಿದ್ದು ಗಂಡನ ಪೋಷಕರು ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ಪತ್ನಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. 2009ರ ಡಿಸೆಂಬರ್‌ನಲ್ಲಿ ಆಕೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ತನಗೆ ಆತ್ಮಹತ್ಯೆ ಪತ್ರವನ್ನು ಬರೆಯಲು ಒತ್ತಾಯಿಸಲಾಯಿತು ಎಂದು ಪತ್ನಿ ಪಾಟಿ ಸಾವಲಿನ ವೇಳೆ ಹೇಳಿಕೊಂಡಿದ್ದರೂ, ಆತ್ಮಹತ್ಯೆಗೆ ತಾನು ಯತ್ನಿಸಿದಾಗ ಪತಿ ಮನೆಯಲ್ಲಿರಲಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾಳೆ ಎಂಬ ಅಂಶವನ್ನು ಪೀಠ ಗಮನಿಸಿತು.

ಪತಿಯ ವಿರುದ್ಧ ಪತ್ನಿ ಹಲವು ದೂರುಗಳನ್ನು ದಾಖಲಿಸಿದ್ದು ಗಂಡನ ಮನೆ ಕಡೆಯವರು ಅನೇಕ ಪ್ರಕರಣಗಳಲ್ಲಿ ಖುಲಾಸೆಗೊಂಡರೂ ಅವರನ್ನು ಜೈಲಿಗೆ ತಳ್ಳುವುದಕ್ಕಾಗಿ ಪತ್ನಿ ಮೇಲ್ಮನವಿಗಳನ್ನು ಸಲ್ಲಿಸುತ್ತಲೇ ಇದ್ದರು ಎಂದು ಅದು ಹೇಳಿದೆ.

"ತನ್ನ ವಿರುದ್ಧ ಎಸಗಿರುವ ತಪ್ಪುಗಳ ಬಗ್ಗೆ ಕ್ರಮ ಕೈಗೊಳ್ಳಲು ಕಾನೂನುಬದ್ಧ ಹಕ್ಕು ಮೇಲ್ಮನವಿದಾರೆಗೆ ಇದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ ಪ್ರತಿವಾದಿ ಅಥವಾ ಆತನ ಕುಟುಂಬ ಸದಸ್ಯರು ವರದಕ್ಷಿಣೆ ಬೇಡಿಕೆ ಇಟ್ಟಿದ್ದಾರೆ ಅಥವಾ ತಾನು ಕ್ರೌರ್ಯದ ಕೃತ್ಯಗಳಿಗೆ ತುತ್ತಾಗಿದ್ದೇನೆ ಎಂದು ಆಧಾರರಹಿತ ಆರೋಪ ಮಾಡುವುದು ಮತ್ತು ಪ್ರತಿವಾದಿಯ ವಿರುದ್ಧ ಕ್ರಿಮಿನಲ್ ಪ್ರಕರಣ ಹೂಡುವುದು ಸ್ಪಷ್ಟವಾಗಿ ಕ್ರೌರ್ಯದ ಕೃತ್ಯ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಸಕ್ತ ಪ್ರಕರಣದಲ್ಲಿ ಎರಡು ವರ್ಷದ ವೈವಾಹಿಕ ಜೀವನದಲ್ಲಿ ಹತ್ತು ತಿಂಗಳು ಕೂಡ ಒಟ್ಟಿಗೆ ವಾಸಿಸದಿದ್ದರೂ ಪತಿಯ ವಿರುದ್ಧ ಪತ್ನಿ ವಿವಿಧ ರೀತಿಯ ಸಿವಿಲ್‌ ಮತ್ತು ಕ್ರಿಮಿನಲ್‌ ಮೊಕದ್ದಮೆ ಹೂಡುವ ಮೂಲಕ ಕ್ರೌರ್ಯ ಎಸಗಿದ್ದಾರೆ ಎಂದು ನ್ಯಾಯಾಲಯ ಹೇಳಿತು. ಹಾಗಾಗಿ ಕೌಟುಂಬಿಕ ನ್ಯಾಯಾಲಯವು ಪತ್ನಿ ಎಸಗಿರುವ ಕ್ರೌರ್ಯದ ಆಧಾರದಲ್ಲಿ ಪತಿಗೆ ವಿಚ್ಛೇದನಕ್ಕೆ ಒಪ್ಪಿಗೆ ನೀಡಿರುವುದು ಸರಿ ಇದೆ ಎಂದು ನ್ಯಾಯಾಲಯವು ಅಂತಿಮವಾಗಿ ಎತ್ತಿಹಿಡಿಯಿತು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Attachment
PDF
Judgement.pdf
Preview
Kannada Bar & Bench
kannada.barandbench.com