ಸೂರ್ಯನಗರದಲ್ಲಿ 4ನೇ ಹಂತದ ವಸತಿ ಯೋಜನೆ: 1,938 ಎಕರೆ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಿದ ಹೈಕೋರ್ಟ್‌

ಇಡೀ ಯೋಜನೆ ಇಲ್ಲಿನ ಪರಿಸರ, ಪರಿಸರ ಮತ್ತು ವನ್ಯಜೀವಿಗೆ ಸಂಬಂಧಿಸಿದ ಜೀವಜಂತುಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ.
ಸೂರ್ಯನಗರದಲ್ಲಿ 4ನೇ ಹಂತದ ವಸತಿ ಯೋಜನೆ: 1,938 ಎಕರೆ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಿದ ಹೈಕೋರ್ಟ್‌
Published on

ಬೆಂಗಳೂರಿನ ಸೂರ್ಯನಗರ 4ನೇ ಹಂತದ ವಸತಿ ಯೋಜನೆಗಾಗಿ ಆನೇಕಲ್ ತಾಲ್ಲೂಕಿನಲ್ಲಿ ಕರ್ನಾಟಕ ವಸತಿ ಮಂಡಳಿ ಕೈಗೊಂಡಿದ್ದ 1,938.13 ಎಕರೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿ ಈಚೆಗೆ ಮಹತ್ವದ ತೀರ್ಪು ನೀಡಿದೆ.

ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಕೋನಸಂದ್ರ ಗ್ರಾಮದ ಆರ್‌ ಗೋವಿಂದ ರೆಡ್ಡಿ ಸೇರಿದಂತೆ ಇತರರು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್‌ ಮತ್ತು ನ್ಯಾಯಮೂರ್ತಿ ಎಚ್‌ ಶಾಂತಿಭೂಷಣ್‌ ಅವರ ವಿಭಾಗೀಯ ಪೀಠ ಪ್ರಕಟಿಸಿದೆ.

“ಯೋಜನೆಯು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ 268.96 ಚದರ ಕಿ ಮೀ ಪರಿಸರದ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಬರುತ್ತದೆ. ಇಡೀ ಯೋಜನೆ ಇಲ್ಲಿನ ಪರಿಸರ, ಪರಿಸರ ಮತ್ತು ವನ್ಯಜೀವಿಗೆ ಸಂಬಂಧಿಸಿದ ಜೀವಜಂತುಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ” ಎಂದು ಪೀಠ ಆತಂಕ ವ್ಯಕ್ತಪಡಿಸಿದೆ.

“ಭೂ ಸ್ವಾಧೀನದ ಉದ್ದೇಶವು ಸಾರ್ವಜನಿಕ ಹಿತದೃಷ್ಟಿಯಿಂದ ನಡೆಯಬೇಕು ಮತ್ತು ಸಾರ್ವಜನಿಕ ಉದ್ದೇಶದ ವ್ಯಾಪ್ತಿಗೆ ಬರುವ ವಿವಿಧ ಯೋಜನೆಗಳಿಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು. ಆದರೆ, ಯಾವುದೇ ಸಾರ್ವಜನಿಕ ಉದ್ದೇಶವು ಪರಿಸರ ಮತ್ತು ಪರಿಸರ ಸಂರಕ್ಷಣೆಯ ಉದ್ದೇಶವನ್ನು ಮೀರಿಸಲು ಸಾಧ್ಯವಿಲ್ಲ” ಎಂದು ಪೀಠ ಖಂಡತುಂಡವಾಗಿ ನುಡಿದಿದೆ.

“ಅಭಿವೃದ್ಧಿ ಮತ್ತು ನಗರೀಕರಣವನ್ನು ಪ್ರೋತ್ಸಾಹಿಸುವುದು ಎಷ್ಟು ಮುಖ್ಯವೋ, ಪರಿಸರ ಮತ್ತು ಅದಕ್ಕೆ ಆಧಾರಿತವಾದ ಹಿತಾಸಕ್ತಿಗಳನ್ನು ಸಮತೋಲನದಲ್ಲಿ ಇರಿಸಿಕೊಂಡೇ ಮುನ್ನಡೆಯಬೇಕು. ಪ್ರಸ್ತಾವಿತ ಸೂರ್ಯನಗರ ಯೋಜನೆಯು ಹಂಚಿಕೆದಾರರಿಗೆ ಮತ್ತು ಸಾರ್ವಜನಿಕರಿಗೆ ಕೈಗೆಟುಕುವ ಹಾಗೂ ಯೋಜಿತ ವಸತಿ ಫ್ಲ್ಯಾಟ್‌ಗಳನ್ನು ನೀಡುವ ಗುರಿಯನ್ನು ಹೊಂದಿರುವುದೇನೊ ಸರಿ. ಆದರೆ, ಇಂತಹ ಒಂದು ಯೋಜನೆಯನ್ನು ವನ್ಯಜೀವಿಗಳನ್ನು ಸ್ಥಳಾಂತರಿಸುವ ಮೂಲಕ ಮತ್ತು ಅವುಗಳ ನೈಸರ್ಗಿಕ ಆವಾಸಸ್ಥಾನವನ್ನು ಕಸಿದುಕೊಳ್ಳುವ ಮೂಲಕ ನಡೆಸುತ್ತಿರುವುದು ದುರದೃಷ್ಟಕರ” ಎಂದು ಪೀಠ ಅಭಿಪ್ರಾಯಪಟ್ಟಿದೆ.

“ಮಾನವನ ಅಸ್ತಿತ್ವಕ್ಕೆ ವಸತಿ ಮಾತ್ರವೇ ಅಗತ್ಯವಲ್ಲ. ಪರಿಸರ ವಿಜ್ಞಾನ, ವನ್ಯಜೀವಿಗಳು, ಅರಣ್ಯ, ನೀರಿನ ಹೊಳೆಗಳು ಸೇರಿದಂತೆ ಅನೇಕ ಅಂಶಗಳು ಸಮಾನವಾಗಿ ಮುಖ್ಯವಾಗಿರುತ್ತವೆ. ಈ ನಿಟ್ಟಿನಲ್ಲಿ ಸಂಪೂರ್ಣ ಭೂಸ್ವಾಧೀನ ಪ್ರಕ್ರಿಯೆಯು, ಸಿಇಸಿ (ಕೇಂದ್ರೀಯ ಅಧಿಕಾರ ಸಮಿತಿ) ಗುರುತಿಸಿದಂತೆ ಪರಿಸರ ಪ್ರಭಾವದ ವೈಜ್ಞಾನಿಕ ಅಧ್ಯಯನ, ಮೌಲ್ಯಮಾಪನ, ಸಾಮಾಜಿಕ-ಪರಿಸರ ಅಂಶಗಳೂ ಸೇರಿದಂತೆ ಇತ್ಯಾದಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ನಡೆಸಲಾಗಿದೆ. ಆದ್ದರಿಂದ, ಭೂ ಸ್ವಾಧೀನ ಪ್ರಕ್ರಿಯೆಗಳನ್ನು ರದ್ದುಗೊಳಿಸಲಾಗಿದೆ” ಎಂದು ಪೀಠ ಆದೇಶಿಸಿದೆ.

ವಸತಿ ಬಡಾವಣೆ ನಿರ್ಮಾಣದ ಉದ್ದೇಶಕ್ಕಾಗಿ ಆನೇಕಲ್‌ ತಾಲ್ಲೂಕಿನ ಇಂಡಲವಾಡಿ, ಕೋನಸಂದ್ರ, ಕಾಡುಜಕ್ಕನಹಳ್ಳಿ, ಬಗ್ಗನದೊಡ್ಡಿ ಮತ್ತು ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ 2220 ಹಾಗೂ 2 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು; ಭೂ ಸ್ವಾಧೀನ ಕಾಯಿದೆ–1984ರ ಸೆಕ್ಷನ್‌ 4(1)ರ ಅಡಿಯಲ್ಲಿ 2013ರ ಅಕ್ಟೋಬರ್ 19ರಂದು ಪ್ರಾಥಮಿಕ ಅಧಿಸೂಚನೆ ಹಾಗೂ ಅಂತಿಮವಾಗಿ 2015ರಲ್ಲಿ ಮೂರು ಹಂತಗಳಲ್ಲಿ 1938.13 ಗುಂಟೆ ಜಮೀನಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು.

ಆನೆಗಳ ಕಾರಿಡಾರ್‌ಗೆ ಮಾರಕ

“ಈ ಪ್ರದೇಶವು ಆನೆಗಳ ಕಾರಿಡಾರ್‌ಗೆ ಸೇರಿದೆ. ಆನೆಗಳ ಕಾರಿಡಾರ್‌ಗಳು ಆನೆಗಳು ಮತ್ತು ಅವು ಅವಲಂಬಿಸಿರುವ ಪರಿಸರ ವ್ಯವಸ್ಥೆಗಳ ದೀರ್ಘಕಾಲೀನ ಸಂರಕ್ಷಣೆಗೆ ಅನಿವಾರ್ಯವಾಗಿವೆ. ಆದರೆ ಪ್ರಸ್ತಾವಿತ ಯೋಜನೆಯು ಅವುಗಳ ನೈಸರ್ಗಿಕ ಆವಾಸಸ್ಥಾನ ಮತ್ತು ಅಸ್ತಿತ್ವದ ಅತ್ಯಗತ್ಯ ಭಾಗವನ್ನು ಕಿತ್ತುಕೊಳ್ಳಲಿದೆ. ಆದ್ದರಿಂದ, ಈ ಕಾರಿಡಾರ್‌ಗಳ ಸಂರಕ್ಷಣೆ ಅಗತ್ಯವಿದೆ” ಎಂದು ಪೀಠ ಪ್ರತಿಪಾದಿಸಿದೆ.

“ಅಭಿವೃದ್ಧಿಯ ಒತ್ತಡಗಳು ಹೆಚ್ಚಿದಾಗ ವನ್ಯಜೀವಿಗಳ ಸಂರಕ್ಷಿತ ಪ್ರದೇಶಗಳನ್ನು ಇಂತಹ ಯೋಜನೆಗಳು ಹೆಚ್ಚೆಚ್ಚು ಪ್ರತ್ಯೇಕಿಸುತ್ತಾ ಹೋಗುತ್ತವೆ. ಆನೆ ಕಾರಿಡಾರ್‌ಗಳ ರಕ್ಷಣೆ ಎಂಬುದು ಕೇವಲ ನಿರ್ದಿಷ್ಟ ಸಂರಕ್ಷಣಾ ಕ್ರಮವಲ್ಲ. ಇದೊಂದು ಸಂ‍ಪೂರ್ಣ ಪರಿಸರ ಸ್ಥಿತಿಸ್ಥಾಪಕತ್ವದ ಪ್ರಶ್ನೆ. ಪರಸ್ಪರ ಸಂಬಂಧ ಹೊಂದಿರುವ ಅರಣ್ಯ ಪರಿಸರ ವ್ಯವಸ್ಥೆಗಳ ಸಮಗ್ರತೆಯನ್ನು ಕಾಪಾಡಿಕೊಳ್ಳುವ ವಿಶಾಲ ಉದ್ದೇಶವನ್ನು ನಾವು ಯಾವತ್ತೂ ಮರೆಯಬಾರದು. ಈ ಅರ್ಥದಲ್ಲಿ, ಆನೆಗಳ ಸಂಚಾರನ್ನು ರಕ್ಷಿಸಿ ಪರಿಸರದ ಅಮೂಲ್ಯ ಸಂರಚನೆಯನ್ನು ಉಳಿಸಿಕೊಳ್ಳುವುದು ಮುಖ್ಯವಾಗುತ್ತದೆ” ಎಂದು ಪೀಠ ಹೇಳಿದೆ.

Attachment
PDF
R Govinda Reddy & others Vs State of Karnataka
Preview
Kannada Bar & Bench
kannada.barandbench.com