ಏಷ್ಯನ್ ನ್ಯೂಸ್ ಇಂಟರ್‌ನ್ಯಾಷನಲ್ (ಎಎನ್‌ಐ) ಸುದ್ದಿ ಸಂಸ್ಥೆಯ ವಿಕಿಪೀಡಿಯ ಪುಟದಲ್ಲಿ ಅದಕ್ಕೆ ಸಂಬಂಧಿಸಿದಂತೆ ಮಾನಹಾನಿಕರ ವಿಚಾರಗಳನ್ನು ಹಂಚಿಕೊಂಡವರ ಮಾಹಿತಿ ನೀಡುವಂತೆ ತಾನು ನೀಡಿದ್ದ ಆದೇಶ ಪಾಲಿಸದ ವಿಕಿಪೀಡಿಯಾಗೆ ದೆಹಲಿ ಹೈಕೋರ್ಟ್ ಗುರುವಾರ ನ್ಯಾಯಾಂಗ ನಿಂದನೆ ನೋಟಿಸ್ ನೀಡಿದೆ.
ವಿಕಿಪೀಡಿಯ ನಡೆಗೆ ನ್ಯಾಯಮೂರ್ತಿ ನವೀನ್ ಚಾವ್ಲಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. “ನ್ಯಾಯಾಂಗ ನಿಂದನೆ ಆದೇಶ ನೀಡಲಾಗುತ್ತಿದೆ. ನಿಮ್ಮ ವ್ಯಾಪಾರ ವಹಿವಾಟುಗಳನ್ನು ನಿರ್ಬಂಧಿಸುವಂತೆ ಸರ್ಕಾರಕ್ಕೆ ಹೇಳಬೇಕಾದೀತು. ನೀವು ಈ ಮೊದಲುಸಹ ಇದೇ ರೀತಿಯ ವಾದ ಮಂಡಿಸಿದ್ದಿರಿ. ನಿಮಗೆ ಭಾರತ ಇಷ್ಟವಾಗದಿದ್ದರೆ, ದಯವಿಟ್ಟು ಭಾರತದಲ್ಲಿ ಕೆಲಸ ಮಾಡಬೇಡಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೆ ವಿಕಿಪೀಡಿಯಾದ ಅಧಿಕೃತ ಪ್ರತಿನಿಧಿಯೊಬ್ಬರು ಮುಂದಿನ ವಿಚಾರಣೆ ನಡೆಯಲಿರುವ ಅಕ್ಟೋಬರ್ 25ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಿರಬೇಕೆಂದು ಪೀಠ ತಾಕೀತು ಮಾಡಿತು.
ವಿಕಿಪೀಡಿಯಾದಲ್ಲಿ ಯಾರು ಬೇಕಾದರೂ ಮಾಹಿತಿಯನ್ನು ಸಂಕಲಿಸಲು ಅವಕಾಶವಿದ್ದು ಎಎನ್‌ಐಯನ್ನು ಸರ್ಕಾರದ ಪರವಾಗಿ ಪ್ರಚಾರ ನಡೆಸುವ ಸಾಧನ ಎಂದು ಸಂಸ್ಥೆಯ ವಿಕಿಪೀಡಿಯ ಪುಟದಲ್ಲಿ ಬರೆಯಲಾಗಿತ್ತು.
ಹಿಂದಿನ ವಿಚಾರಣೆ ವೇಳೆ ವಿಕಿಪೀಡಿಯಾಕ್ಕೆ ಸಮನ್ಸ್ ನೀಡಿದ್ದ ಹೈಕೋರ್ಟ್ ಎಎನ್‌ಐಗೆ ಸಂಬಂಧಿಸಿದ ಪುಟದಲ್ಲಿ ಆಕ್ಷೇಪಾರ್ಹ ಮಾಹಿತಿ ಸೇರಿಸಿದವರು ಯಾರು ಎಂಬ ವಿವರ ಒದಗಿಸುವಂತೆ ಸೂಚಿಸಿತ್ತು. ಆದರೆ ಈ ಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ಎಎನ್‌ಐ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.
ವಿಕಿಪೀಡಿಯಾದ ಕಚೇರಿ ಭಾರತದಲ್ಲಿ ಇಲ್ಲವಾದ್ದರಿಂದ ವಾದ ಮಂಡಿಸಲು ಕಾಲಾವಕಾಶ ನೀಡುವಂತೆ ವಕೀಲರು ಕೋರಿದರು. ಆದರೆ ಹಿಂದಿನ ಪ್ರಕರಣಗಳಲ್ಲಿ ವಿಕಿಪೀಡಿಯಾದ ಈ ವಾದವನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದ ನ್ಯಾ. ಚಾವ್ಲಾ ವಿಕಿಪೀಡಿಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದ ದಾಖಲಿಸಲಾಗುವುದು ಎಂದಿತು.