ನ್ಯಾಯಮಂಡಳಿಗಳು, ಅವುಗಳ ಕಾರ್ಯವೈಖರಿ ಹಾಗೂ ನೇಮಕಾತಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ವಿಶೇಷ ಪೀಠ ಸ್ಥಾಪಿಸುವ ಬಗ್ಗೆ ಚಿಂತಿಸುತ್ತಿರುವುದಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ವಿ ರಮಣ ಸೋಮವಾರ ಹೇಳಿದ್ದಾರೆ. [ಮದ್ರಾಸ್ ವಕೀಲರ ಸಂಘ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ದೂರಸಂಪರ್ಕ ವ್ಯಾಜ್ಯ ಪರಿಹಾರ ಮತ್ತು ಮೇಲ್ಮನವಿ ನ್ಯಾಯಮಂಡಳಿಯ (ಟಿಡಿಎಸ್‌ಎಟಿ) ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದ ಪ್ರಕರಣವನ್ನು ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ಪ್ರಸ್ತಾಪಿಸಿದ ಸಂದರ್ಭದಲ್ಲಿ ಸಿಜೆಐ ಈ ಹೇಳಿಕೆ ನೀಡಿದರು.
ನ್ಯಾಯಮಂಡಳಿ ನೇಮಕಾತಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾ. ಎಲ್ ನಾಗೇಶ್ವರ ರಾವ್ ನೇತೃತ್ವದ ಪೀಠದ ಮುಂದೆ ಪ್ರಕರಣವನ್ನು ಪಟ್ಟಿ ಮಾಡಬೇಕು ಎಂದು ಸಿಜೆಐ ಹೇಳಿದರು. "ನಾನು ಎಲ್ಲಾ ನ್ಯಾಯಮಂಡಳಿಗಳಿಗೆ ಸಂಬಂಧೀಸಿದ ಪ್ರಕರಣಗಳನ್ನು ಆಲಿಸಲು ಸಾಧ್ಯವಿಲ್ಲ. ಇದಕ್ಕಾಗಿ ವಿಶೇಷ ಪೀಠ ರಚಿಸಬೇಕಾಗಿದೆ" ಎಂದು ನ್ಯಾ. ರಮಣ ತಿಳಿಸಿದರು.
ನ್ಯಾಯಮಂಡಳಿಗಳಲ್ಲಿ ಖಾಲಿ ಹುದ್ದೆ ಎಂಬುದು ಸರ್ಕಾರ ಮತ್ತು ನ್ಯಾಯಾಲಯ ನಡುವಿನ ನಿರಂತರ ಘರ್ಷಣೆಗೆ ಕಾರಣವಾಗಿದೆ. ನ್ಯಾಯಮಂಡಳಿಗಳ ಕುರಿತ ಸರ್ಕಾರದ ಧೋರಣೆ ಬಗ್ಗೆ ಸಿಜೆಐ ನೇತೃತ್ವದ ಪೀಠ ಆಗಾಗ್ಗೆ ತರಾಟೆಗೆ ತೆಗೆದುಕೊಂಡಿದೆ.