ಹೊಸ ಕ್ರಿಮಿನಲ್‌ ಕಾನೂನುಗಳನ್ನು ಹಳೆಯ ಹೆಸರಿನಲ್ಲೇ ಕರೆಯುವೆ: ಮದ್ರಾಸ್ ಹೈಕೋರ್ಟ್‌ ನ್ಯಾಯಮೂರ್ತಿ ಆನಂದ್‌ ವೆಂಕಟೇಶ್

ಸಿಆರ್‌ಪಿಸಿ ಸೆಕ್ಷನ್ 460 ಮತ್ತು 473ರ ಅಡಿಯಲ್ಲಿ ಮಿತಿಯ ಅವಧಿಯನ್ನು ವಿಸ್ತರಿಸುವ ಮತ್ತು ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಳ್ಳುವ ಕುರಿತಂತೆ ನಡೆಯುತ್ತಿದ್ದ ವಿಚಾರಣೆ ವೇಳೆ ಅವರು ಲಘು ಧಾಟಿಯಲ್ಲಿ ಹೀಗೆ ಪ್ರತಿಕ್ರಿಯಿಸಿದರು.
ನ್ಯಾ. ಆನಂದ್ ವೆಂಕಟೇಶ್, ಮದ್ರಾಸ್ ಹೈಕೋರ್ಟ್
ನ್ಯಾ. ಆನಂದ್ ವೆಂಕಟೇಶ್, ಮದ್ರಾಸ್ ಹೈಕೋರ್ಟ್
Published on

ಹಿಂದಿ ನಿರರ್ಗಳವಾಗಿ ಮಾತನಾಡಲಾಗದ ಕಾರಣ ಭಾರತೀಯ ದಂಡ ಸಂಹಿತೆ (ಐಪಿಸಿ), ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಗಳನ್ನು ಈ ಹಿಂದಿನಂತೆಯೇ ಉಲ್ಲೇಖಿಸುವುದನ್ನು ಮುಂದುವರೆಸುವುದಾಗಿ ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿ ಆನಂದ್‌ ವೆಂಕಟೇಶ್‌ ಅವರು ಈಚೆಗೆ ಮುಕ್ತ ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಸಿಆರ್‌ಪಿಸಿ ಸೆಕ್ಷನ್ 460 ಮತ್ತು 473ರ ಅಡಿಯಲ್ಲಿ ಮಿತಿಯ ಅವಧಿಯನ್ನು ವಿಸ್ತರಿಸುವ ಮತ್ತು ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಳ್ಳುವ ಕುರಿತಂತೆ ನಡೆಯುತ್ತಿದ್ದ ವಿಚಾರಣೆ ವೇಳೆ ಅವರು ಲಘು ಧಾಟಿಯಲ್ಲಿ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಭಾರತೀಯ ದಂಡ ಸಂಹಿತೆ (ಐಪಿಸಿ) ಬದಲಿಗೆ ಭಾರತೀಯ ನ್ಯಾಯ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯಿದೆಯನ್ನು ಬದಲಿಸಲು ಭಾರತೀಯ ಸಾಕ್ಷ್ಯ ಅಧಿನಿಯಮಗಳಿಗೆ 2023 ರ ಡಿಸೆಂಬರ್ 25 ರಂದು ರಾಷ್ಟ್ರಪತಿಗಳ ಅನುಮೋದನೆ ದೊರೆತಿತ್ತು.

ವಾದ ಮಂಡನೆ ವೇಳೆ, ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ (ಎಪಿಪಿ) ಎ ದಾಮೋದರನ್ ಅವರು ʼಹೊಸ ಕಾಯಿದೆʼಯಲ್ಲಿನ ಸೆಕ್ಷನ್‌ ಅನ್ನು ನ್ಯಾಯಾಲಯದ ಗಮನಕ್ಕೆ ತಂದರು. ಆದರೆ ಸಿಆರ್‌ಪಿಸಿ ಸ್ಥಾನದಲ್ಲಿ ' ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ' ಎಂದು ಉಚ್ಚರಿಸುವಾಗ ತೊಡಕು ಎದುರಿಸಿದರು.

ಆಗ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ವೆಂಕಟೇಶ್, ಎಪಿಪಿ ದಾಮೋದರನ್ ಅವರು ಹಿಂದಿ ಪದಗಳನ್ನು "ಹೊಸ ಕಾಯಿದೆ" ಎಂದು ಉಲ್ಲೇಖಿಸುವ ಮೂಲಕ ಅವುಗಳನ್ನು ಉಚ್ಚರಿಸುವುದನ್ನು ಜಾಣತನದಿಂದ ತಪ್ಪಿಸಿದ್ದಾರೆ, ಆದರೆ ತನಗೆ (ನ್ಯಾ. ವೆಂಕಟೇಶ್ ಅವರಿಗೆ) ಹಿಂದಿ ಗೊತ್ತಿಲ್ಲದ ಕಾರಣ ಐಪಿಸಿ, ಸಿಆರ್‌ಪಿಸಿ ಮತ್ತು ಸಾಕ್ಷ್ಯ ಕಾಯಿದೆಯ ನಿಬಂಧನೆಗಳನ್ನು ಈ ಹಿಂದಿನ ಹೆಸರಿನಲ್ಲೇ ಉಲ್ಲೇಖಿಸುವುದನ್ನು ಮುಂದುವರಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.

"ಹೊಸ ಹೆಸರನ್ನು ಉಚ್ಚರಿಸಲು ನಾನು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದಾಗ ಅವರು (ನ್ಯಾ. ವೆಂಕಟೇಶ್) ಹಿಂದಿ ವಿಚಾರದಲ್ಲಿ ನಾವೆಲ್ಲರೂ ಒಂದೇ ದೋಣಿಯಲ್ಲಿ ಇರುವುದಾಗಿ ಹೇಳಿದರು" ಎಂಬುದಾಗಿ ದಾಮೋದರನ್‌ ತಿಳಿಸಿದರು.

Kannada Bar & Bench
kannada.barandbench.com